ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್ ಕೂಡಾ ನಕಾರ!
* ವಿದೇಶಿ ಕಂಪನಿಗಳಿಂದ ನೇರವಾಗಿ ಕೋವಿಡ್ ಲಸಿಕೆ ಖರೀದಿಸುವ ರಾಜ್ಯಗಳ ಕನಸಿಗೆ ತಣ್ಣೀರು
* ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್ ಕೂಡಾ ನಕಾರ
* ಕೇಂದ್ರ ಸರ್ಕಾರದ ಜೊತೆ ಮಾತ್ರ ನಮ್ಮ ಮಾತುಕತೆ ಎಂದ ಅಮೆರಿಕ ಕಂಪನಿ
ನವದೆಹಲಿ(ಮೇ.25): ವಿದೇಶಿ ಕಂಪನಿಗಳಿಂದ ನೇರವಾಗಿ ಕೋವಿಡ್ ಲಸಿಕೆ ಖರೀದಿಸುವ ರಾಜ್ಯಗಳ ಕನಸಿಗೆ ಇದೀಗ ಅಮೆರಿಕ ಮೂಲದ ಫೈಝರ್ ಕಂಪನಿ ಕೂಡಾ ತಣ್ಣೀರೆರಚಿದೆ. ಲಸಿಕೆ ಪೂರೈಕೆ ಕುರಿತು ತಾನು ಯಾವುದೇ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸುವುದಿಲ್ಲ. ಈ ಕುರಿತು ಕೇವಲ ಭಾರತ ಸರ್ಕಾರದೊಂದಿಗೆ ಮಾತ್ರವೇ ಮಾತುಕತೆ ನಡೆಸುವುದಾಗಿ ಫೈಝರ್ ಕಂಪನಿ ತಿಳಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಭಾನುವಾರವಷ್ಟೇ ಪಂಜಾಬ್ ಸರ್ಕಾರಕ್ಕೆ ಅಮೆರಿಕದ ಮಾಡೆರ್ನಾ ಕಂಪನಿ ಇದೇ ರೀತಿಯ ಉತ್ತರ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಫೈಝರ್ ಕೂಡಾ ಅದೇ ರೀತಿಯ ಹೇಳಿಕೆ ನೀಡಿರುವುದು ರಾಜ್ಯಗಳಿಗೆ ಶಾಕ್ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಕಂಪನಿಗಳ ಜೊತೆ ಮಾತುಕತೆ ನಡೆಸಿ, ನೇರವಾಗಿ ಲಸಿಕೆ ಖರೀದಿಸಿ ರಾಜ್ಯಗಳಿಗೆ ಹಂಚಿ ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ, ಇತ್ತೀಚೆಗೆ ಕೇಂದ್ರ ಸರ್ಕಾರ, ರಾಜ್ಯಗಳಿಗೇ ನೇರವಾಗಿ ಲಸಿಕೆ ಖರೀದಿಸಲು ಅವಕಾಶ ಕಲ್ಪಿಸಿತ್ತು. ಹೀಗಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಕರೆದಿದ್ದವು. ಆದರೆ ಇದೀಗ ಮಾಡೆರ್ನಾ ಮತ್ತು ಫೈಝರ್ ಕಂಪನಿಗಳ ನಿರ್ದಾರವು ರಾಜ್ಯಗಳ ಆಸೆ ಭಗ್ನಗೊಳಿಸಿದೆ.