ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ, ಟ್ಯೂಷನ್‌ನಿಂದ ಮನೆಗೆ ಮರಳುತ್ತಿದ್ದ ಆರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಈ ಘಟನೆಯಿಂದ ಆತಂಕಗೊಂಡಿರುವ ಸ್ಥಳೀಯರು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ವಿಜಯಪುರ ನ.29): ವಿಜಯಪುರ ಜಿಲ್ಲೆ, ನಿಡಗುಂದಿ: ವಿಜಯಪುರ ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಹಾವಳಿ ತೀವ್ರವಾಗಿದ್ದು, ನಿಡಗುಂದಿ ಪಟ್ಟಣದಲ್ಲಿ ಮತ್ತೊಂದು ದಾಳಿ ಸಂಭವಿಸಿದೆ. ನಿನ್ನೆ (ಶುಕ್ರವಾರ) ಸಂಜೆ ಪಟ್ಟಣದ ಬಿಲಾಲ್ ಕಾಲೋನಿಯಲ್ಲಿ ಟ್ಯೂಷನ್‌ನಿಂದ ಮನೆಗೆ ತೆರಳುತ್ತಿದ್ದ ಮಹಮ್ಮದ್ ಬಾಣಕರ (6) ಎಂಬ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪು ಏಕಾಏಕಿ ಎರಗಿ ಕಚ್ಚಿದೆ.

ಬಾಲಕನ ತೊಡೆ ಭಾಗಕ್ಕೆ ಕಚ್ಚಿದ ನಾಯಿ:

ಟ್ಯೂಷನ್ ಮುಗಿಸಿ ತನ್ನ ಪಾಡಿಗೆ ತಾನು ಬರುತ್ತಿದ್ದ ಬಾಲಕನ ಮೇಲೆ ಎರಗಿದ ಬೀದಿ ನಾಯಿಗಳು ಬಾಲಕನ ತೊಡೆಯ ಭಾಗಕ್ಕೆ ಗಂಭೀರವಾಗಿ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ತಕ್ಷಣ ಬಾಲಕನ ಸಹೋದರ, ಸ್ಥಳೀಯರು ಕೂಡಲೇ ದಾವಿಸಿ ಬಂದು ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಅಷ್ಟೊತ್ತಿಗಾಗಲೇ ತೊಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿದ್ದ ಶ್ವಾನಗಳು. ತಕ್ಷಣವೇ ಬಾಲಕನನ್ನು ನಿಡಗುಂದಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಹಮ್ಮದ್ ಬಾಣಕರನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ತಹಸೀಲ್ದಾರ್ ಎಡಿ ಅಮರಾವಡಗಿ ಭೇಟಿ:

ಈ ಘಟನೆ ಮಾಹಿತಿ ತಿಳಿದು ತಹಸೀಲ್ದಾರ್ ಎಡಿ ಅಮರಾವಡಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದಿ ನಾಯಿಗಳ ನಿರಂತರ ದಾಳಿಯಿಂದಾಗಿ ಪಟ್ಟಣದ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಕೂಡಲೇ ಸ್ಥಳೀಯ ಆಡಳಿತವು ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.