Ballari political clash Bharath Reddy: ಬಳ್ಳಾರಿ ಬ್ಯಾನರ್ ವಿಚಾರವಾಗಿ ಶಾಸಕ ಭರತ್ ರೆಡ್ಡಿ- ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಭೀಕರ ಸಂಘರ್ಷ ನಡೆದಿದೆ. ಈ ವೇಳೆ ಫೈರಿಂಗ್ ನಡೆದಿದ್ದು, ತಮ್ಮನ್ನು ಹ೧ತ್ಯೆ ಮಾಡಲು ಯತ್ನಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 

ಬಳ್ಳಾರಿ (ಜ.1) ಗಣಿ ನಾಡು ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಆರಂಭವಾದ ಕಿಡಿ ಈಗ ಭೀಕರ ಸಂಘರ್ಷಕ್ಕೆ ನಾಂದಿ ಹಾಡಿದೆ. ಶಾಸಕ ಭರತ್ ರೆಡ್ಡಿ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ನಡೆದ ಗಲಾಟೆ ಅಕ್ಷರಶಃ ರಣರಂಗವನ್ನು ನೆನಪಿಸುತ್ತಿದೆ. ಈ ವೇಳೆ ಫೈರಿಂಗ್ ನಡೆದಿದ್ದು, ರೆಡ್ಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಗಾಲಿ ಜನಾರ್ದನ್ ರೆಡ್ಡಿ ಹತ್ಯೆ ಯತ್ನ?

ಘಟನೆಯ ನಂತರ ಶ್ರೀರಾಮುಲು ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, ತಮ್ಮ ಮೇಲೆ ನಡೆದ ದಾಳಿ ವಿವರಿಸಿದರು. ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಬ್ಯಾನರ್ ಹಾಕುವ ನೆಪದಲ್ಲಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ. ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ನಾನು ಹೋದಾಗ ಶಾಸಕ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಗ್ಯಾಂಗ್ ಫೈರಿಂಗ್ ಮಾಡಿದೆ ಎಂದು ಆರೋಪಿಸಿದ ರೆಡ್ಡಿ, ಸ್ಥಳದಲ್ಲಿ ಸಿಕ್ಕ ಬುಲೆಟ್ ತೋರಿಸಿ ಹತ್ಯಾಯತ್ನದ ಸಾಕ್ಷಿ ಬಿಡುಗಡೆ ಮಾಡಿದರು.

ಇಪ್ಪತ್ತು ವರ್ಷ ಮನೆಯಿಂದ ಹೊರಬರದಂತೆ ಮಾಡಿದ್ದೆ

ಭರತ್ ರೆಡ್ಡಿ ಕುಟುಂಬದ ವಿರುದ್ಧ ಗುಡುಗಿದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಅಪ್ಪ ಸೂರ್ಯನಾರಾಯಣ ರೆಡ್ಡಿ ಏನು ಎಂಬುದು ನನಗೆ ಗೊತ್ತು. ಅವರ ಅಪ್ಪನನ್ನು 20 ವರ್ಷ ಮನೆಯಿಂದ ಹೊರಬರದಂತೆ ಮಾಡಿದ್ದೇ ನಾನು. ಈಗ ಇವರ ಮಗ ಬಿಹಾರದ ರೌಡಿಗಳನ್ನು ಕರೆದುಕೊಂಡು ಬಂದು ಬಳ್ಳಾರಿಯಲ್ಲಿ ರೌಡಿಸಂ ಮಾಡುತ್ತಿದ್ದಾರೆ. ನನ್ನನ್ನು ಎದುರು ಹಾಕಿಕೊಂಡರೆ ದೊಡ್ಡ ಮನುಷ್ಯ ಆಗಬಹುದು ಎಂಬ ಭ್ರಮೆಯಲ್ಲಿದ್ದಾರೆ' ವಾಗ್ದಾಳಿ ನಡೆಸಿದರು.

ಶ್ರೀರಾಮುಲು ಮೇಲೂ ದೌರ್ಜನ್ಯದ ಯತ್ನ!

ಘಟನೆಯ ಆರಂಭದ ಬಗ್ಗೆ ವಿವರಿಸಿದ ಮಾಜಿ ಸಚಿವ ಶ್ರೀರಾಮುಲು, 'ಬ್ಯಾನರ್ ಹಾಕೋದು ಕೇವಲ ನೆಪಮಾತ್ರ, ಇವರು ಗಲಾಟೆ ಮಾಡುವ ಉದ್ದೇಶದಿಂದಲೇ ಬಂದಿದ್ದರು. ನಾನು ಈ ಬಗ್ಗೆ ಪ್ರಶ್ನೆ ಮಾಡಿದಾಗ ನನ್ನ ಮೇಲೂ ದೌರ್ಜನ್ಯ ಮಾಡಲು ಮುಂದಾದರು. ಜನಾರ್ದನ ರೆಡ್ಡಿ ಅವರ ಮೇಲೆ ನೇರವಾಗಿ ಗುಂಡಿನ ದಾಳಿ ನಡೆಸುವ ಮೂಲಕ ಹೇಡಿತನದ ರಾಜಕೀಯ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು. ಶಾಸಕರಿಗೇ ಭದ್ರತೆ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ರಕ್ತಾಭಿಷೇಕ ಮಾಡಿಯಾದ್ರೂ ಪುತ್ಥಳಿ ಅನಾವರಣ: ಭರತ್ ರೆಡ್ಡಿ ಸವಾಲು!

ಇತ್ತ ಜನಾರ್ದನ ರೆಡ್ಡಿ ಆರೋಪಗಳಿಗೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಶಾಸಕ ಭರತ್ ರೆಡ್ಡಿ, ರಕ್ತಾಭಿಷೇಕ ಮಾಡಿಯಾದರೂ ಸರಿ, ವಾಲ್ಮೀಕಿ ಪುತ್ಥಳಿಯನ್ನು ಅನಾವರಣ ಮಾಡಿಯೇ ತೀರುತ್ತೇವೆ. ಬಿಜೆಪಿ ನಾಯಕರು ಬೇಕೆಂದೇ ಗಲಾಟೆ ಮಾಡುತ್ತಿದ್ದಾರೆ. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ, ಯಾರನ್ನೂ ಬಿಡುವುದಿಲ್ಲ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾರ್ದನ ರೆಡ್ಡಿ ಆಕ್ರೋಶ

ರಾಜಕೀಯ ದ್ವೇಷಕ್ಕಾಗಿ ವೈಯಕ್ತಿಕ ಜೀವ ತೆಗೆಯಲು ಮುಂದಾಗಿರುವುದು ಲಜ್ಜೆಗೆಟ್ಟ ರಾಜಕಾರಣ. ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ. ಹಲ್ಲೆ ಮಾಡುವವರಿಗೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ರೆಡ್ಡಿ ಆರೋಪಿಸಿದರು. ಬಳ್ಳಾರಿಯಲ್ಲಿ ಈಗ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.