ಧರ್ಮಸ್ಥಳ ನೇತ್ರಾವತಿ ನದಿ ತೀರದ 13ನೇ ಪಾಯಿಂಟ್‌ನಲ್ಲಿ ಅನಾಮಿಕ ದೂರುದಾರನ ಮಾಹಿತಿ ಮೇರೆಗೆ ಎಸ್‌ಐಟಿ ತಂಡ ಎರಡು ಹಿಟಾಚಿಗಳಿಂದ 10 ಅಡಿ ಆಳಕ್ಕೆ ಉತ್ಖನನ ಮುಂದುವರೆಸಿದೆ. ಜಿಪಿಆರ್ ಸ್ಕ್ಯಾನ್‌ನಲ್ಲಿ ಅಸ್ಥಿಪಂಜರದ ಕುರುಹು ಸಿಗದಿದ್ದರೂ, ಅನಾಮಿಕನ ನಿರ್ದೇಶನದಂತೆ ಉತ್ಖನನ ನಡೆಯುತ್ತಿದೆ.

ದಕ್ಷಿಣ ಕನ್ನಡ (ಆ.12): ನಾಪತ್ತೆಯಾದ ವ್ಯಕ್ತಿಗಳ ಪತ್ತೆಗಾಗಿ ನಡೆಸುತ್ತಿರುವ ತನಿಖೆಯಲ್ಲಿ, ಜಿಪಿಆರ್ (Ground-Penetrating Radar) ಯಂತ್ರದ ಶೋಶಧನೆಯಲ್ಲಿ ಯಾವುದೇ ಅಸ್ತಿಪಂಜರದ ಸುಳಿವು ದೊರೆಯದಿದ್ದರೂ, ಎಸ್‌ಐಟಿ (Special Investigation Team) ತಂಡವು ಅನಾಮಿಕ ದೂರುದಾರನ ಸೂಚನೆಯ ಮೇರೆಗೆ 2 ಹಿಟಾಚಿಗಳಿಂದ ಉತ್ಖನನ ಕಾರ್ಯವನ್ನು ಮುಂದುವರೆಸಿದೆ. ಅನಾಮಿಕ ತೋರಿದ ಎರಡು ಕಡೆಗೆ ತಲಾ 10 ಅಡಿ ಆಳಕ್ಕೆ ಗುಂಡಿ, ತೋಡುತ್ತಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಜಿಪಿಆರ್ ಶೋಧದಲ್ಲಿ ಫಲಿತಾಂಶ ಶೂನ್ಯ:

ಅನಾಮಿಕ ದೂರುದಾರ ವ್ಯಕ್ತಿ ತಾನು ಶವ ಹೂತಿರುವುದಾಗಿ ಗುರುತಿಸಿದ್ದ ಪಾಯಿಂಟ್ ನಂ. 13ರ ವ್ಯಾಪ್ತಿಯಲ್ಲಿ ಸುಮಾರು 300 ಮೀಟರ್ ಪ್ರದೇಶವನ್ನು ಜಿಪಿಆರ್ ಯಂತ್ರದಿಂದ ಸ್ಕ್ಯಾನ್ ಮಾಡಲಾಗಿತ್ತು. ಆದರೆ, ಯಂತ್ರವು ಯಾವುದೇ ಮಾನವ ಅಸ್ಥಿಪಂಜರ ಅಥವಾ ಅವಶೇಷಗಳ ಬಗ್ಗೆ ಸುಳಿವು ನೀಡಿಲ್ಲ. ತಾಂತ್ರಿಕವಾಗಿ ಯಾವುದೇ ನಿರ್ದಿಷ್ಟ ಪತ್ತೆ ಸಿಗದೇ ಇದ್ದರೂ, ಎಸ್‌ಐಟಿ ತಂಡವು ಅನಾಮಿಕ ದೂರುದಾರನ ಹೇಳಿಕೆಯ ಆಧಾರದ ಮೇಲೆ ಮತ್ತೊಮ್ಮೆ ಉತ್ಖನನ ಕಾರ್ಯಕ್ಕೆ ಮುಂದಾಗಿದೆ. ಈ ನಿರ್ಧಾರವು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಅನಾಮಿಕನ ನಿರ್ದೇಶನದಲ್ಲಿ ಹಿಟಾಚಿ ಬಳಕೆ:

ಉತ್ಖನನ ಪ್ರಕ್ರಿಯೆಯು ಎಸಿ (Assistant Commissioner) ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ನಡೆಯುತ್ತಿದೆ. ಅನಾಮಿಕ ದೂರುದಾರನು ನಿಖರವಾದ ಜಾಗವನ್ನು ಗುರುತಿಸಿರುವುದರಿಂದ, ಕಾರ್ಮಿಕರನ್ನು ಬಳಸದೆ ನೇರವಾಗಿ ಎರಡು ಹಿಟಾಚಿ ಯಂತ್ರಗಳನ್ನು ಬಳಸಿ ಅಗೆಯುವ ಕಾರ್ಯ ಆರಂಭಿಸಲಾಗಿದೆ. ಮೊದಲಿಗೆ ಒಂದು ಸಣ್ಣ ಹಿಟಾಚಿ ಯಂತ್ರವು ಸುಮಾರು 6 ಅಡಿಗಳಷ್ಟು ಅಗೆದಿತ್ತು. ಆದರೆ ಯಾವುದೇ ಸುಳಿವು ಸಿಗದ ಕಾರಣ, ಅದನ್ನು ಹಿಂದಕ್ಕೆ ಕಳುಹಿಸಿ, ಒಂದು ದೊಡ್ಡ ಹಿಟಾಚಿ ಯಂತ್ರವನ್ನು ತರಿಸಲಾಗಿದೆ. ಈ ಯಂತ್ರವು ಈಗ ಅದೇ ಗುಂಡಿಯನ್ನು ಮತ್ತಷ್ಟು ಆಳಕ್ಕೆ ಅಗೆಯುತ್ತಿದೆ. ಅನಾಮಿಕನು ಹಿಟಾಚಿ ಚಾಲಕನಿಗೆ ಸ್ಥಳದ ಬಗ್ಗೆ ವಿವರಣೆ ನೀಡುತ್ತಿರುವುದು ಕಂಡುಬಂದಿದೆ.

ಹತ್ತು ಅಡಿಗಳ ಉತ್ಖನನವೂ ನಿಷ್ಫಲ:

ಪಾಯಿಂಟ್ ನಂ. 13ರಲ್ಲಿ ಸುಮಾರು 10 ಅಡಿಗಳಷ್ಟು ಆಳಕ್ಕೆ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇದರಿಂದಾಗಿ ಅನಾಮಿಕನು ಮತ್ತೆ ಬೇರೆ ಜಾಗವನ್ನು ತೋರಿಸಿದ್ದು, ದೊಡ್ಡ ಹಿಟಾಚಿ ಮತ್ತೊಂದು ಭಾಗದಲ್ಲಿ ಅಗೆಯಲು ಆರಂಭಿಸಿದೆ. ಅದೇ ಸಮಯದಲ್ಲಿ, ಮತ್ತೊಂದು ಸಣ್ಣ ಹಿಟಾಚಿ ಯಂತ್ರವನ್ನು ಬೇರೆ ಹೊಸ ಜಾಗದಲ್ಲಿ ಉತ್ಖನನಕ್ಕಾಗಿ ಬಳಸಲಾಗುತ್ತಿದೆ.

ಒಂದು ಕಡೆ ಆಧುನಿಕ ತಂತ್ರಜ್ಞಾನವಾದ ಜಿಪಿಆರ್ ಯಂತ್ರವು ವಿಫಲವಾಗಿದ್ದರೂ, ಮತ್ತೊಂದು ಕಡೆ ಅನಾಮಿಕನ ಮಾಹಿತಿಯ ಮೇಲೆ ಅವಲಂಬಿಸಿ ಎಸ್‌ಐಟಿ ತಂಡವು ಈ ಮಹತ್ವದ ಕಾರ್ಯಾಚರಣೆಯನ್ನು ಮುಂದುವರೆಸಿರುವುದು, ತನಿಖೆಯ ಮುಂದಿನ ಹಾದಿಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಅನಾಮಿಕನು ನಿಜವಾಗಿಯೂ ಈ ಪ್ರಕರಣದ ಬಗ್ಗೆ ನಿಖರ ಮಾಹಿತಿ ಹೊಂದಿದ್ದಾನೆಯೇ ಅಥವಾ ಇದು ಕೇವಲ ಸಮಯ ವ್ಯರ್ಥವೇ ಎಂಬುದನ್ನು ಕಾದು ನೋಡಬೇಕಿದೆ.