ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ನಿಧನರಾಗಿದ್ದಾರೆ. ದೊಡ್ಡಗಾಜನೂರಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಅಶ್ವಿನಿ ಪುನೀತ್‌ರಾಜಕುಮಾರ್ ಮತ್ತು ಕುಟುಂಬದವರು ಅಂತಿಮ ದರ್ಶನ ಪಡೆದರು.

ಚಾಮರಾಜನಗರ (ಆ.2) ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ವಯೋಸಹಜ ಕಾರಣಗಳಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ದೊಡ್ಡಗಾಜನೂರಿನ ತೋಟದ ಮನೆಯ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನಡೆಯಲಿದೆ.

ನಿನ್ನೆಯೇ ಡಾ. ರಾಜ್ ಕುಟುಂಬದ ಸದಸ್ಯರು, ರಾಘವೇಂದ್ರ ರಾಜಕುಮಾರ್, ನಟ ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್ ಪಾರ್ವತಮ್ಮರಾಜಕುಮಾರ್ ಸಹೋದರ ನಿರ್ಮಾಪಕ ಚಿನ್ನೇಗೌಡ, ಗೋವಿಂದರಾಜು ಸೇರಿದಂತೆ ಹಲವರು ಗಾಜನೂರಿಗೆ ಆಗಮಿಸಿ ನಾಗಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಅಜ್ಜಿಯ ಅಂತಿಮ ದರ್ಶನ ಪಡೆದ ವಂದಿತಾ:

ಡಾ ರಾಜ್ ಸಹೋದರಿ ನಾಗಮ್ಮ ನಿಧನ ತಿಳಿದು ಗಾಜನೂರಿಗೆ ಅಶ್ವಿನಿಪುನೀತ್‌ರಾಜಕುಮಾರ್ ಮತ್ತು ಮಗಳು ವಂದಿತಾ ಭೇಟಿ ನೀಡಿದರು. ನಾಗಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್‌ರಾಜಕುಮಾರ್. ಇದೇ ವೇಳೆ ಡಾ.ರಾಜ್ ಹಾಗು ಪಾರ್ವತಮ್ಮ ರಾಜಕುಮಾರ್ ಅವರ ನೂರಾರು ಸಂಬಂಧಿಕರ ಭೇಟಿ ಮಾಡಿದರು.

ರಾಘವೇಂದ್ರ ರಾಜಕುಮಾರ್‌ ಭಾವುಕ:

ನಮ್ಮ ಅತ್ತೆ ನಾಗಮ್ಮ ಬಹಳ ಸರಳ ಜೀವಿ. ನಮ್ಮ ತಂದೆ-ತಾಯಿಗಿಂತಲೂ ಹೆಚ್ಚಾಗಿ ನಮ್ಮನ್ನು ಸಾಕಿ ಸಲಹಿದವರು. ನಮ್ಮ ಕುಟುಂಬದ ಎಲ್ಲಾ ಸಿನಿಮಾಗಳ ಮುಹೂರ್ತಕ್ಕೆ ಆಶೀರ್ವಾದ ಮಾಡಿದ್ದವರು. ಅವರು ನಮಗೆ ಎದೆಹಾಲು ಕುಡಿಸಿ ಬೆಳೆಸಿದ್ದಾರೆ. ಕುಟುಂಬದ ಹಿರಿಯ ಜೀವವನ್ನು ಕಳೆದುಕೊಂಡ ನೋವು ತಾಯಿ-ತಂದೆಯನ್ನು ಕಳೆದುಕೊಂಡಷ್ಟೇ ದುಃಖ ತಂದಿದೆ ಎಂದು ರಾಘವೇಂದ್ರ ರಾಜಕುಮಾರ್ ಭಾವುಕರಾಗಿ ನುಡಿದಿದರು.