ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಡ್ಯದ ಪ್ರಸಿದ್ಧ ಭೂವರಹನಾಥ ದೇವಾಲಯಕ್ಕೆ ದಂಪತಿ ಸಮೇತ ಭೇಟಿ ನೀಡಿ, ಎರಡು ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಮ್ಮ ತಿಹಾರ್ ಜೈಲಿನ ದಿನಗಳನ್ನು ನೆನಪಿಸಿಕೊಂಡ ಅವರು, ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಮಂಡ್ಯ(ನ.29): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಭೂವರಹನಾಥ ದೇವಾಲಯಕ್ಕೆ ಭೇಟಿ ನೀಡಿ, ದಂಪತಿ ಸಮೇತ ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದ ಡಿಕೆ ಶಿವಕುಮಾರ್ ಅವರು, ದೇವಾಲಯದ ಹಿನ್ನೆಲೆ ಮತ್ತು ತಮ್ಮ ವೈಯಕ್ತಿಕ ಅನುಭವಗಳನ್ನು ನೆನಪಿಸಿಕೊಂಡರು.
ಸತತ 2 ಗಂಟೆಗಳ ವಿಶೇಷ ಪೂಜೆ ಸಲ್ಲಿಸಿದ ದಂಪತಿ:
ದೇವಾಲಯಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ದಂಪತಿ, ಸತತ ಎರಡು ಗಂಟೆಗೂ ಹೆಚ್ಚು ಕಾಲ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ಪೂಜೆಯ ಭಾಗವಾಗಿ ಹೋಮ ಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದ ಅವರು, ನಂತರ ಅಭಿಷೇಕ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೂಜೆ ನಡೆಯುತ್ತಿದ್ದಾಗಲೇ ಪ್ರಸಾದ ಸ್ವೀಕರಿಸಿದ ಡಿಕೆಶಿ ದಂಪತಿ, ಬಳಿಕ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಡಿಕೆಶಿ ಅವರು ದೇಗುಲದ ಇತಿಹಾಸ ಮತ್ತು ಪ್ರಗತಿ ಕಾರ್ಯಗಳ ಬಗ್ಗೆ ಅರ್ಚಕರಿಂದ ಮಾಹಿತಿ ಪಡೆದರು.
ತಿಹಾರ್ ಜೈಲು ನೆನಪಿಸಿಕೊಂಡ ಡಿಕೆಶಿ:
ಪೂಜೆ ಪ್ರಾರ್ಥನೆ ಬಳಿಕ ದೇಗುಲದಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಭೂವರಹನಾಥ ದೇವಾಲಯದ ಮಹತ್ವವನ್ನು ವಿವರಿಸಿದರು.
ನಾನು ತಿಹಾರ್ ಜೈಲಿನಲ್ಲಿದ್ದಾಗ, ನಮ್ಮ ಅತ್ತೆ, ಮಾವ ಈ ದೇವಾಲಯಕ್ಕೆ ಬಂದು 4 ಬಾರಿ ಪ್ರಾರ್ಥನೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ಬೇರೆ ಪಕ್ಷದ ಸ್ನೇಹಿತರೊಬ್ಬರು ಇಲ್ಲಿಗೆ ಹೋಗುವಂತೆ ಹೇಳುತ್ತಿದ್ದರು. ಇಲ್ಲಿಗೆ ಬಂದು ನೋಡಿದಾಗ ಇದರ ಮಹಿಮೆ ಅರ್ಥವಾಯಿತು. ಇದು ಅದ್ಭುತ, ಐತಿಹಾಸಿಕ ದೇವಾಲಯ, ಎಂದು ಭಾವುಕರಾದರು.
ಈ ದೇವಾಲಯ ನಿರ್ಮಾಣದಲ್ಲಿ ಮುಸ್ಲಿಮರಿದ್ದಾರೆ:
ಈ ದೇವಾಲಯದಲ್ಲಿ ಎಲ್ಲಾ ಧರ್ಮದ ಜನರು ಬಂದು ಪ್ರಾರ್ಥನೆ ಸಲ್ಲಿಸುವುದನ್ನು ನೋಡಿ ನನಗೆ ಸಂತೋಷವಾಯಿತು ಎಂದ ಡಿಕೆ ಶಿವಕುಮಾರ ಅವರು, ಈ ದೇವಾಲಯ ಕಟ್ಟಲು ಕೆಲಸ ಮಾಡುತ್ತಿರುವವರು ಮುಸ್ಲಿಮರು. ಈ ದೇವಾಲಯದಲ್ಲಿ ಜಾತಿ, ಧರ್ಮ ಇಲ್ಲ ಎಂದರು ಮುಂದುವರಿದು, ಇವತ್ತು ಈ ದೇವಾಲಯಕ್ಕೆ ಬರಲು ಕಾರಣ ದೇವರ ಪ್ರೇರಣೆ. ಇಂದು ಬೆಳಗ್ಗೆಯಷ್ಟೇ ಭೇಟಿ ನಿಗದಿಯಾಯಿತು. ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು. ಇದೇ ವೇಳೆ, ತಮಗೆ ಉನ್ನತ ಹುದ್ದೆ ಸಿಗಲಿ ಎಂದು ಇಲ್ಲಿ ಹೋಮ ನಡೆದಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, 'ಅಂತಹ ವಿಚಾರ ನನಗೆ ಗೊತ್ತಿಲ್ಲ. ಎಲ್ಲಾ ಹಿರಿಯರು, ಸ್ವಾಮಿಗಳು ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ ಅಷ್ಟೇ,' ಎಂದು ಡಿಕೆಶಿ ಉತ್ತರಿಸಿದರು.


