2026ರ ಲಾಲ್‌ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಸಂಪೂರ್ಣ ಮಾಹಿತಿ. ಪೂರ್ಣಚಂದ್ರ ತೇಜಸ್ವಿ ಕುರಿತ ವಿಶೇಷ ಪ್ರದರ್ಶನದ ದಿನಾಂಕ, ಸ್ಪರ್ಧೆಯ ವಿವರಗಳನ್ನು ತಿಳಿಯಲು ಕ್ಲಿಕ್ ಮಾಡಿ.
ಬೆಂಗಳೂರು (ಜ.01): ಉದ್ಯಾನನಗರಿ ಬೆಂಗಳೂರಿನ ಹೆಮ್ಮೆಯ ಲಾಲ್‌ಬಾಗ್‌ನಲ್ಲಿ 2026ರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಜನವರಿ 15 ರಿಂದ 26 ರವರೆಗೆ ನಡೆಯಲಿರುವ ಈ ಬಾರಿಯ ಪುಷ್ಪ ಪ್ರದರ್ಶನವು ಕನ್ನಡದ ಖ್ಯಾತ ಸಾಹಿತಿ, ಚಿಂತಕ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಸಾಹಿತ್ಯದ ಚಿತ್ರಣವನ್ನು ಬಿಂಬಿಸಲಿದೆ.
ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಿವಿಧ ಉದ್ಯಾನವನಗಳು, ತೋಟಗಳು, ತಾರಸಿ/ ಕೈತೋಟಗಳು, ತರಕಾರಿ/ ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2026 ರ ಜನವರಿ 17 ರಂದು ಹಮ್ಮಿಕೊಳ್ಳಲಾಗಿದೆ.
ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು / ಪ್ರದರ್ಶಕರಿಂದ ಅರ್ಜಿಗಳನ್ನು 2026 ಜನವರಿ 5 ರಿಂದ 12 ರವರೆಗೆ ಸ್ವೀಕರಿಸಲಾಗುವುದು. ತೋಟಗಾರಿಕಾ ಅಪರ ನಿರ್ದೇಶಕರು (ತಾಳೆಬೆಳೆ) ಲಾಲ್ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾರಕೇಶ್ವರಿ ಕೆ.ಆರ್ ಅವರನ್ನು 8497048733 ಮೂಲಕ ಹಾಗೂ ಪುಷ್ಪಲತಾ ಎಂ. ಅವರನ್ನು 8904592122 ಮೂಲಕ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:
ಇಕೆಬಾನ ಮತ್ತು ಪೂರಕ ಕಲೆಗಳು: ಅರ್ಜಿ ಸಲ್ಲಿಕೆ ಜನವರಿ 5 ರಿಂದ 12 ರವರೆಗೆ. ತೋಟಗಾರಿಕಾ ಅಪರ ನಿರ್ದೇಶಕರ ಕಚೇರಿ (ತಾಳೆಬೆಳೆ), ಲಾಲ್‌ಬಾಗ್‌ನಲ್ಲಿ ಅರ್ಜಿ ಲಭ್ಯವಿರುತ್ತದೆ. ಮಾಹಿತಿಗಾಗಿ: 8497048733 / 8904592122.
ತೋಟಗಳು ಮತ್ತು ಕುಂಡಗಳ ಸ್ಪರ್ಧೆ: ಅರ್ಜಿ ಸಲ್ಲಿಕೆ ಜನವರಿ 2 ರಿಂದ 9 ರವರೆಗೆ. ತೋಟಗಾರಿಕಾ ಅಪರ ನಿರ್ದೇಶಕರ ಕಚೇರಿ (ತೋಟದ ಬೆಳೆಗಳು), ಲಾಲ್‌ಬಾಗ್‌ನಲ್ಲಿ ಅರ್ಜಿ ಪಡೆಯಬಹುದು. ಮಾಹಿತಿಗಾಗಿ: 9845549545 / 9886819217.
ಇಲಾಖಾ ಮಳಿಗೆಗಳ ಹಂಚಿಕೆ: ಜನವರಿ 2 ರಿಂದ 6 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಾರ್ಯನಿರ್ವಾಹಕ ನಿರ್ದೇಶಕರು (ರಾಷ್ಟ್ರೀಯ ತೋಟಗಾರಿಕೆ ಮಿಷನ್) ಕಚೇರಿಯಿಂದ ಅರ್ಜಿ ಪಡೆಯಬಹುದು. ಮಾಹಿತಿಗಾಗಿ: 9036986445 / 8050592016.
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಈ ಫಲಪುಷ್ಪ ಪ್ರದರ್ಶನವು ಈ ಬಾರಿ ತೇಜಸ್ವಿ ಅವರ ಪ್ರಕೃತಿ ಪ್ರೇಮವನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಿದೆ ಎಂದು ಲಾಲ್‌ಬಾಗ್ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.


