ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಐತಿಹಾಸಿಕ ಭೂವರಾಹನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಇಷ್ಟಾರ್ಥ ಸಿದ್ಧಿಗಾಗಿ ಮೃತ್ಯುಂಜಯ ಹೋಮದಲ್ಲಿ ಭಾಗಿಯಾಗಲಿದ್ದಾರೆ. ಅವರ ಆಗಮನಕ್ಕೂ ಮುನ್ನ ದೇಗುಲದ ಆವರಣದಲ್ಲಿ ಹೆಜ್ಜೇನು ದಾಳಿಯಿಂದಾಗಿ ಕೆಲಕಾಲ ಆತಂಕದ ವಾತಾವರಣ
ಮಂಡ್ಯ(ನ.29) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳ ಜೊತೆಗಿನ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಸಿ ಇದೀಗ ಟೆಂಪಲ್ ರನ್ ಆರಂಭಿಸಿದ್ದಾರೆ.
ಭೂವರಾಹನಾಥ ದೇವಸ್ಥಾನಕ್ಕೆ ಡಿಸಿಎಂ
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ವರಾಹನಾಥ ಕಲ್ಲಹಳ್ಳಿಯಲ್ಲಿರುವ ಐತಿಹಾಸಿಕ ಭೂವರಾಹನಾಥ ದೇವಸ್ಥಾನಕ್ಕೆ ಡಿಸಿಎಂ ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದಾರೆ. ಅವರ ಆಗಮನಕ್ಕೂ ಮುನ್ನವೇ ದೇವಸ್ಥಾನದ ಆವರಣದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಮೃತ್ಯುಂಜಯ ಹೋಮಕ್ಕೆ ಸಿದ್ಧತೆ ಮಾಡಲಾಗಿದ್ದು, ವಿಶೇಷ ಪೂಜೆ ಸಲ್ಲಿಸಿ ಬಳಿಕ ಡಿಕೆಶಿ ಅವರು ಹೋಮದಲ್ಲಿ ಭಾಗಿಯಾಗಲಿದ್ದಾರೆ.
ಡಿಕೆಶಿ ಆಗಮನಕ್ಕೂ ಮುನ್ನ ಹೆಜ್ಜೇನು ದಾಳಿ ಆತಂಕ:
ಡಿಸಿಎಂ ಅವರನ್ನು ಸ್ವಾಗತಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಈಗಾಗಲೇ ದೇಗುಲದ ಬಳಿ ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ನಡುವೆ, ಡಿಕೆಶಿ ಆಗಮನಕ್ಕೂ ಮುನ್ನವೇ ದೇಗುಲದ ಆವರಣದಲ್ಲಿ ಹೆಜ್ಜೇನುಗಳ ದಾಳಿ ಸಂಭವಿಸಿದ್ದು, ಏಕಾಏಕಿ ಒಂದಿಬ್ಬರು ಭಕ್ತರ ಮೇಲೆ ಜೇನುಗಳು ದಾಳಿ ಮಾಡಿವೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಥಳದಲ್ಲಿದ್ದ ಭಕ್ತರು ಕೆಲ ಕಾಲ ಆತಂಕಗೊಂಡಿದ್ದರು. ಈ ಆತಂಕದ ಮಧ್ಯೆಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.


