ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಮೇ.27): ಕೊರೋನಾ ಎರಡನೇ ಅಲೆ ಸೃಷ್ಟಿಸಿರುವ ಭೀಕರತೆಯ ನಡುವೆಯೇ ಮೂರನೇ ಅಲೆ ಮಕ್ಕಳನ್ನು ಕಾಡುವ ಎಚ್ಚರಿಕೆ ದೊರೆತಿದೆ. ಆದರೆ, ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಉಂಟಾದರೆ ನಿಭಾಯಿಸಲು ಅಗತ್ಯ ಚಿಕಿತ್ಸಾ ಮೂಲಸೌಕರ್ಯ, ಮಕ್ಕಳ ವೈದ್ಯರು, ಶುಶ್ರೂಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ತಕ್ಷಣ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆಪತ್ತು ಕಾದಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಮೂರನೇ ಅಲೆ ತಡೆಯಲು ಕೈಗೊಳ್ಳಬೇಕಿರುವ ಕ್ರಮಗಳು, ಮಕ್ಕಳಿಗೆ ಸೋಂಕು ಉಂಟಾಗದಂತೆ ರಕ್ಷಿಸುವ ಪರಿ ಹಾಗೂ ಸೋಂಕು ಉಂಟಾದರೆ ಯಾವೆಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್‌ ಕೂಡಾ ನಕಾರ!

ರಾಜ್ಯದಲ್ಲಿ ಪ್ರಸ್ತುತ 5 ವರ್ಷದೊಳಗಿನ 64.07 ಲಕ್ಷ ಪುಟ್ಟಮಕ್ಕಳಿದ್ದಾರೆ. 6 ವರ್ಷದಿಂದ 18 ವರ್ಷದ 1.10 ಕೋಟಿ ಸೇರಿ 18 ವರ್ಷದೊಳಗಿನ 1.75 ಕೋಟಿ ಮಕ್ಕಳು ರಾಜ್ಯದಲ್ಲಿದ್ದಾರೆ. ಮೊದಲ ಎರಡು ಅಲೆಯಲ್ಲಿ ಸೋಂಕಿಗೆ ಗುರಿಯಾಗದ ಹಾಗೂ ಲಸಿಕೆ ಹಾಕಿಸಿಕೊಳ್ಳದ ಸಮುದಾಯ 3ನೇ ಅಲೆಯಲ್ಲಿ ಸೋಂಕಿಗೆ ಗುರಿಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಹೀಗಾಗಿ 1.75 ಕೋಟಿ ಮಕ್ಕಳಲ್ಲಿ ಶೇ.1ರಷ್ಟುಮಂದಿಗೆ ಸೋಂಕು ಉಂಟಾದರೂ 1.75 ಲಕ್ಷ ಮಕ್ಕಳು ಸೋಂಕಿತರಾಗಲಿದ್ದಾರೆ. ಇವರಲ್ಲಿ ಶೇ.10ರಷ್ಟುಮಂದಿಗೆ ಆಸ್ಪತ್ರೆಯ ದಾಖಲಾತಿ ಅಗತ್ಯವಿದೆ ಎಂದರೂ ಸುಮಾರು 17,500 ಬೆಡ್‌ ಬೇಕಾಗುತ್ತದೆ. ಮಕ್ಕಳಿಗೆ ಪ್ರಸ್ತುತ ಇರುವ ಸೋಂಕು ಗಂಭೀರ ಅನಾರೋಗ್ಯ ಉಂಟು ಮಾಡುತ್ತಿಲ್ಲ. ಆದರೆ, ವೈರಸ್‌ ರೂಪಾಂತರಗೊಳ್ಳುತ್ತಿರುವುದರಿಂದ 3ನೇ ಅಲೆಯಲ್ಲಿ ಮಕ್ಕಳಿಗೆ ಅಗತ್ಯವಾದ ಐಸಿಯು, ವೆಂಟಿಲೇಟರ್‌, ತಜ್ಞ ವೈದ್ಯರ ವ್ಯವಸ್ಥೆಯನ್ನು ಮಾಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

'ಮಳೆ​ಗಾ​ಲಕ್ಕೂ ಮುನ್ನ ಮಕ್ಕ​ಳಿ​ಗೆ ಶೀತ​ಜ್ವ​ರದ ಲಸಿಕೆ ನೀಡಿ'

ವೆಂಟಿಲೇಟರ್‌, ಐಸಿಯು ಇಲ್ಲ:

ಪ್ರಸ್ತುತ ರೋಗಿಗಳು ವೆಂಟಿಲೇಟರ್‌, ಐಸಿಯು ಇಲ್ಲದೆ ಸಾಯುತ್ತಿದ್ದಾರೆ. ಮಕ್ಕಳನ್ನು ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗದು. ಆದರೆ, ಪ್ರಸ್ತುತ ಬೆಂಗಳೂರಿನಲ್ಲಿ ಸರ್ಕಾರಿ ಕೋಟಾದಡಿ ಮಕ್ಕಳಿಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 75 ಜನರಲ್‌ ಬೆಡ್‌, 40 ಎಚ್‌ಡಿಯು ಬೆಡ್‌, 20 ಐಸಿಯು ಬೆಡ್‌, 8 ವೆಂಟಿಲೇಟರ್‌ ಬೆಡ್‌ ಮಾತ್ರ ಮೀಸಲಿಡಲಾಗಿದೆ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ಬೆಡ್‌ಗಳು ಸೇರಿ ಬೆಂಗಳೂರಿನಲ್ಲಿ 80 ರಿಂದ 100 ಮಕ್ಕಳ ವೆಂಟಿಲೇಟರ್‌ ಮಾತ್ರ ಇರಬಹುದು. ಐಸಿಯು ಬೆಡ್‌ 150-200 ಇರಬಹುದು. ಆದರೆ, ಗ್ರಾಮೀಣ ಭಾಗದಲ್ಲಿ ಹಾಗೂ ತಾಲೂಕು, ಜಿಲ್ಲಾ ಮಟ್ಟದಲ್ಲಿ ಇವುಗಳ ಕೊರತೆ ತೀವ್ರವಾಗಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರ 3ನೇ ಅಲೆ ಸಿದ್ಧತೆಗೆ ನೇಮಿಸಿರುವ ಉನ್ನತ ಮಟ್ಟದ ಸಮಿತಿ ಸದಸ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ತಜ್ಞ ವೈದ್ಯರ ಕೊರತೆ ಇದೆ:

ನಿಯೋನಾಟಲಜಿಸ್ಟ್‌ ಹಾಗೂ ಮಕ್ಕಳ ತಜ್ಞರಾದ ಡಾ. ರಜತ್‌ ಆತ್ರೇಯ ಅವರ ಪ್ರಕಾರ, ಅವಧಿ ಪೂರ್ವ ಜನನದ ಮಕ್ಕಳಿಗೆ ಶ್ವಾಸಕೋಶ ಅಭಿವೃದ್ಧಿ ಆಗಿರುವುದಿಲ್ಲ. ಜತೆಗೆ ದೇಹದ ತೂಕ ಹೆಚ್ಚಿರುವ ಮಕ್ಕಳು, ಶ್ವಾಸಕೋಶ ಸಮಸ್ಯೆ, ಹೃದಯ ಸಮಸ್ಯೆ ಸೇರಿದಂತೆ ಈಗಾಗಲೇ ಅನಾರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಕೋವಿಡ್‌ ವೇಳೆ ‘ಕ್ರಿಟಿಕಲ್‌ ಕೇರ್‌’ ಬೇಕಾಗಲಿದೆ ಎಂದಿದ್ದಾರೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಹಾಲಿ ಸೋಂಕಿತರ ನಿಗಾ ವಹಿಸಿದಂತೆ ಒಬ್ಬ ವೈದ್ಯರೇ ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮಕ್ಕಳನ್ನು ಸೂಕ್ಷ್ಮವಾಗಿ ಉಪಚರಿಸಿ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ನಿಯೋನಾಟಲಜಿಸ್ಟ್‌ ಹಾಗೂ ಪೀಡಿಯಾಟ್ರಿಷನ್‌ಗಳ ಕೊರತೆ ನೀಗಿಸಬೇಕು. ಏಕಾಏಕಿ ಅವರನ್ನು ನೇಮಕ ಮಾಡಲು ಆಗುವುದಿಲ್ಲ. ಹೀಗಾಗಿ ಪ್ರಸ್ತುತ ಇರುವ ವೈದ್ಯರಿಗೆ ಕನಿಷ್ಠ 2 ತಿಂಗಳು ಮಕ್ಕಳ ಆರೈಕೆ ಬಗ್ಗೆ ಕೌಶಲ್ಯಗಳ ಕುರಿತು ತರಬೇತಿ ನೀಡಬೇಕು. ಮಕ್ಕಳಿಗೆ ನೀಡುವ ಔಷಧ, ಸ್ಟಿರಾಯಿಡ್ಸ್‌, ಡೋಸೇಜ್‌ ಎಲ್ಲವೂ ವ್ಯತ್ಯಾಸವಿರುತ್ತದೆ. ಇದರ ಬಗ್ಗೆ ಸೂಕ್ತ ತರಬೇತಿ ನೀಡಿದರೆ ಮಾತ್ರ ಸಮರ್ಥವಾಗಿ ಎದುರಿಸಬಹುದು ಎಂದು ಹೇಳಿದ್ದಾರೆ.

3ನೇ ಅಲೆ ಬಗ್ಗೆ ಎಚ್ಚರ ತಪ್ಪುವಂತಿಲ್ಲ:

ಸರ್ಕಾರದ ಉನ್ನತ ಮಟ್ಟದ ಸಮಿತಿ ಸದಸ್ಯ ಹಾಗೂ ಮಕ್ಕಳ ಚಿಕಿತ್ಸೆ, ಶ್ವಾಸಕೋಶ ತಜ್ಞ ಡಾ.ಜೆ.ಟಿ. ಶ್ರೀಕಾಂತ್‌, ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹಾಗೂ ಪ್ರಭಾವ ಹೆಚ್ಚಾಗಿತ್ತು. ನಮ್ಮ ಆಸ್ಪತ್ರೆಗಳಲ್ಲಿ ಮೊದಲ ಅಲೆಯಲ್ಲಿ ವಾರಕ್ಕೆ 1 ಮಗು ಸೋಂಕಿನಿಂದ ಆಸ್ಪತ್ರೆಗೆ ಬಂದರೆ ಎರಡಲೇ ಅಲೆಯಲ್ಲಿ ದಿನಕ್ಕೆ 10 ಮಂದಿ ಬರುತ್ತಿದ್ದರು. ವೆಂಟಿಲೇಟರ್‌ನ ಅಗತ್ಯವೂ ಉಂಟಾಗಿತ್ತು. 3ನೇ ಅಲೆ ಸಿದ್ಧತೆ ಬಗ್ಗೆ ನಾವು ಸದ್ಯದಲ್ಲೇ ವರದಿ ನೀಡಲಿದ್ದೇವೆ ಎಂದು ತಿಳಿಸಿದರು.

3ನೇ ಅಲೆಗೆ ತಡೆ ಹೇಗೆ?

- 18 ವರ್ಷ ಮೇಲ್ಪಟ್ಟವಯೋಮಾನದವರಿಗೆ ಶೀಘ್ರವಾಗಿ ಲಸಿಕೆ ನೀಡಿ

- 12-18 ವರ್ಷದ ಮಕ್ಕಳ ಲಸಿಕೆ ಪರೀಕ್ಷೆ ಮುಗಿದರೆ, ಬೇಗ ಲಸಿಕೆ ನೀಡಿ

- ಗರ್ಭಿಣಿಯರು, ಚಿಕ್ಕಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು

- ಸಾಮಾಜಿಕ ಅಂತರ, ಮಾಸ್ಕ್‌ನಂತಹ ಮಾರ್ಗಸೂಚಿಗಳನ್ನು ಪಾಲಿಸಬೇಕು

136 ತಜ್ಞ ವೈದ್ಯರ ನೇಮಕ

3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಡಾ.ದೇವಿಶೆಟ್ಟಿನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧರಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿರುವ ಮಕ್ಕಳ ಐಸಿಯು, ವೆಂಟಿಲೇಟರ್‌ ವ್ಯವಸ್ಥೆ ಉತ್ತಮಪಡಿಸಲು ಸೂಚಿಸಲಾಗಿದೆ. 136 ಮಂದಿ ಮಕ್ಕಳ ತಜ್ಞ ವೈದ್ಯರನ್ನು ನೇಮಿಸಲು ಕ್ರಮ ಕೈಗೊಂಡಿದ್ದೇವೆ.

- ಡಾ.ಕೆ.ವಿ. ತ್ರಿಲೋಕಚಂದ್ರ, ಆಯುಕ್ತರು, ಆರೋಗ್ಯ ಇಲಾಖೆ

ಮೃತ ಸೋಂಕಿತರ ಅಂತ್ಯಸಂಸ್ಕಾರ: ಮೂರು ಲೋಡ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ

ಮಕ್ಕಳ ಚಿಕಿತ್ಸೆಗೆ ಏನು ಮಾಡಬೇಕು?

- ಮಕ್ಕಳಿ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ಗುರುತಿಸಿ ಎಲ್ಲಾ ವ್ಯವಸ್ಥೆ ಮಾಡಬೇಕು

- ಮಕ್ಕಳ ಕೋವಿಡ್‌ ಕೇರ್‌, ಆಸ್ಪತ್ರೆ, ತುರ್ತು ಚಿಕಿತ್ಸೆ ಸಮನ್ವಯತೆಗೆ ವ್ಯವಸ್ಥೆ ಬೇಕು

- ಹೆಚ್ಚೆಚ್ಚು ಮಕ್ಕಳ ವೈದ್ಯರು, ಮಕ್ಕಳ ಶುಶ್ರೂಷಕರ ನೇಮಕ ಕೂಡಲೇ ಆಗಬೇಕು

- ಹಾಲಿ ವೈದ್ಯರಿಗೆ ಕನಿಷ್ಠ 2 ತಿಂಗಳು ಮಕ್ಕಳ ಚಿಕಿತ್ಸೆ ಕುರಿತು ತರಬೇತಿ ನೀಡಬೇಕು

- ಮಕ್ಕಳಿಗೆ ಪ್ರತ್ಯೇಕ ವೆಂಟಿಲೇಟರ್‌, ಐಸಿಯು ಬೆಡ್‌, ಆಕ್ಸಿಮೀಟರ್‌, ಔಷಧ ಬೇಕು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona