ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 40 ಎಕರೆಗೂ ಅಧಿಕ ಕಬ್ಬಿನ ಗದ್ದೆ ಹೊತ್ತಿ ಉರಿದಿದೆ. ಈ ದುರ್ಘಟನೆಯಿಂದ ಏಳು ಮಂದಿ ರೈತರು ಸುಮಾರು 80 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಹಾವೇರಿ (ಡಿ13): ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಬರೋಬ್ಬರಿ 40 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗಳು ಧಗಧಗನೆ ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಶಾಕಿಂಗ್ ಘಟನೆ ನಡೆದಿದೆ. ಇದರಿಂದಾಗಿ ಕಬ್ಬು ಬೆಳೆದ ಏಳು ಮಂದಿ ಅನ್ನದಾತರು ಕಂಗಾಲಾಗಿದ್ದಾರೆ.

ಕಬ್ಬಿನ ಗದ್ದೆಳಿಗೆ ಬೆಂಕಿ ಬಿದ್ದಿದ್ದು ಹೇಗೆ?

ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದ ಜಮೀನುಗಳಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರ ಪರಿಣಾಮವಾಗಿ ಏಕಾಏಕಿ ಕಬ್ಬಿನ ಗದ್ದೆಗಳಿಗೆ ಬೆಂಕಿ ಹತ್ತಿಕೊಂಡಿದೆ. ಕ್ಷಣ ಮಾತ್ರದಲ್ಲಿ ಬೆಂಕಿಯು ಪಕ್ಕದ ಗದ್ದೆಗಳಿಗೂ ವ್ಯಾಪಿಸಿ ಸುಮಾರು 40 ಎಕರೆ ಪ್ರದೇಶದ ಕಬ್ಬಿನ ಬೆಳೆ ನಾಶವಾಗಿದೆ. ಈ ದುರ್ಘಟನೆಯಲ್ಲಿ ಸತ್ಯನಾರಾಯಣ ರಟ್ಟಿಹಳ್ಳಿ, ಕೃಷ್ಣಪ್ಪ ರಟ್ಟಿಹಳ್ಳಿ, ಚನ್ನಪ್ಪ ಮುದ್ದಿ, ವಿರೂಪಾಕ್ಷಪ್ಪ ಮುದ್ದಿ ಸೇರಿದಂತೆ ಏಳು ಜನ ರೈತರಿಗೆ ಸೇರಿದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ. ಅಂದಾಜಿನ ಪ್ರಕಾರ, ಸುಮಾರು 80 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ಬೆಂಕಿ ನಂದಿಸಲು ರೈತರ ಹರಸಾಹಸ:

ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಗಾಬರಿಗೊಂಡ ರೈತರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಬೆಂಕಿ ನಿಯಂತ್ರಿಸಲು ಕಷ್ಟಪಟ್ಟರು. ಅಂತಿಮವಾಗಿ ಬೆಂಕಿಯನ್ನು ಹತೋಟಿಗೆ ತರಲಾಯಿತು.

ಈ ಘಟನೆಯ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಹಾರಕ್ಕಾಗಿ ರೈತರು ಸರ್ಕಾರದ ಮೊರೆ ಹೋಗಿದ್ದಾರೆ.