ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಪ್ರತ್ಯೇಕ 'ಕಿತ್ತೂರು ಕರ್ನಾಟಕ' ರಾಜ್ಯಕ್ಕೆ ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕದಂತೆ 5 ಸಾವಿರ ಕೋಟಿ ಅನುದಾನ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿಗ್ಗಾವಿ (ಡಿ.12): ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ವಿಚಾರವು ಮತ್ತೆ ಮುನ್ನಲೆಗೆ ಬಂದಿದ್ದು, ಶಿಗ್ಗಾವಿಯಲ್ಲಿ ಶಾಸಕ ರಾಜು ಕಾಗೆ ಅವರು ಈ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವುದು ನಿಜ. ಹಾಗಾಗಿ, ಪ್ರತ್ಯೇಕ 'ಕಿತ್ತೂರು ಕರ್ನಾಟಕ' ರಾಜ್ಯ ಆಗಲೇಬೇಕು ಮತ್ತು ಅದಕ್ಕೆ ಒತ್ತು ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಮೂಲಭೂತ ಕ್ಷೇತ್ರಗಳಿಗೆ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
5 ಸಾವಿರ ಕೋಟಿ ನೀಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ:
ಬೆಳಗಾವಿ ಜಿಲ್ಲೆಯಲ್ಲಿ ಹೊಸ ತಾಲೂಕುಗಳಾಗಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸರ್ಕಾರಿ ಕಚೇರಿಗಳನ್ನು ಇನ್ನೂ ನಿರ್ಮಾಣ ಮಾಡಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಲ್ಲವೇ ಎಂದು ರಾಜು ಕಾಗೆ ಪ್ರಶ್ನಿಸಿದ್ದಾರೆ. ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಚರ್ಚೆಯಾಗಿದ್ದು, ತಾವು ಸರ್ಕಾರವನ್ನು ಉದ್ದೇಶಿಸಿ, ಕಲ್ಯಾಣ ಕರ್ನಾಟಕದಂತೆ ನಮಗೂ 5 ಸಾವಿರ ಕೋಟಿ ನೀಡಿ. ಇಲ್ಲವಾದರೆ ನಮಗೆ ಪ್ರತ್ಯೇಕ ರಾಜ್ಯ ಕೊಡಿ" ಎಂದು ಕೇಳಿರುವುದಾಗಿ ತಿಳಿಸಿದ್ದಾರೆ. ಇದು ಸರ್ಕಾರದ ನಿರ್ಧಾರವಲ್ಲ, ಆದರೆ ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನು ಐದು ಬಾರಿ ಶಾಸಕನಾಗಿದ್ದೇನೆ ಮತ್ತು ವಿವಿಧ ಬ್ಯಾಂಕ್‌ಗಳ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಜನರು ಯಾವ ಕಾರಣದಿಂದ ಆರಿಸಿ ತಂದಿರುತ್ತಾರೋ, ಅವರ ಋಣ ತೀರಿಸುವ ಕೆಲಸ ಮಾಡಬೇಕು. ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಕೂಗು ನಿಮ್ಮ ಧ್ವನಿಯಾಗಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗ ನಾನು ಒಬ್ಬನೇ ಇದ್ದೇನೆ, ಮುಂದೆ ಯಾರಾದರೂ ಬರುತ್ತಾರೆ. ಹಿಂದೆ ಬಿಜೆಪಿ ಕಟ್ಟುವಾಗ ಯಡಿಯೂರಪ್ಪನವರು ಒಬ್ಬರೇ ಇದ್ದರು, ಮುಂದೆ ಅವರು ಸರ್ಕಾರ ಮಾಡಲಿಲ್ವಾ? ಅದರಂತೆ ಒಬ್ಬರು, ಇಬ್ಬರು ಮುಂದೆ 10 ಜನರು ಆಗುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ರಾಜ್ಯವಾದ್ರೆ ಖಂಡಿತ ಅಭಿವೃದ್ಧಿಯಾಗುತ್ತೆ:
ಪ್ರತ್ಯೇಕ ರಾಜ್ಯವಾದರೆ ಖಂಡಿತವಾಗಿ ಅಭಿವೃದ್ಧಿಯಾಗುತ್ತದೆ. "ಮನೆ ಚಿಕ್ಕದಾದರೆ ಎಷ್ಟು ಸುಂದರವಾಗಿ ಇರುತ್ತೇ ಅಂತಾ ನಾವೇ ಹೇಳುತ್ತೇವೆ. ನೂರು ಜನ ಮನೆಯಲ್ಲಿದ್ದರೆ, ಸುಂದರವಾಗಿದೆ ಅಂತಾ ಹೇಳೋಕೆ ಆಗುತ್ತಾ?" ಎಂದು ಉದಾಹರಣೆ ನೀಡಿದರು. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದ ಕಾಗೆ, ತಮ್ಮ ನಿಲುವಿಗೆ ಬೆಂಬಲ ನೀಡಿದವರನ್ನು ಕರೆದುಕೊಂಡು ಹೋರಾಟ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.


