3ನೇ ಎದುರಿಸಲು ರಣತಂತ್ರ: ಡಾ| ದೇವಿಶೆಟ್ಟಿ ಸಮಿತಿಯ ಮಹತ್ವದ ಸಲಹೆ!

* 8 ಜಿಲ್ಲೆಗಳಿಗೆ ಬೇಗ ಲಸಿಕೆ 3ನೇ ಎದುರಿಸಲು ರಣತಂತ್ರ

* ಸರ್ಕಾರಕ್ಕೆ ಡಾ| ದೇವಿಶೆಟ್ಟಿ ಸಮಿತಿ ಶಿಫಾರಸು

* ಸೌಲಭ್ಯ ಕಮ್ಮಿಯಿರುವ ಜಿಲ್ಲೆಗೆ ಲಸಿಕೆ ಆದ್ಯತೆ

Dr Devi Shetty panel suggests setting up children hospitals HDU ICUs in state to tackle 3rd wave pod

ಬೆಂಗಳೂರು(ಜೂ.23): ಬೆಂಗಳೂರು ಗ್ರಾಮಾಂತರ ಸೇರಿದಂತೆ ವೈದ್ಯಕೀಯ ಸೌಲಭ್ಯದ ಕೊರತೆ ಇರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ನೀಡುವಂತೆ ಡಾ.ದೇವಿಶೆಟ್ಟಿನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೋವಿಡ್‌ ಮೂರನೇ ಅಲೆ ಎದುರಿಸಲು ನಡೆಸಬೇಕಾದ ಸಿದ್ಧತೆಗಳ ಕುರಿತು ಈ ಸಮಿತಿಯು 92 ಪುಟಗಳ ಮಧ್ಯಂತರ ವರದಿಯನ್ನು ಮಂಗಳವಾರ ಸರ್ಕಾರಕ್ಕೆ ಸಲ್ಲಿಸಿದೆ.

ಈ ವರದಿಯಲ್ಲಿ ಚಾಮರಾಜನಗರ, ಯಾದಗಿರಿ, ಕೊಪ್ಪಳ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯದ ಕೊರತೆಯಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು ಎಂದು ತಿಳಿಸಿದೆ.

ಹಾಗೆಯೇ ಮೂರನೇ ಅಲೆಯಿಂದ ಮಕ್ಕಳು ಹೆಚ್ಚು ಬಾಧಿತರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ 8 ಜಿಲ್ಲೆಗಳಲ್ಲಿ 250 ಹಾಸಿಗೆಗಳಿರುವ ಹಾಗೂ ಆ ಪೈಕಿ ಕನಿಷ್ಠ 20 ಐಸಿಯು ಬೆಡ್‌ಗಳಿರುವ ಮಕ್ಕಳ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಅಥವಾ ಮೆಡಿಕಲ್‌ ಕಾಲೇಜ್‌ ಆವರಣದಲ್ಲಿ ಸ್ಥಾಪಿಸುವಂತೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಉಳಿದ ಜಿಲ್ಲೆಗಳಲ್ಲಿಯೂ ಆಕ್ಸಿಜನ್‌ ಸೌಲಭ್ಯ ಇರುವ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಹೇಳಿದೆ.

ರಾಜ್ಯದಲ್ಲಿ ಮಕ್ಕಳ ವೈದ್ಯರು ಸೇರಿದಂತೆ ತಜ್ಞ ವೈದ್ಯರು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪ್ಯಾರಾ ಮೆಡಿಕಲ್‌ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಆದ್ದರಿಂದ ಸರ್ಕಾರ ಆದಷ್ಟುಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಖರೀದಿಸಬೇಕು. ಮಕ್ಕಳು ಸೇರಿದಂತೆ ಕೋವಿಡ್‌ಗೆ ಚಿಕಿತ್ಸೆ ಪಡೆಯುವವರಿಗೆ ಅಗತ್ಯವಾದ ಔಷಧಿ, ಉಪಕರಣಗಳ ಪಟ್ಟಿಯನ್ನು ಸಮಿತಿ ತಯಾರಿಸಿದ್ದು, ಆದಷ್ಟು ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಯಾವುದೇ ಆಸ್ಪತ್ರೆ 10 ದಿನಕ್ಕಿಂತ ಹೆಚ್ಚು ಕಾಲ ಲಸಿಕೆಯನ್ನು ದಾಸ್ತಾನು ಇಡಬಾರದು. ಒಂದು ವೇಳೆ ಲಸಿಕೆ ಬಳಕೆ ಆಗದಿದ್ದರೆ ಬೇರೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಬೇಕು. ಸರ್ಕಾರಿ ಆಸ್ಪತ್ರೆಯ ಹೊರಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಬೇಕು. ಹಳ್ಳಿಗಳಲ್ಲಿ ಅಂಗನವಾಡಿ, ಶಾಲೆ, ಕಲ್ಯಾಣ ಮಂಟಪ, ಗ್ರಾಮ ಪಂಚಾಯತ್‌ಗಳಲ್ಲಿ ಲಸಿಕೆ ನೀಡಬಹುದು. ಪಟ್ಟಣಗಳಲ್ಲಿ ಸಂಚಾರಿ ಲಸಿಕಾ ಕೇಂದ್ರ, ದೊಡ್ಡ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಬಹುದು. ಲಸಿಕೆಯ ಲಭ್ಯತೆ ಮತ್ತು ದಾಸ್ತಾನಿನ ಬಗ್ಗೆ ಸರ್ಕಾರದ ಬಳಿ ನೈಜ ಸಮಯದಲ್ಲಿ ಮಾಹಿತಿ ಇರಬೇಕು. ಮಾನವ ಸಂಪನ್ಮೂಲ ಲಭ್ಯ ಇರುವ ಕಡೆ ಸಮಯದ ಮಿತಿ ಇಲ್ಲದೆ ಲಸಿಕೆ ನೀಡಲು ಅವಕಾಶ ನೀಡಿ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಆಮ್ಲಜನಕ ದಾಸ್ತಾನು ಇರಲಿ:

ರಾಜ್ಯದಲ್ಲಿ ಗರಿಷ್ಠ ಎಂದರೆ ಒಂದು ದಿನಕ್ಕೆ 1,200 ಮೆಟ್ರಿಕ್‌ ಟನ್‌ ಆಮ್ಲಜನಕ ಬಳಕೆಯಾಗಿದೆ. ಸಾಮಾನ್ಯವಾಗಿ ಪ್ರತಿದಿನ 600 ರಿಂದ 800 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕಾಗುತ್ತದೆ. ಆದ್ದರಿಂದ ಸರ್ಕಾರ ಗರಿಷ್ಠ ಬಳಕೆಯ ಸಂದರ್ಭ ಬಂದಾಗ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಸುವ ಸಾಮರ್ಥ್ಯ ಇರುವ ಸಂಸ್ಥೆಗಳನ್ನು ಗುರುತಿಸಿಡಬೇಕು. ಪ್ರಮುಖ ಆಮ್ಲಜನಕ ಪೂರೈಕೆದಾರರು ಗರಿಷ್ಠ ದಾಸ್ತಾನು ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಹಾಗೆಯೇ ಪ್ರತಿ ಆಸ್ಪತ್ರೆ ಮೂರು ದಿನಕ್ಕೆ ಆಗುವಷ್ಟುಆಮ್ಲಜನಕ ಸಂಗ್ರಹಿಸಿಡಬೇಕು. ಆಸ್ಪತ್ರೆಗಳಲ್ಲಿನ ಆಮ್ಲಜನಕದ ಘಟಕಗಳ ವಿಸ್ತರಣೆ ಮಾಡಬೇಕು ವರದಿ ತಿಳಿಸಿದೆ.

ಕೋವಿಡೋತ್ತರ ಸಮಸ್ಯೆಗೆ ಕ್ಲಿನಿಕ್‌ ಸ್ಥಾಪಿಸಿ:

ರಾಜ್ಯದಲ್ಲಿ ಈವರೆಗೆ 28 ಲಕ್ಷ ಮಂದಿಗೆ ಕೋವಿಡ್‌ ಬಂದಿದ್ದು ಕೋವಿಡೇತರ ಸಮಸ್ಯೆಗಳು ಅನೇಕರಲ್ಲಿ ಕಾಣಿಸಿಕೊಳ್ಳುತ್ತವೆ. ಶ್ವಾಸಕೋಶ ಸಮಸ್ಯೆ, ನರ ಮತ್ತು ಮಾನಸಿಕ ಸಮಸ್ಯೆ, ಹೃದಯ ಮತ್ತು ಕಿಡ್ನಿಯ ತೊಂದರೆ ಮುಂತಾದವುಗಳಿಂದ ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೋವಿಡೋತ್ತರ ಸಮಸ್ಯೆಗಳನ್ನು ನಿರ್ವಹಿಸಲು ಕೋವಿಡೋತ್ತರ ಕ್ಲಿನಿಕ್‌ಗಳನ್ನು ಸ್ಥಾಪಿಸಬೇಕು. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ತೊಂದರೆ ಆಗಬಾರದು. ಟೆಲಿಮೆಡಿಸಿನ್‌ ಸೇವೆಯನ್ನು ಇನ್ನಷ್ಟುಬಲಿಷ್ಠಗೊಳಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ರೆಫರಲ್‌ ಆಸ್ಪತ್ರೆಗಳಲ್ಲಿನ ಲ್ಯಾಂಡ್‌ಲೈನ್‌ ಫೋನ್‌ಗಳ ಸಂಖ್ಯೆ ಹೆಚ್ಚಿಸಬೇಕು. ಆಸ್ಪತ್ರೆಗಳÜ ಬಳಿ ಪೊಲೀಸರು ಇರಬೇಕು. ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮುಂತಾದ ಅಂಶಗಳನ್ನು ವರದಿಯಲ್ಲಿ ಹೇಳಲಾಗಿದೆ.

92 ಪುಟಗಳ ವರದಿಯಲ್ಲೇನಿದೆ?

- ಮಕ್ಕಳ ಆಸ್ಪತ್ರೆಗಳನ್ನು ಆರಂಭಿಸಿ, ಆಕ್ಸಿಜನ್‌ ಹಾಸಿಗೆಗಳನ್ನು ಹೆಚ್ಚಿಸಿ

- 8 ಜಿಲ್ಲೆಯಲ್ಲಿ ಮಕ್ಕಳಿಗೆ ಕನಿಷ್ಠ 250 ಹಾಸಿಗೆ ಆಸ್ಪತ್ರೆ ತೆರೆಯಿರಿ

- ಮಕ್ಕಳ ವೈದ್ಯರು, ಸಿಬ್ಬಂದಿ ಕೊರತೆ ಇದೆ, ಬೇಗ ಭರ್ತಿ ಮಾಡಿ

- ಯಾವುದೇ ಆಸ್ಪತ್ರೆಯಲ್ಲಿ 10 ದಿನಕ್ಕಿಂತ ಹೆಚ್ಚು ಲಸಿಕೆ ಇರಬಾರದು

- ಅಂಗನವಾಡಿ, ಶಾಲೆ, ಕಲ್ಯಾಣ ಮಂಟಪಗಳಲ್ಲೂ ಲಸಿಕೆ ನೀಡಿ

- ಯಾವಾಗಲೂ 1200 ಟನ್‌ ಆಕ್ಸಿಜನ್‌ ತುರ್ತು ದಾಸ್ತಾನಿರಬೇಕು

- ಪ್ರತಿ ಆಸ್ಪತ್ರೆಯಲ್ಲಿ 3 ದಿನಕ್ಕಾಗುವಷ್ಟುಆಮ್ಲಜನಕ ಶೇಖರಿಸಬೇಕು

ಯಾವ ಜಿಲ್ಲೆಗೆ ವೇಗದ ವ್ಯಾಕ್ಸಿನ್‌?

1. ಬೆಂ.ಗ್ರಾಮಾಂತರ

2. ಚಾಮರಾಜನಗರ

3. ಯಾದಗಿರಿ

4. ಕೊಪ್ಪಳ

5. ಹಾವೇರಿ

6. ಚಿತ್ರದುರ್ಗ

7. ಚಿಕ್ಕಬಳ್ಳಾಪುರ

8. ಕೋಲಾರ

Latest Videos
Follow Us:
Download App:
  • android
  • ios