Ganga residence Kumarakrupa road ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಕೃಪ ರಸ್ತೆಯ ತಮ್ಮ ನೂತನ ಅಧಿಕೃತ ನಿವಾಸ 'ಗಂಗಾ'ದಲ್ಲಿ 500 ಗಣ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಸಮಯವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.
ಬೆಂಗಳೂರು(ನ.19): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM DK Shivakumar) ಅವರು ‘ಕುಮಾರಕೃಪ’ ರಸ್ತೆ(Kumarakrupa Rd)ಯಲ್ಲಿರುವ ತಮ್ಮ ನೂತನ ಅಧಿಕೃತ ನಿವಾಸ ‘ಗಂಗಾ’(Ganga)ದಲ್ಲಿ ಸಂಪುಟ ಸಚಿವರು, ಸರ್ವಪಕ್ಷಗಳ ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ 500 ಮಂದಿಗೆ ಗುರುವಾರ ಔತಣಕೂಟ ಏರ್ಪಡಿಸಿದ್ದಾರೆ.
ಔತಣಕೂಟದಲ್ಲಿ ಯಾರಾರು ಭಾಗಿ, ಎಷ್ಟು ಜನರಿಗೆ ಅವಕಾಶ?
ಸೋಮವಾರವಷ್ಟೇ ‘ಗಂಗಾ’ದಲ್ಲಿ ಸಿಎಂ ಖಾಸಗಿಯಾಗಿ ಪೂಜೆ ನೆರವೇರಿಸಿ ಅಧಿಕೃತವಾಗಿ ಪ್ರವೇಶಿಸಿದ್ದರು. ರಾಜ್ಯದ 224 ಶಾಸಕರು, 70ಕ್ಕೂ ಹೆಚ್ಚು ಮಂದಿ ಪರಿಷತ್ ಸದಸ್ಯರು, 41 ಜನ ಸಂಸದರು ಮತ್ತು ರಾಜ್ಯಸಭೆ ಸದಸ್ಯರು, 30 ಜನ ಕಾಂಗ್ರೆಸ್ ಮುಖಂಡರು, ಆಯ್ದ 30 ನಿಗಮ-ಮಂಡಳಿಗಳ ಅಧ್ಯಕ್ಷರು, 30 ಜನ ಕಾಂಗ್ರೆಸ್ ಮುಂಚೂಣಿ ಘಟಕಗಳ ಪದಾಧಿಕಾರಿಗಳು, 2023ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೇರಿ ಒಟ್ಟು 500 ಜನರಿಗೆ ಔತಣಕೂಟ ಆಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟ ಸಭೆ ಸಮಯ ಬದಲು
ಈ ಮೊದಲು ನ.19 ರಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಸಲು ಸಮಯ ನಿಗದಿಯಾಗಿತ್ತು. ಇದೀಗ 12.30 ಗಂಟೆಗೆ ಔತಣ ಕೂಟ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ಸಚಿವರು ಔತಣ ಕೂಟ ಮುಗಿಸಿಕೊಂಡು ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ.














