ದೆವ್ವ ಹಿಡಿದಿದೆ ಎಂಬ ನೆಪದಲ್ಲಿ ವಿವಾಹಿತ ಮಹಿಳೆ ಮುಕ್ತಾಬಾಯಿ (38) ಎಂಬಾಕೆಯನ್ನು ಅವಳ ಗಂಡನ ಸಹೋದರ ಸೇರಿ ಸಂಬಂಧಿಕರು ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ (ಡಿ.28): ದೆವ್ವ ಹಿಡಿದಿದೆ ಎಂಬ ನೆಪದಲ್ಲಿ ವಿವಾಹಿತ ಮಹಿಳೆ ಮುಕ್ತಾಬಾಯಿ (38) ಎಂಬಾಕೆಯನ್ನು ಅವಳ ಗಂಡನ ಸಹೋದರ ಸೇರಿ ಸಂಬಂಧಿಕರು ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೂಲತಃ ಆಳಂದದ ನಿವಾಸಿಯಾಗಿದ್ದ ಮುಕ್ತಾಬಾಯಿ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವರನ್ನು ಮದುವೆಯಾಗಿದ್ದರು. ಮುಕ್ತಾಬಾಯಿಗೆ ಕಳೆದ 4 ದಿನಗಳ ಹಿಂದೆ ತಲೆಸುತ್ತುವ ಆರೋಗ್ಯ ಸಮಸ್ಯೆ ಶುರುವಾಗಿತ್ತು. ತಲೆತಿರುಗಿ ಮನೆಯ ಬಳಿ ಬೀಳುವ ಸ್ಥಿತಿಯಲ್ಲಿದ್ದಾಗ, ಗಂಡನ ಸಹೋದರ ಮತ್ತು ಇತರ ಸಂಬಂಧಿಕರು ಮಹಿಳೆಗೆ ದೆವ್ವ ಹಿಡಿದಿದೆ ಎಂದು ಬೇವಿನ ಮರದ ಕಟ್ಟಿಗೆಯಿಂದ ರಾತ್ರಿ ಮತ್ತು ಮರುದಿನ ಬೆಳಗ್ಗೆ ಹೊಡೆದು ಹಿಂಸಿಸಿದರು.

ನಂತರ ಅವಳನ್ನು ಗಾಣಗಾಪುರದ ದತ್ತ ಸನ್ನಿಧಿಗೆ ಕರೆತರುವ ಸಿದ್ಧತೆಯಲ್ಲಿದ್ದಾಗ ಮುಕ್ತಾಬಾಯಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಗಂಡನ ಮನೆಯವರು ಅವಳ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಾಯಿ ಬಂದು ಮಗಳನ್ನು ಕಲಬುರಗಿಯ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಸರಣಿ ಕಳ್ಳತನ: ದೊಣ್ಣೆ ಹಿಡಿದು ಗ್ರಾಮ ಕಾಯುತ್ತಿರುವ ಜನರು!

ಕಳ್ಳರ ಹಾವಳಿಯಿಂದ ಆತಂಕಗೊಂಡಿರುವ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮಸ್ಥರು, ರಾತ್ರಿಯಿಡಿ ನಿದ್ದೆಗೆಟ್ಟು ಗಸ್ತು ತಿರುಗುತ್ತಿದ್ದಾರೆ. ಕೊರೆಯುವ ಚಳಿಯಲ್ಲೂ ಕಾವಲು ಕಾಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಮಾರನಬೀಡ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು, ರಾತ್ರಿ ವೇಳೆ ಕಳ್ಳರ ತಂಡವೊಂದು ಮಾರಕಾಸ್ತ್ರ ಹಿಡಿದು ಗ್ರಾಮದಲ್ಲಿ ಸಂಚರಿಸುತ್ತಿರುವುದು ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಇದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ನೆರವು ಸಿಗದ ಕಾರಣ, ತಮ್ಮ ಆಸ್ತಿಪಾಸ್ತಿಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ತಾವೇ ಗಸ್ತು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಕಳೆದ 8 ದಿನಗಳಿಂದಲೂ ರಾತ್ರಿಯಿಡೀ ಕೈಯಲ್ಲಿ ದೊಣ್ಣೆ ಹಿಡಿದು ಗ್ರಾಮಸ್ಥರು ಕಾವಲು ಕಾಯುತ್ತಿದ್ದಾರೆ. ಇತ್ತೀಚೆಗೆ ಮಾರನಬೀಡ ಗ್ರಾಮದ ಪಕ್ಕದ ಊರಲ್ಲೇ ಕಳ್ಳರ ವದಂತಿ ಹಬ್ಬಿತ್ತು, ಇದರಿಂದ ಮತ್ತಷ್ಟು ಆತಂಕಗೊಂಡ ಗ್ರಾಮಸ್ಥರು ರಾತ್ರಿಯಿಡೀ ಅಲ್ಲಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಂಡು ಕಾವಲು ಕಾಯುತ್ತಿದ್ದು, ಗ್ರಾಮದಲ್ಲಿ ಅಪರಿಚಿತರ ವಾಹನಗಳು ಕಂಡರೆ ಗ್ರಾಮಸ್ಥರು ತಪಾಸಣೆಗೆ ಒಳಪಡಿಸುತ್ತಿದ್ದಾರೆ.----

ಮಾರನಬೀಡ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ. ಗ್ರಾಮದಲ್ಲಿ ಮತ್ತೆ ಇಂತಹ ಘಟನೆಗಳು ನಡೆದರೆ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಗ್ರಾಮಸ್ಥರಿಗೆ ತಿಳಿಸಿದ್ದೇವೆ.
-ಲಕ್ಷ್ಮಣ ಶಿರಕೋಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾವೇರಿ.