ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ತಿರುಪತಿ ಯಾತ್ರೆಯಲ್ಲಿದ್ದ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪ್ರಯಾಣ ರದ್ದುಗೊಳಿಸಿ ಹಿಂತಿರುಗುತ್ತಿದ್ದು, ಪಾರ್ಥಿವ ಶರೀರ ದಾವಣಗೆರೆಗೆ ರವಾನಿಸಲು ಸಿದ್ಧತೆ
ಬೆಂಗಳೂರು(ಡಿ.14): ರಾಜ್ಯ ರಾಜಕಾರಣದ ಹಿರಿಯಣ್ಣ, ಅಜಾತಶತ್ರು, ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಇಂದು (ಡಿಸೆಂಬರ್ 14) ಸಂಜೆ 6.45ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ತಂದೆಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ತಿರುಪತಿ ಯಾತ್ರೆ ರದ್ದು
ತಂದೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ತಿರುಪತಿ ಯಾತ್ರೆಗೆ ತೆರಳಿದ್ದ ಅವರ ಪುತ್ರ, ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್ ಅವರ ಕುಟುಂಬವು ತಕ್ಷಣವೇ ಪ್ರಯಾಣವನ್ನು ರದ್ದುಗೊಳಿಸಿ ವಾಪಸ್ ಬೆಂಗಳೂರಿಗೆ ಬರುತ್ತಿದೆ. ಸಚಿವ ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸೇರಿ ಕುಟುಂಬದ ಸದಸ್ಯರು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದರು ಅದಾಗಲೇ ಆಂಧ್ರ ಗಡಿಯನ್ನು ದಾಟಿ ಹೋಗಿದ್ದರು. ಆದರೆ ಈ ವೇಳೆ ತಂದೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರು ಪ್ರಯಾಣ ಮಧ್ಯದಲ್ಲಿಯೇ ವಾಪಸ್ ಆಗುತ್ತಿದ್ದಾರೆ.
ವಿದೇಶದಲ್ಲಿರುವ ಮಕ್ಕಳಿಗೆ ಕುಟುಂಬದಿಂದ ಮಾಹಿತಿ ರವಾನೆ
ಶಾಮನೂರು ಶಿವಶಂಕರಪ್ಪ ಅವರಿಗೆ ಒಟ್ಟು 7 ಜನ ಮಕ್ಕಳಿದ್ದಾರೆ. ಪುತ್ರ ಎಸ್.ಎಸ್. ಗಣೇಶ್ ಅವರು ಅಸ್ಸಾಂ ದೇವಾಲಯಕ್ಕೆ ಹೋಗಿದ್ದು, ಅವರಿಗೆ ಕುಟುಂಬಸ್ಥರಿಂದ ಮಾಹಿತಿ ರವಾನಿಸಲಾಗಿದೆ. ಅಲ್ಲದೆ, ಇಬ್ಬರು ಹೆಣ್ಣುಮಕ್ಕಳು ವಿದೇಶದಲ್ಲಿದ್ದು, ಅವರಿಗೂ ಕುಟುಂಬದಿಂದ ನಿಧನದ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ, ಆಸ್ಪತ್ರೆಯಲ್ಲಿ ಕೆಲ ಕುಟುಂಬಸ್ಥರು ಹಾಜರಿದ್ದು, ಮುಂದಿನ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.
ದಾವಣಗೆರೆಗೆ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ
ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿಯೇ ದಾವಣಗೆರೆಗೆ ರವಾನಿಸುವ ಸಾಧ್ಯತೆ ಇದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬೆಂಗಳೂರಿಗೆ ಬಂದು ತಲುಪಿದ ನಂತರ, ದಾವಣಗೆರೆಗೆ ಹೋಗಲು ಕುಟುಂಬಸ್ಥರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಪಾರ್ಥಿವ ಶರೀರವನ್ನು ದಾವಣಗೆರೆಗೆ ತೆಗೆದುಕೊಂಡು ಹೋಗಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.


