ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ 167 ಮನೆ ತೆರವು ಕಾರ್ಯಾಚರಣೆ ಬಳಿಕ ಪರಿಹಾರಕ್ಕಾಗಿ 250ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ! ನಿಜವಾದ ಸಂತ್ರಸ್ತರು ಯಾರು? ಈ ಗೊಂದಲದ ಸಂಪೂರ್ಣ ವರದಿ ಓದಿ.
ಬೆಂಗಳೂರು (ಜ.02): ರಾಜಧಾನಿಯ ಕೋಗಿಲು ಲೇಔಟ್‌ನಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ಇದೀಗ ಹೊಸದೊಂದು ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಲಾಗಿದೆ ಎಂಬ ಕಾರಣಕ್ಕೆ ಸರ್ಕಾರ ಒಟ್ಟು 167 ಮನೆಗಳನ್ನು ನೆಲಸಮಗೊಳಿಸಿತ್ತು. ಆದರೆ, ಈಗ ಪರಿಹಾರವಾಗಿ ಹೊಸ ಮನೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 250 ದಾಟಿದ್ದು, ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಅರ್ಜಿಗಳ ಸುರಿಮಳೆ - ಅರ್ಹರ ಪತ್ತೆ ಹೇಗೆ?
ಸರ್ಕಾರ ತೆರವುಗೊಳಿಸಿದ್ದು ಕೇವಲ 167 ಮನೆಗಳನ್ನು ಮಾತ್ರ. ಆದರೆ ಹೊಸ ಮನೆಗಾಗಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿರುವುದು ನೈಜವಾಗಿ ಮನೆ ಕಳೆದುಕೊಂಡವರಲ್ಲಿ ಆತಂಕ ಮೂಡಿಸಿದೆ. 'ನಾವು ಮನೆ ಕಳೆದುಕೊಂಡವರು ಕೇವಲ 167 ಕುಟುಂಬಗಳು, ಹಾಗಿದ್ದರೆ ಈ ಉಳಿದ 80ಕ್ಕೂ ಹೆಚ್ಚು ಅರ್ಜಿಗಳು ಯಾರದ್ದು? ಕಿಡಿಗೇಡಿಗಳು ಪರಿಹಾರ ಪಡೆಯಲು ಸುಳ್ಳು ಅರ್ಜಿ ಸಲ್ಲಿಸಿದ್ದಾರೆಯೇ?' ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಗೊಂದಲದಿಂದಾಗಿ ನಿಜವಾದ ಸಂತ್ರಸ್ತರಿಗೆ ಮನೆ ಸಿಗುತ್ತದೆಯೇ ಎಂಬ ಆತಂಕ ಶುರುವಾಗಿದೆ.
ಪೊಲೀಸ್ ಬಂದೋಬಸ್ತ್ ಮತ್ತು ಬಿಗಿ ಭದ್ರತೆ
ಈ ಗೊಂದಲದ ನಡುವೆ ಲೇಔಟ್‌ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ಥಳದಲ್ಲಿ ಸುಮಾರು 25ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪೊಲೀಸರು ಕಾಲಕಾಲಕ್ಕೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಸಂತ್ರಸ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಸರ್ಕಾರದ ಮುಂದಿನ ನಡೆಯೇನು?
ಹೆಚ್ಚುವರಿಯಾಗಿ ಬಂದಿರುವ ಅರ್ಜಿಗಳ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನೈಜವಾಗಿ ಮನೆ ಕಳೆದುಕೊಂಡವರನ್ನು ಗುರುತಿಸುವ ಸವಾಲು ಅಧಿಕಾರಿಗಳ ಮುಂದಿದೆ. ಅಲ್ಲಿಯವರೆಗೆ ಕೋಗಿಲು ಲೇಔಟ್‌ನ ಜನತೆ ಅನಿಶ್ಚಿತತೆಯಲ್ಲೇ ಕಾಲ ಕಳೆಯುವಂತಾಗಿದೆ.
ಜ.2ಕ್ಕೆ ಮನೆ ಕೊಡ್ತೀವಿ ಅಂದವರಿಗೆ ದಾಖಲೆಗಳೇ ಸಿಗ್ತಿಲ್ಲ:
ಕೋಗಿಲು ಬಡಾವಣೆಯಲ್ಲಿ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿದ ನಂತರ ಕೇರಳ ಸರ್ಕಾರ ಹಾಗೂ ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರದಿಂದ ಅಕ್ರಮ ನಿವಾಸಿಗಳ ಪೈಕಿ ಅರ್ಹರನ್ನು ಹುಡುಕಿ ಅವರಿಗೆ ರಾಜ್ಯ ಸರ್ಕಾರದ ವಸತಿ ಇಲಾಖೆಯಿಂದ ನಿರ್ಮಿಸಲಾದ ಬಹುಮಹಡಿ ಕಟ್ಟಡದಲ್ಲಿ ಜ.2ರಂದು ಒಂದು ಫ್ಲ್ಯಾಟ್ (ಒಂದು ಮಹಡಿ ಮನೆ) ಕೊಡುವುದಾಗಿ ಘೋಷಣೆ ಮಾಡಿದ್ದರು.
ಆದರೆ, ಫಲಾನುಭವಿಗಳನ್ನು ಹುಡುಕುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಸಮೀಕ್ಷೆ ಮಾಡಿ ಮಾಹಿತಿ ದಾಖಲಿಸಿಕೊಳ್ಳುತ್ತಾರೆ. ಆದರೆ, ಮನೆ ಹಂಚಿಕೆಗೆ ಬೇಕಾಗಿರುವ ಯಾವುದೇ ದಾಖಲೆಗಳು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರ ಬಳಿ ಇಲ್ಲವೇ ಇಲ್ಲ. ಹೀಗಾಗಿ, ಯಾವ ಆಧಾರದಲ್ಲಿ ಮನೆ ಕೊಡಬೇಕು ಎಂಬುದೇ ಗೊತ್ತಾಗದೇ ಜಿಬಿಎ ಅಧಿಕಾರಿಗಳು ಪರದಾಡುತ್ತಿದ್ದಾರೆ. ಇನ್ನು ಅಸ್ಪಷ್ಟ ದಾಖಲೆಗಳನ್ನು ಹೊಂದಿರುವ ಈ ಅಕ್ರಮ ನಿವಾಸಿಗಳಿಗೆ ವಸತಿ ಇಲಾಖೆಯಿಂದ ನಿಗದಿತ ದಿನಾಂಕದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗದೇ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.


