ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಅರಿವಿಲ್ಲದೆ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರಲು ಮುಂದಾದರು. ತಕ್ಷಣವೇ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗರುಡಾಚಾರ್ ಅವರನ್ನು ತಡೆದು ಪಕ್ಕದ ಆಸನದಲ್ಲಿ ಕೂರಿಸಿದರು

ವಿಧಾನಸಭೆ (ಮಾ.11): ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌ ಅವರು ಸಿಎಂರ ಕುರ್ಚಿಯಲ್ಲಿ ಕೂರಲು ಮುಂದಾದಾಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಕ್ಷಣ ಕೈ ಅಡ್ಡ ಇಟ್ಟು ಗರುಡಾಚಾರ್‌ರನ್ನು ಪಕ್ಕಕ್ಕೆ ಎಳೆದ ಪ್ರಸಂಗ ಮಂಗಳವಾರ ವಿಧಾನಸಭೆಯಲ್ಲಿ ನಡೆಯಿತು.

Add Asianetnews Kannada as a Preferred SourcegooglePreferred

ಉದಯ್‌ ಅವರು ಅರಿವಿಲ್ಲದೆ ಸಿಎಂರ ಕುರ್ಚಿಯಲ್ಲಿ ಕೂರಲು ಮುಂದಾದಾಗ ಸ್ಪೀಕರ್‌ ಯು.ಟಿ.ಖಾದರ್‌ ಸೇರಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಕ್ಷಣಕಾಲ ಅಚ್ಚರಿಗೆ ಗುರಿಯಾದರು. ಬಿಜೆಪಿ ಸದಸ್ಯ ಸುನಿಲ್‌ ಕುಮಾರ್‌, ‘ಯಾರೋ ಕೂರಬೇಕು ಎಂದುಕೊಂಡಿರುವ ಕುರ್ಚಿಯಲ್ಲಿ ಹೋಗಿ ನೀವು ಕೂರುತ್ತಿದ್ದೀರಲ್ಲಾ?’ ಎಂದು ಉದಯ್‌, ಶಿವಕುಮಾರ್‌ರನ್ನು ಕಿಚಾಯಿಸಿದರು.

ಆಗಿದ್ದೇನು?:

ವಿಧಾನಸಭೆಯಲ್ಲಿ ಸಿಎಂ ಇನ್ನೂ ಆಗಮಿಸದ ಕಾರಣ ಅವರ ಕುರ್ಚಿ ಖಾಲಿ ಇತ್ತು. ಸಿಎಂ ಕುರ್ಚಿ ಪಕ್ಕದಲ್ಲೇ ಇರುವ ತಮ್ಮ ಕುರ್ಚಿಯಲ್ಲಿ ಡಿಸಿಎಂ ಕೂತಿದ್ದರು. ಅವರೊಂದಿಗೆ ಮಾತಾಡಲು ಆಡಳಿಪಕ್ಷದ ಸಾಲಿಗೆ ತೆರಳಿದ ಗರುಡಾಚಾರ್‌ ಸಿಎಂರ ಕುರ್ಚಿಯಲ್ಲಿ ಕೂರಲು ಮುಂದಾದರು. ತಕ್ಷಣ ಎಚ್ಚೆತ್ತ ಶಿವಕುಮಾರ್, ಗುರುಡಾಚಾರ್‌ರ ಕೈ ಹಿಡಿದು ತಮ್ಮ ಬಲಭಾಗದಲ್ಲಿದ್ದ ಖಾಲಿ ಆಸನದಲ್ಲಿ ಕೂರಿಸಿಕೊಂಡರು. ತಮ್ಮ ತಪ್ಪಿನ ಅರಿವಾಗಿ ತಲೆ ಚಚ್ಚಿಕೊಂಡ ಗರುಡಾಚಾರ್‌ ಪ್ರತಿಪಕ್ಷ ಸದಸ್ಯರ ಕಡೆಗೆ ಏನೂ ಮಾತನಾಡಬೇಡಿ ಶೂ...! ಶೂ...! ಎಂದು ಬಾಯ್ಮೇಲೆ ಬೆರಳಿಟ್ಟುಕೊಂಡು ಸನ್ನೆ ಮಾಡಿದರು.

ನೀವು ಆ ಕಡೆ ಹೋಗಿದ್ದೇ ತಪ್ಪು-ಅಶೋಕ್‌:

ಬಳಿಕ ಪ್ರತಿಪಕ್ಷದ ಸಾಲಿನತ್ತ ಬಂದ ಉದಯ್‌ ಗರುಡಾಚಾರ್‌ ಅವರಿಗೆ ಬುದ್ಧಿವಾದ ಹೇಳಿದ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ನೀವು ಆ ಸಾಲಿಗೆ ಹೋಗಿದ್ದೇ ತಪ್ಪು. ಹೋಗಿ ಆ ರೀತಿ ಮಾಡೋದಾ? ಎಂದು ಬುದ್ಧಿಮಾತು ಹೇಳಿದರು.