ಧಾರವಾಡ ಜಿಲ್ಲೆಯ ರಾಮಾಪುರ-ವೀರಾಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 20 ಎಕರೆ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ರೈತ ಬಸಪ್ಪ ಜಿರಿಗವಾಡ ಅವರಿಗೆ ಸೇರಿದ ಅಂದಾಜು 30 ಲಕ್ಷ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ನಾಶವಾಗಿದೆ.
ಧಾರವಾಡ (ಜ.6): ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬಿನ ಬೆಳೆ ಸುಟ್ಟು ಭಸ್ಮವಾದ ಘಟನೆ ಧಾರವಾಡ ಜಿಲ್ಲೆಯ ರಾಮಾಪುರ-ವೀರಾಪುರ ಗ್ರಾಮದಲ್ಲಿ ನಡೆದಿದೆ.
20 ಎಕರೆ ಕಬ್ಬು ಬೆಳೆ ಭಸ್ಮ!
ರೈತ ಬಸಪ್ಪ ಜಿರಿಗವಾಡ ಎಂಬುವರಿಗೆ ಸೇರಿದ ಸುಮಾರು 20 ಎಕರೆ ಕಬ್ಬು ಬೆಳೆ ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾಗಿದೆ. ಅಂದಾಜು 30 ಲಕ್ಷ ರೂಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದ್ದು, ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ; ಹತೋಟಿಗೆ ಬಂದ ಬೆಂಕಿ
ಬೆಂಕಿಯ ಜ್ವಾಲೆ ವೇಗವಾಗಿ ಹರಡುತ್ತಿದ್ದನ್ನು ಕಂಡು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದಾಗಿ ಪಕ್ಕದ ಹೊಲಗಳಿಗೆ ಬೆಂಕಿ ಹರಡುವುದು ತಪ್ಪಿದೆ.
ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳೆ ಕಳೆದುಕೊಂಡ ರೈತ ಬಸಪ್ಪ ಅವರ ಕುಟುಂಬ ಈಗ ಕಂಗಾಲಾಗಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.


