ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ₹4000ವರೆಗೂ ಬಿಕರಿ: ಇಂದು ಬೆಂಗಳೂರಿನ 30% ಹೋಟೆಲ್ ಬಂದ್ ಸಂಭವ
ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರಿನ ಶೇ.30ರಷ್ಟು ಸೇರಿದಂತೆ ರಾಜ್ಯಾದ್ಯಂತ ಹೋಟೆಲ್‌ಗಳು ಬಂದ್ ಆಗುವ ಆತಂಕ ಎದುರಿಸುತ್ತಿವೆ.

ರಾಜ್ಯವ್ಯಾಪಿ ಹೋಟೆಲ್‌ಗಳು ಬಂದ್ ಆಗುವ ಆತಂಕ
ಬೆಂಗಳೂರು: ಮಧ್ಯಪ್ರಾಚ್ಯ ಯುದ್ದದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಬಳೆಕೆಯ ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಹೀಗಾಗಿ ಬುಧವಾರದಿಂದಲೇ ಬೆಂಗಳೂರಿನಲ್ಲಿ ಶೇ.30ರಷ್ಟು ಸೇರಿದಂತೆ ರಾಜ್ಯವ್ಯಾಪಿ ಹೋಟೆಲ್‌ಗಳು ಬಂದ್ ಆಗುವ ಆತಂಕ ಎದುರಾಗಿದೆ. ಹೋಟೆಲ್‌ಗಳು ಮಾತ್ರವಲ್ಲದೇ ವಾಣಿಜ್ಯ ಬಳಕೆ ಸಿಲಿಂಡರ್ ಅವಲಂಬಿಸಿರುವ ಕಲ್ಯಾಣ ಮಂಟಪಗಳು, ಪಿಜಿಗಳು ಹಾಗೂ ಕ್ಯಾಟರಿಂಗ್‌ನವರೂ ಸಮಸ್ಯೆಗೆ ಸಿಲುಕಿದ್ದಾರೆ. ಇನ್ನು ಗ್ಯಾಸ್ ಚಾಲಿತ ಆಟೋಗಳ ಸಂಚಾರದಲ್ಲೂ ವ್ಯತ್ಯಯ ಕಂಡುಬಂದಿದ್ದು, ನಗರದ ಕೆಲ ಆಟೋ ಎಲ್‌ಪಿಜಿ ಕೇಂದ್ರಗಳು ಮಂಗಳವಾರ ಮುಚ್ಚಿದ್ದು, ಮುಂದಿನ ದಿನಗಳಲ್ಲಿ ಆಟೋ ಎಲ್‌ಪಿಜಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಆಗುವ ಸಾಧ್ಯತೆಗಳಿವೆ.
ಹೊಟೇಲುಗಳ ಸಂಘ ಆಕ್ರೋಶ
ಸೋಮವಾರವೇ ಸಮರ್ಪಕವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಬೆಂಗಳೂರು ಹೋಟೆಲುಗಳ ಸಂಘವು ಆಕ್ರೋಶ ವ್ಯಕ್ತಪಡಿಸಿತ್ತು. ಆದರೂ ಮಂಗಳವಾರವೂ ಸಿಲಿಂಡರ್ ಸರಬರಾಜು ಆಗದೇ ಇರುವುದರಿಂದ ಬುಧವಾರದಿಂದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೋಟೆಲ್ ಉದ್ಯಮ ಆತಂಕ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕಲ್ಯಾಣ ಮಂಟಪ, ಕ್ಯಾಟರಿಂಗ್‌ನವರು, ಪಿಜಿಗಳನ್ನು ನಡೆಸುವವರೂ ವಾಣಿಜ್ಯ ಅನಿಲ ಸಿಲಿಂಡರ್ ಪೂರೈಕೆಯಾಗದೆ ಸಂಕಷ್ಟ ಅನುಭವಿಸಿದ್ದಾರೆ. ಕೆಲ ಹೋಟೆಲ್‌ನವರು ಸಿಲಿಂಡರ್ ಖಾಲಿಯಿಂದಾಗಿ ಸೌದೆ ಒಲೆ ಬಳಸಿದ್ದು ಕಂಡು ಬಂತು.
ಅಗತ್ಯ ವಸ್ತುಗಳ ಕಾಯ್ದೆ ಜಾರಿ: ಉತ್ಪಾದನೆ ಹೆಚ್ಚಳಕ್ಕೆ ಆದೇಶ
ಗ್ಯಾಸ್ ಟ್ರಬಲ್‌ಗೆ ಕೇಂದ್ರ ಕಾಯ್ದೆ ಅಸ್ತ್ರ
ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷದಿಂದಾಗಿ ನೈಸರ್ಗಿಕ ಅನಿಲಕ್ಕೆ ಹಾಹಾಕಾರ ಎದ್ದ ಬೆನ್ನಲ್ಲೇ ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಂಗಳವಾರ ಇ.ಸಿ. ಕಾಯ್ದೆ (ಅಗತ್ಯ ವಸ್ತುಗಳ ಕಾಯ್ದೆ) ಜಾರಿ ಮಾಡಿದೆ. ಈ ಮೂಲಕ 'ಎಲ್ಲಾ ರಿಫೈನರಿ, ಪೆಟ್ರೋಕೆಮಿಕಲ್ ಘಟಕಗಳು ಎಲ್.ಪಿಜಿ ಉತ್ಪಾದನೆ ಹೆಚ್ಚಿಸಬೇಕು ಹಾಗೂ ಹೈಡೋಕಾರ್ಬನ್ ಗ್ಯಾಸ್ ಅನ್ನು ಎಲ್‌ಪಿಜಿ ತಯಾರಿಸುವ ಉದ್ದೇಶಕ್ಕೆ ಬಳಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.
ಸಮಸ್ಯೆ ಏಕೆ?
ಭಾರತಕ್ಕೆ ಬೇಕಾಗಿರುವ ಎಲ್‌ಪಿಜಿ ಪೈಕಿ ಶೇ.60ರಷ್ಟು ಆಮದಾಗುತ್ತದೆ. ಆ ಪೈಕಿ ಶೇ.90ರಷ್ಟು ಬರುವುದು ಕತಾರ್, ಯುಎಇ, ಸೌದಿ, ಕುವೈತ್‌ನಂತಹ ಕೊಲ್ಲಿ ದೇಶಗಳಿಂದ. ಹರ್ಮುಜ್ ಜಲಸಂಧಿ ಮೂಲಕವೇ ಗ್ಯಾಸ್ ಆಮದಾಗಬೇಕು. ಯುದ್ಧದಿಂದಾಗಿ ಆ ಜಲಸಂಧಿಯೇ ಬಂದ್ ಆಗಿದೆ. ಯುದ್ಧದ ಕಾರಣ ಬೇರೆ ದೇಶಗಳಿಂದಲೂ ಎಲ್‌ಪಿಜಿಗೆ ಬೇಡಿಕೆ ಇದೆ. ಜತೆಗೆ ಮಾರ್ಗದ ಅನಿಶ್ಚಿತತೆಯಿಂದಾಗಿ ಸಮಸ್ಯೆಯಾಗುತ್ತಿದೆ. ಬೇರೆ ಮಾರ್ಗದಲ್ಲಿ ತರಿಸಲು ತೊಂದರೆ, ವೆಚ್ಚ ಅವಧಿ ಜಾಸ್ತಿಯಾಗುತ್ತಿದೆ.
ಹೋಟೆಲ್ ಸಮಸ್ಯೆ ಇತ್ಯರ್ಥಕ್ಕೆ ತಂಡ
ನವೆಹಹಲಿ: ಯುದ್ಧದ ಕಾರಣ ವಾಣಿಜ್ಯಿಕ ಎಲ್‌ಪಿಜಿ ಪೂರೈಕೆ ಬಿಕ್ಕಟ್ಟು ತಲೆದೋರಿರುವ ಕಾರಣ, ರೆಸ್ಟೋರೆಂಟ್ ಸಂಘಗಳ ಕುಂದುಕೊರತೆಗಳನ್ನು ಪರಿಹರಿಸಲು 3 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ತಮಿಳುನಾಡಲ್ಲಿ ಮೆನುಗಳು ಕಡಿತ ಪುದುಚೇರೀಲಿ ಚಹಾ ಸಿಗ್ತಿಲ್ಲ
ದೆಹಲಿ, ಮುಂಬೈ, ಒಡಿಶಾ ಹೋಟೆಲಲ್ಲೂ ಸಮಸ್ಯೆ
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಕರ್ನಾಟಕ ಸೇರಿ ದೇಶಾದಂತ ಹೋಟೆಲ್, ರೆಸ್ಟೋರೆಂಟ್, ಬೇಕರಿ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪ.ಬಂಗಾಳ, ಒಡಿತಾ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ಹೋಟೆಲ್ ಸಂಘ-ಸಂಸ್ಥೆಗಳು, 'ಸಮಸ್ಯೆ ತೀವ್ರ ಗತಿಯಲ್ಲಿರುವ ಕಾರಣ ಬೇಗ ಬಗೆಹರಿಸಬೇಕು. ಇಲ್ಲದಿದ್ದರೆ ಹೋಟೆಲ್ ಮುಚ್ಚುವ ಸ್ಥಿತಿ ಬಂದೀತು ಎಂದು ಸರ್ಕಾರಕ್ಕೆ ಎಚ್ಚರಿಸಿವೆ.
ಅನೇಕ ರಾಜ್ಯಗಳಲ್ಲಿ ಹೋಟೆಲ್‌ಗಳ ಸೇವೆ ಬಾಧಿತವಾಗಿದೆ. ವಿಶೇಷವಾಗಿ ಪಾಂಡಿಚೇರಿಯಲ್ಲಿ ಎಲ್‌ಪಿಜಿ ಅಭಾವದಿಂದ ಟೀ, ಕಾಫಿ ಮಾರಾಟವನ್ನೇ బంದ್ ಮಾಡಲು ನಿರ್ಧರಿಸಿದ್ದಾರೆ. ತಮಿಳುನಾಡು ಹೋಟೆಲ್ ಗಳಲ್ಲಿನ ಮೆನು ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ: ಠಾಣೆಗೆ ಮುತ್ತಿಗೆ ಹಾಕಿದ ವಕೀಲರು
ಕೊರತೆ ತಗ್ಗಿಸಿ: ಸಚಿವರಿಗೆ ಮೋದಿ
ನವದೆಹಲಿ: ತೈಲ ಬಿಕ್ಕಟ್ಟಿನ ಬೆನ್ನಲ್ಲೇ ಮಂಗಳವಾರ ಹಿರಿಯ ಸಚಿವರ ಜೊತೆ ತುರ್ತು ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ತೈಲ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿನ ಕೊರತೆಯನ್ನು ಸಾಧ್ಯವಾದಷ್ಟು ತೀವ್ರಗತಿಯಲ್ಲಿ ತಗ್ಗಿಸಬೇಕು ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

