ಬೆಂಗಳೂರು ಹೊರವಲಯದ ಆನೇಕಲ್ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಹಾಜರಾತಿ ದಂಧೆ ನಡೆದಿದೆ. ಲಕ್ಷಾಂತರ ರೂಪಾಯಿ ಹಣ ಪಡೆದು ಡಿಜಿಟಲ್ ಸಹಿ ತಿರುಚಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಡಿ.20): ಆನೇಕಲ್ ತಾಲ್ಲೂಕಿನ ಪ್ರತಿಷ್ಠಿತ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ದಾಖಲೆಗಳನ್ನು ತಿರುಚಿ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಹಾಜರಾತಿ ನೀಡುತ್ತಿದ್ದ ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಕಳೆದ ನವೆಂಬರ್ 25ರಂದು ದಾಖಲಾದ ಎಫ್‌ಐಆರ್ ಅನ್ವಯ, ಆನೇಕಲ್‌ನ ಪ್ರತಿಷ್ಠಿತ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಲಕ್ಷಾಂತರ ರೂಪಾಯಿಗಳ ಬೃಹತ್ ಶೈಕ್ಷಣಿಕ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೇ ಸೇರಿ ದಾಖಲೆಗಳನ್ನು ತಿರುಚುವ ಮೂಲಕ ಪರೀಕ್ಷೆಗೆ ಹಾಜರಾಗಲು ಬೇಕಾದ ಹಾಜರಾತಿಯನ್ನು ಅಕ್ರಮವಾಗಿ ಸೃಷ್ಟಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ದಂಧೆಯ ಕಾರ್ಯವೈಖರಿ
ಈ ವಂಚನೆ ಜಾಲದ ಕೇಂದ್ರಬಿಂದು ಕಾಲೇಜು ಸಿಬ್ಬಂದಿ ಮೋನಿಶ್ ಬಾಬು ಮತ್ತು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕಿಶೋರ್. ಆರೋಪಿ ಕಿಶೋರ್ ಕಾಲೇಜಿಗೆ ಬಾರದೆ ಹಾಜರಾತಿ ಕೊರತೆ ಅನುಭವಿಸುತ್ತಿದ್ದ ಬಿ.ಟೆಕ್ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಂದ ಲಕ್ಷಾಂತರ ರೂಪಾಯಿ ಹಣದ ಬೇಡಿಕೆಯಿಡುತ್ತಿದ್ದನು. ಹಣ ನೀಡಲು ಒಪ್ಪಿದ ವಿದ್ಯಾರ್ಥಿಗಳ ಪರವಾಗಿ ಸಿಬ್ಬಂದಿ ಮೋನಿಶ್ ಬಾಬು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳ ಡಿಜಿಟಲ್ ಸಹಿಯನ್ನು ಕದ್ದು ಹಾಜರಾತಿ ದಾಖಲೆಗಳನ್ನು ತಿರುಚುತ್ತಿದ್ದನು. ಈ ಮೂಲಕ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗದಿದ್ದರೂ, ಪರೀಕ್ಷೆ ಬರೆಯಲು ಅರ್ಹತೆ ಪಡೆಯುವಂತೆ ಮಾಡಲಾಗುತ್ತಿತ್ತು.
ಬಟಾಬಯಲಾದ ಮಹಾವಂಚನೆ
ಕಳೆದ ಮಾರ್ಚ್‌ನಿಂದ ನವೆಂಬರ್‌ವರೆಗೆ ಸತತವಾಗಿ ಈ ಅಕ್ರಮ ನಡೆದಿದ್ದು, ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ ತಿಂಗಳಲ್ಲಿ ಕಾಲೇಜು ಆಡಳಿತ ಮಂಡಳಿಯು ಆಂತರಿಕ ಪರಿಶೀಲನೆ ನಡೆಸಿದಾಗ ಈ ಹಗರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು ವಿಶ್ವವಿದ್ಯಾಲಯದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಅಲಯನ್ಸ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಆರೋಪಿಗಳ ವಿವರ
ಪೊಲೀಸರು ಆರು ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಸಿಬ್ಬಂದಿ ಮೋನಿಶ್ ಬಾಬು, ಕಿಶೋರ್ ಹಾಗೂ ಬಿ.ಟೆಕ್ ವಿದ್ಯಾರ್ಥಿಗಳಾದ ಪೊಟ್ಲಾ ತರುಣ್, ಸವ್ವಾ ತ್ರಿಣಯನ್ ರೆಡ್ಡಿ, ವಿನೋದ್ ಮತ್ತು ಕೊಂಡ ಪ್ರವೀಣ್ ಕುಮಾರ್ ರೆಡ್ಡಿ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಆದರೆ, ಪ್ರಕರಣ ದಾಖಲಾಗಿ ತಿಂಗಳು ಕಳೆಯುತ್ತ ಬಂದರೂ ಇದುವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಇಂತಹ ಗಂಭೀರ ಸ್ವರೂಪದ ಶೈಕ್ಷಣಿಕ ವಂಚನೆ ನಡೆದಿರುವುದು ಶೈಕ್ಷಣಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.


