ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ 13ನೇ ಪಾಯಿಂಟ್‌ನಲ್ಲಿ 14 ಅಡಿ ಅಗೆದರೂ ಅಸ್ತಿಪಂಜರ ಸಿಗದೆ ನೀರು ಉಕ್ಕಿ, ಶೋಧ ಕಾರ್ಯಕ್ಕೆ ತಡೆ ಉಂಟಾಗಿದೆ. ನೀರನ್ನು ಹೊರಹಾಕಲು ಮೋಟರ್ ಅಳವಡಿಸಲಾಗಿದ್ದು, ಹಿಟಾಚಿ ಯಂತ್ರಗಳ ಕೆಲಸ ತಾತ್ಕಾಲಿಕ ಸ್ಥಗಿತಗೊಂಡಿದೆ. ಅನಾಮಿಕನ ಸುಳಿವುಗಳ ಮೇಲೆ ಎಸ್‌ಐಟಿ ಶೋಧ ಮುಂದುವರೆಸಿದೆ.
ದಕ್ಷಿಣ ಕನ್ನಡ (ಆ.12): ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ 13ನೇ ಪಾಯಿಂಟ್‌ನಲ್ಲಿ 14 ಅಡಿ ಅಗೆದರೂ ಅಲ್ಲಿ ಅಸ್ತಿಪಂಜರ ಸಿಗದೇ ಕೇವಲ ನೀರು ಉಕ್ಕುತ್ತಿದೆ. ಇದೀಗ ನೀರಿನ್ನು ಹೊರಹಾಕಲು ಎಸ್‌ಐಟಿ ತಂಡದಿಂದ ಮೋಟರ್ ಅಳವಡಿಕೆ ಮಾಡಿದ್ದು, ಹಿಟಾಚಿ ಯಂತ್ರಗಳು ತಾತ್ಕಾಲಿಕವಾಗಿ ಕೆಲಸಕ್ಕೆ ಬ್ರೇಕ್ ತೆಗೆದುಕೊಂಡಿವೆ.
ಧರ್ಮಸ್ಥಳದ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದ ಅನಾಮಿಕ ದೂರುದಾರ ಎಸ್‌ಐಟಿ ತಂಡಕ್ಕೆ ನೇತ್ರಾವತಿ ನದಿ ತೀರದಲ್ಲಿ 13ನೇ ಪಾಯಿಂಟ್ ತೋರಿಸಿದ್ದನು. ಇದನ್ನು ಅತ್ಯಂತ ಮುಖ್ಯವಾದ ಪಾಯಿಂಟ್ ಆಗಿ ಪರಿಗಣಿಸಿದ್ದ ಎಸ್‌ಐಟಿ ತಂಡ ಜಿಪಿಆರ್ ಯಂತ್ರದ ಮೂಲಕ ಶೋಧನೆ ಮಾಡಿ, ಯಾವುದೇ ಕುರುಹು ಸಿಗದಿದ್ದರೂ ಅನಾಮಿಕ ತೋರಿಸಿದ ಎರಡು ಜಾಗದಲ್ಲಿ 14 ಅಡಿಯಷ್ಟು ಭೂಮಿಯನ್ನು ಅಗೆಯಲಾಗಿದೆ. ಆದರೆ, ಹಿಟಾಚಿ ಅಗೆದ ಜಾಗದಲ್ಲಿ ಯಾವುದೇ ಮೂಳೆಗಳು ಸಿಗದೇ, ನೀರು ಸೆಲೆ ಉಕ್ಕುತ್ತಿದೆ. ಇದರಿಂದ ಅಸ್ತಿಪಂಜ ಶೋಧ ಕಾರ್ಯಕ್ಕೂ ತಾತ್ಕಾಲಿಕ ತಡೆ ಉಂಟಾಗಿದ್ದು, ನೀರನ್ನು ಮೋಟರ್ ಬಳಸಿ ನದಿಗೆ ಹರಿಸಲಾಗುತ್ತಿದೆ.
ನೀರಿನಿಂದಾಗಿ ಹಿಟಾಚಿ ಕೆಲಸ ಸ್ಥಗಿತ
ಪಾಯಿಂಟ್ ನಂ. 13ರಲ್ಲಿ ನಡೆಯುತ್ತಿರುವ ಪರಿಶೋಧನೆಯಲ್ಲಿ ದೊಡ್ಡ ಹಿಟಾಚಿ ಯಂತ್ರವನ್ನು ಬಳಸಿಕೊಂಡು ಮಣ್ಣು ತೆಗೆಯುವ ಕಾರ್ಯ ಭರದಿಂದ ಸಾಗಿತ್ತು. ಆದರೆ, ಮಣ್ಣು ಅಗೆದಂತೆಲ್ಲಾ ಒಳಭಾಗದಿಂದ ನೀರು ಮಿಶ್ರಿತ ಮಣ್ಣು ಹೊರಬರಲಾರಂಭಿಸಿತು. ಅಷ್ಟೇ ಅಲ್ಲ, ಗುಂಡಿಯಲ್ಲಿ ನೀರಿನ ಸೆಲೆ ಸಿಕ್ಕಿದ್ದರಿಂದ ನೀರು ತುಂಬಿಕೊಳ್ಳಲು ಆರಂಭಿಸಿದೆ. ಇದರಿಂದಾಗಿ ಸಣ್ಣ ಹಿಟಾಚಿ ಯಂತ್ರದ ಕೆಲಸವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ ಮತ್ತು ದೊಡ್ಡ ಹಿಟಾಚಿ ಯಂತ್ರದ ಕೆಲಸವೂ ನಿಂತಿದೆ.
ನೀರು ಹೊರ ಹಾಕಲು ಸಿಬ್ಬಂದಿಗಳ ಹರಸಾಹಸ:
ಗುಂಡಿಯಲ್ಲಿ ತುಂಬಿರುವ ನೀರನ್ನು ಹೊರಹಾಕಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಸ್ಥಳದಲ್ಲಿ ಪಂಪ್ ಸೆಟ್ ಅಳವಡಿಸಲಾಗುತ್ತಿದೆ. ಆದರೆ, ಒಂದು ಪಂಪ್ ಸೆಟ್ ಕೈ ಕೊಟ್ಟ ಕಾರಣ, ಮತ್ತೊಂದು ಪಂಪ್ ಸೆಟ್ ಅಳವಡಿಸಲು ತಯಾರಿ ನಡೆಸಲಾಗುತ್ತಿದೆ. ಸ್ಥಳ ಪರಿಶೋಧನೆ ನಡೆಯುತ್ತಿರುವ ಜಾಗದ ಪಕ್ಕದಲ್ಲೇ ಧರ್ಮಸ್ಥಳದ ನೇತ್ರಾವತಿ ನದಿ ಅಣೆಕಟ್ಟು ಇರುವುದರಿಂದ, ಗುಂಡಿಯಿಂದ ಹೊರಬರುತ್ತಿರುವ ನೀರನ್ನು ನೇತ್ರಾವತಿ ನದಿಗೆ ಬಿಡಲು ಪ್ರಯತ್ನಿಸಲಾಗುತ್ತಿದೆ.
ಅನಾಮಿಕನ ಸುಳಿವುಗಳ ಮೇಲೆ ನಂಬಿಕೆ:
ಈವರೆಗೂ ಸುಮಾರು 13 ಅಡಿ ಆಳದಲ್ಲಿ ಮಣ್ಣು ತೆಗೆದು ಪರಿಶೋಧನೆ ನಡೆಸಲಾಗಿದ್ದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಮಣ್ಣಿನಲ್ಲಿ ಪ್ಲಾಸ್ಟಿಕ್, ಕಸ ಮತ್ತು ಗಿಡ-ಗಂಟಿಗಳು ಮಾತ್ರ ಸಿಕ್ಕಿವೆ. ಆದರೂ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಸ್ಥಳದಲ್ಲೇ ಇದ್ದು, ಪರಿಶೋಧನಾ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ. ಅನಾಮಿಕ ದೂರುದಾರನು ನೀಡಿದ ಸುಳಿವಿನ ಮೇಲೆ ನಂಬಿಕೆಯಿಟ್ಟು ಎಸ್‌ಐಟಿ ತಂಡವು ಈ ಕಾರ್ಯವನ್ನು ಮುಂದುವರೆಸಿದೆ.
ಇದೀಗ ಹಿಟಾಚಿ ಯಂತ್ರಗಳಿಂದ ಅಗೆಯಲಾದ ಗುಂಡಿಗಲ್ಲಿನ ನೀರನ್ನು ಹೊರಹಾಕಿದ ನಂತರ ಮತ್ತೆ ಉತ್ಖನನ ಕಾರ್ಯ ಆರಂಭಿಸುವ ಸಾಧ್ಯತೆ ಇದೆ. ಈ ಕಾರ್ಯಾಚರಣೆ ಯಾವ ಹಂತ ತಲುಪಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಅನಾಮಿಕ ತೋರಿಸಿದ ಎಲ್ಲ ಸ್ಥಳದಲ್ಲಿ ಗುಂಡಿ ಅಗೆದು ಶೋಧ ಕಾರ್ಯ ಮುಂದುವರೆಸಲು ಎಸ್‌ಐಟಿ ತಂಡ ಸಿದ್ಧವಾದಂತಿದೆ.


