ಹಿರಿಯ ರಾಜಕಾರಣಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿದ್ದಾರೆ.
ಬೀದರ್(ಡಿ.14): ರಾಜ್ಯ ರಾಜಕಾರಣದ ಹಿರಿಯಣ್ಣ, ಅಜಾತಶತ್ರು, ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಇಂದು (ಡಿಸೆಂಬರ್ 14) ಸಂಜೆ 6.45ಕ್ಕೆ ನಿಧನರಾಗಿದ್ದು, ಅವರ ಅಗಲಿಕೆಗೆ ನಾಡಿನ ಮಠಾಧೀಶರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪಂಚಪೀಠವನ್ನು ಪ್ರಾಣದಂತೆ ಪ್ರೀತಿಸಿದ್ದ ನಾಯಕನ ಅಗಲಿಕೆ
ಬೀದರ್‌ನಲ್ಲಿ ಮಾತನಾಡಿದ ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು, ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಅವರು ನಾಡಿನ ಹಿರಿಯ ರಾಜಕಾರಣಿ, ಪಂಚಪೀಠವನ್ನು ಪ್ರಾಣದಷ್ಟೂ ಪ್ರೀತಿ ಮಾಡಿದವರು. ಅವರ ಅಗಲಿಕೆ ವೀರಶೈವ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಶ್ರೀಗಳು ಶೋಕ ವ್ಯಕ್ತಪಡಿಸಿದ್ದಾರೆ.
ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದುಗೊಳಿಸಿದ ಶ್ರೀಗಳು
ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ಪಂಚಾಚಾರ್ಯರು ಅನುಗ್ರಹಿಸಲಿ ಎಂದು ಕಾಶಿ ಜಗದ್ಗುರುಗಳು ಪ್ರಾರ್ಥಿಸಿದರು. ಈ ಹಿನ್ನೆಲೆಯಲ್ಲಿ, ನಾಳೆ ಜರುಗಬೇಕಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಿ ತಾನು ದಾವಣಗೆರೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರಿಗೆ ಆಶೀರ್ವದಿಸಲು ತಾನು ದಾವಣಗೆರೆಗೆ ಹೋಗುವುದಾಗಿ ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಮಾಹಿತಿ ನೀಡಿದ್ದಾರೆ.


