ಧಾರವಾಡದಲ್ಲಿ ಅಡುಗೆ ಅನಿಲ ಸೋರಿಕೆಯಿಂದಾದ ಸ್ಫೋಟದಲ್ಲಿ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದಾರೆ. ಇತ್ತ, ತಾಯಿಯ ಮಾತಿಗೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಹೊಸಪೇಟೆಯ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಭಾರೀ ಅನಾಹುತ ತಪ್ಪಿದೆ.
ಸಿಲಿಂಡರ್ ಸೋರಿಕೆಯಿಂದ ಸ್ಫೋಟ: 6 ಜನರಿಗೆ ಗಾಯ, ಓರ್ವ ಗಂಭೀರ
ಧಾರವಾಡ: ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿ ಮನೆಗೆ ಬೆಂಕಿ ತಗುಲಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ 6 ಜನರು ಗಾಯಗೊಂಡಿರುವ ಘಟನೆ ಧಾರವಾಡದ ಹೊಸಯಲ್ಲಾಪುರ ಸುಣ್ಣದ ಭಟ್ಟಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ನಗರ ನಿವಾಸಿ ಇಸ್ಮಾಯಿಲ್ ಹೊರಕೇರಿ ಎಂಬುವವರಿಗೆ ಸೇರಿದ ಮನೆಯಲ್ಲಿ ಬೆಳಗ್ಗೆ ಗ್ಯಾಸ್ ಹಚ್ಚಿದ್ದರಿಂದ ಸ್ಫೋಟ ಸಂಭವಿಸಿದ್ದು, ಕುಟುಂಬದ ಇನಾಯಾ (3), ಕೈಫ್ (7), ಅಮೀನಾ (26), ಇಸ್ಮಾಯಿಲ್ (35), ಜರೀನಾ (65) ಹಾಗೂ ಮಹಿರಾನ್ (13) ಅವರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 6 ಜನರ ಪೈಕಿ ಜರೀನಾ ಎಂಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಹೊಸ ವರ್ಷಕ್ಕೆ ಚೆನ್ನಾಗಿ ಕೆಲಸ ಮಾಡು ಎಂದಿದ್ದಕ್ಕೆ ವಿಷ ಕುಡಿದು ಪುತ್ರ ಸಾವು
‘ಹೊಸ ವರ್ಷಕ್ಕೆ ಚೆನ್ನಾಗಿ ಕೆಲಸ ಮಾಡಪಾ’ ಎಂದು ತಾಯಿ ಬುದ್ಧಿಮಾತು ಹೇಳಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ.
ಉಗರಖೋಡ ಗ್ರಾಮದ ನಿವಾಸಿ ಕಲ್ಮೇಶ್ ಕಾಜಗಾರ (24) ಮೃತ ಯುವಕ. ಡಿ.31ರ ರಾತ್ರಿ ಕಲ್ಮೇಶ್ ಅವರ ತಾಯಿ ಮಂಜುಳಾ ಅವರು‘ಹೊಸ ವರ್ಷದಿಂದಲಾದರೂ ಚೆನ್ನಾಗಿ ಕೆಲಸ ಮಾಡಿಕೊಂಡು ಬಾಳಪ್ಪಾ’ ಎಂದು ಕಿವಿಮಾತು ಹೇಳಿದ್ದರು. ಈ ಮಾತಿನಿಂದ ಮನನೊಂದ ಕಲ್ಮೇಶ, ತಕ್ಷಣವೇ ಮನೆಯಿಂದ ಹೋರಟು ಗ್ರಾಮದ ಸರ್ಕಾರಿ ಶಾಲೆ ಬಳಿ ಹೋಗಿ ಕೀಟನಾಶಕ ಕುಡದಿದ್ದ. ಕುಟುಂಬಸ್ಥರು ತಕ್ಷಣವೇ ಚಿಕಿತ್ಸೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಯಾಗದೆ ಕಲ್ಮೇಶ್ ಗುರುವಾರ ಕೊನೆಯುಸೆಳೆದಿದ್ದಾನೆ. ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋಗಿಲು ಲೇಔಟ್‌ನಲ್ಲಿ 167 ಮನೆಗಳು ನೆಲಸಮ: ಆದ್ರೆ ಹೊಸ ಫ್ಲ್ಯಾಟ್ ಪಡೆಯಲು 250 ಅರ್ಜಿ ಸಲ್ಲಿಕೆ!
ಹೊಸಪೇಟೆ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ
ಆಕಸ್ಮಿಕ ಅಗ್ನಿ ಅವಘಡದಿಂದ ಆಸ್ಪತ್ರೆಗೆ ಬೆಂಕಿ ತಗುಲಿದ್ದು, ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಬಸವೇಶ್ವರ ವೃತ್ತದಲ್ಲಿರುವ ಪುಣ್ಯಕೋಟಿ ಆಸ್ಪತ್ರೆಯಲ್ಲಿ ನಡೆದಿದೆ.
ನಗರದ ಪುಣ್ಯಕೋಟಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 7-30ರ ಸುಮಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿದೆ. ಆಸ್ಪತ್ರೆಯ 3ನೇ ಅಂತಸ್ತಿನ ಮೇಲ್ಭಾಗದಲ್ಲಿ ಹಳೆ ಕುರ್ಚಿ, ಚೇರು, ಬೆಡ್, ಬ್ಯಾಟರಿ, ಯುಪಿಎಸ್ ಸೇರಿದಂತೆ ಇನ್ನಿತರ ಸಾಮಗ್ರಿ ಇಡಲಾಗಿತ್ತು. ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್? ಪಠ್ಯದ ಜೊತೆ ರಾಜಕೀಯ ಪಾಠ? ಉನ್ನತ ಶಿಕ್ಷಣ ಸಚಿವರ ಸ್ಫೋಟಕ ಸುಳಿವು, ಹೇಳಿದ್ದೇನು?


