ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧೀಜಿ ಹೆಸರು ಕೈಬಿಟ್ಟು 'ಜಿ ರಾಮ್ ಜಿ' ಎಂದು ಮರುನಾಮಕರಣ ಮಾಡಿರುವುದನ್ನು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಖಂಡಿಸಿದ್ದಾರೆ. ಇದು ಗಾಂಧೀಜಿಗೆ ಮಾಡಿದ ಅವಮಾನವಾಗಿದ್ದು, ಕೇಂದ್ರ ಸರ್ಕಾರವು ರಾಜ್ಯಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೊಪ್ಪಳ (ಡಿ.20): ಸೂರ್ಯ ಮುಳಗದ ಬ್ರಿಟಿಷ್ ಸಾಮ್ರಾಜ್ಯವನ್ನು ಯಾವುದೇ ಆಯುಧವಿಲ್ಲದೆ ಸತ್ಯಾಗ್ರಹ ಎಂಬ ಅಸ್ತ್ರದ ಮೂಲಕ ರಕ್ತಪಾತವಿಲ್ಲದೆ ಭಾರತದಿಂದ ತೊಲಗಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು. ದೇಶದ ಸಮಗ್ರ ಏಳಿಗೆಗಾಗಿ ಶ್ರಮಿಸಿದ ಗಾಂಧೀಜಿ ಅವರ ಹೆಸರು ಸದಾಕಾಲ ಜೀವಂತವಾಗಿರಬೇಕು ಎಂಬ ಕಾರಣಕ್ಕೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಹಾತ್ಮ ಗಾಂಧೀಜಿ ಹೆಸರು ನಾಮಕರಣ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಗ್ರಾಮೀಣ ಪ್ರದೇಶದ ಬಡವರಿಗೆ ನೆರವಾಗಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ. ಆದರೆ ಗಾಂಧೀಜಿ ಅವರ ಹೆಸರನ್ನು ಕೈಬಿಟ್ಟು ‘ಜಿ ರಾಮ್ ಜಿ’ ಎಂಬ ಹೆಸರು ನಾಮಕರಣ ಮಾಡಿರುವುದು ನಾಥುರಾಮ್ ಗೋಡ್ಸೆ ಹೆಸರನ್ನು ಉಳಿಸುವ ಪ್ರಯತ್ನದಂತೆ ಕಾಣುತ್ತದೆ ಎಂದು ಉಗ್ರಪ್ಪ ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳು ಕಡಿಮೆಯಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿದ್ದು, ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುವ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು. ರಾಜ್ಯಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಗೆ ಕೇವಲ 60.40 ಶೇಕಡಾ ಅನುದಾನ ಹಂಚಿಕೆ ಮಾಡಲಾಗಿದೆ. ರಾಜ್ಯಗಳು ಅಭಿವೃದ್ಧಿಯಾಗಬಾರದು ಎಂಬ ಮನೋಭಾವದ ಕೇಂದ್ರ ಸರ್ಕಾರದ ನೀತಿಯನ್ನು ನಾವು ಖಂಡಿಸುತ್ತೇವೆ ಎಂದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದವರು 20 ಲಕ್ಷ ಉದ್ಯೋಗವನ್ನೂ ನೀಡಿಲ್ಲ. ಇದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಗಾಂಧೀಜಿ ಅವರ ಹೆಸರನ್ನು ಕೈಬಿಟ್ಟು ಅಪಮಾನ ಮಾಡಿದ ಕ್ರಮ ತೀವ್ರ ಖಂಡನೀಯ ಎಂದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿ ಅನೇಕ ಹೋರಾಟಗಾರರು ಆರಂಭಿಸಿದ ಪತ್ರಿಕೆಯಾಗಿದೆ. ಇದು ಹಣಕ್ಕಾಗಿ ಆರಂಭಿಸಿದ ಪತ್ರಿಕೆಯಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರಯತ್ನ ಎಂದು ಉಗ್ರಪ್ಪ ಹೇಳಿದರು. ಡಾ. ಸುಬ್ರಹ್ಮಣ್ಯ ಸ್ವಾಮಿ ಅವರು 2015ರಲ್ಲಿ ನೀಡಿದ ದೂರಿನ ಆಧಾರದಲ್ಲಿ ಯಾವುದೇ ಎಫ್‌ಐಆರ್ ಇಲ್ಲದೆ ಇಡಿ ಸಂಸ್ಥೆ ಒತ್ತಡಕ್ಕೆ ಮಣಿದು ದುರುದ್ದೇಶಪೂರಿತವಾಗಿ ತನಿಖೆ ನಡೆಸಿ ರಾಹುಲ್ ಗಾಂಧಿ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿದೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ನೊಂದಣಿ ಇಲ್ಲದೆ ಫುಲ್‌ಟೈಮ್ ಕಾರ್ಯಕರ್ತರಿಗೆ ಸಂಬಳವನ್ನು ಎಲ್ಲಿಂದ ನೀಡುತ್ತೀರಿ? ಇಂತಹವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಹೆದರಿಸುವ ನಿಮ್ಮ ಆಟ ನಡೆಯದು ಎಂದು ಎಚ್ಚರಿಸಿದರು.

ಮೋದಿ, ಅಮಿತ್ ಶಾ ರಾಜೀನಾಮೆ ನೀಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಪೆವಿಕಲ್ ಹಚ್ಚಿಕೊಂಡಂತೆ ಕುರ್ಚಿಗೆ ಅಂಟಿಕೊಂಡಿದ್ದಾರೆ. ಬದ್ಧತೆ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ, ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.

ರಾಮನ ಆಶಯಗಳು ವರ್ಗಭೇದರಹಿತ, ಜಾತಿಭೇದರಹಿತ ಆಡಳಿತವಾಗಿತ್ತು. ರಾಮನ ಹೆಸರಿನಲ್ಲಿ ನಿಜವಾದ ಅಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕಿತ್ತು. ‘ವಿಕಸಿತ ಭಾರತ – ಜಿ ರಾಮ್ ಜಿ’ ಎಂಬ ಹೆಸರು ಗ್ರಾಮೀಣ ಜನರಿಗೆ ಅರ್ಥವಾಗುವುದೇ ಇಲ್ಲ. ಇದೂ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವ ಮತ್ತೊಂದು ಯತ್ನ ಎಂದು ಆರೋಪಿಸಿದರು. ಹನುಮನ ಜನ್ಮಸ್ಥಳ ಅಭಿವೃದ್ಧಿ ಯಾಕೆ ಮಾಡುತ್ತಿಲ್ಲ? ವಾಲ್ಮೀಕಿ ಹಗರಣವನ್ನು ಸಹಿಸಿಕೊಳ್ಳುವುದಿಲ್ಲ ಎಂದರು.

ಇನ್ನು ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಕೃಷ್ಣ ಇಟ್ಟಂಗಿ, ಶೈಲಜಾ ಹಿರೇಮಠ, ಪ್ರಸನ್ ಗಡಾದ, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಕಿಶೋರಿ ಬೂದೂರು, ಅಕ್ಬರ್ ಪಾಶಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.