ಕಾರ್ತಿಕ ಸೋಮವಾರದ ನಿಮಿತ್ತ ವಿಜಯಪುರದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಸಾವಿರಾರು ಭಕ್ತರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಪುಣ್ಯಸ್ನಾನ ಮಾಡಿದರು. ವಾಹನಗಳ ದಟ್ಟಣೆಯಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅಪಾಯದ ಭೀತಿಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ವಿಜಯಪುರ (ನ.16): ನೀವು ಈ ದೃಶ್ಯವನ್ನು ನೋಡಿದರೆ ಮೇಲ್ನೋಟಕ್ಕೆ ಉತ್ತರ ಭಾರತದ ಪ್ರಯಾಗ್‌ರಾಜ್‌ನ ಗಂಗಾ-ಯಮುನಾ ನದಿಯ ತೀರ್ಥ ಸ್ನಾನದ ದೃಶ್ಯಗಳಂತೆ ಭಾಸವಾಗಬಹುದು. ಆದರೆ, ಇದು ನಮ್ಮದೇ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲಾದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕಂಡುಬಂದ ಭಕ್ತಿಪರವಶ ದೃಶ್ಯ!

ಪವಿತ್ರ ಕಾರ್ತಿಕ ಸೋಮವಾರದ ನಿಮಿತ್ತ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ) ಹಿನ್ನೀರಿನಲ್ಲಿ ಇಂದು ಭಕ್ತಸಾಗರವೇ ಹರಿದುಬಂದಿತ್ತು. ನೆರೆಯ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ದುರ್ಗಾದೇವಿ ಜಾತ್ರೆಗೆ ಆಗಮಿಸಿದ್ದ ಗದ್ದನಕೇರಿ ಮಠದ ಸಾವಿರಾರು ಭಕ್ತರು, ನೂರಾರು ವಾಹನಗಳಲ್ಲಿ ಆಲಮಟ್ಟಿಗೆ ಆಗಮಿಸಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಪುಣ್ಯಸ್ನಾನ ನೆರವೇರಿಸಿದರು.

ಸುರಕ್ಷತಾ ಕ್ರಮಗಳಿಲ್ಲದೆ ನದಿಗಿಳಿದ ಭಕ್ತರು; ಸ್ಥಳೀಯರಲ್ಲಿ ಆತಂಕ:

ಪುಣ್ಯಸ್ನಾನದ ಸಂಭ್ರಮದಲ್ಲಿ ಭಕ್ತರು ಮುಗಿಬಿದ್ದು ನದಿಗಿಳಿಯುತ್ತಿರುವುದು ಒಂದೆಡೆ ಭಕ್ತಿಯ ಪರಾಕಾಷ್ಠೆಯಾದರೆ, ಮತ್ತೊಂದೆಡೆ ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆಲಮಟ್ಟಿ ಹಿನ್ನೀರಿನ ಆಳವಾದ ಪ್ರದೇಶದಲ್ಲಿ ಯಾವುದೇ ಬ್ಯಾರಿಕೇಡ್‌ಗಳಾಗಲಿ, ನುರಿತ ಈಜುಗಾರರಾಗಲಿ ಅಥವಾ ಮುನ್ನೆಚ್ಚರಿಕೆ ಫಲಕಗಳಾಗಲಿ ಇಲ್ಲದೆ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಏಕಕಾಲಕ್ಕೆ ನೀರಿಗಿಳಿದು ಸ್ನಾನ ಮಾಡುತ್ತಿದ್ದಾರೆ. ಸಣ್ಣದೊಂದು ಅಜಾಗರೂಕತೆ ನಡೆದರೂ ದೊಡ್ಡ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.

ಗದ್ದನಕೇರಿಯಿಂದ ಆಲಮಟ್ಟಿವರೆಗೆ ವಾಹನಗಳ ಸಾಲು:

ಏಕಕಾಲಕ್ಕೆ ನೂರಾರು ಖಾಸಗಿ ವಾಹನಗಳು, ಟ್ರ್ಯಾಕ್ಟರ್ ಹಾಗೂ ಬಸ್‌ಗಳಲ್ಲಿ ಭಕ್ತರು ಆಗಮಿಸಿದ್ದರಿಂದ ರಸ್ತೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಗದ್ದನಕೇರಿಯಿಂದ ಆರಂಭಿಸಿ ಬಾಗಲಕೋಟೆ, ಶಿರೂರು, ಹೊಸೂರು ಮಾರ್ಗವಾಗಿ ಆಲಮಟ್ಟಿ ಡ್ಯಾಂವರೆಗೂ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ಭಾರೀ ಸಂಚಾರ ದಟ್ಟಣೆಯಿಂದಾಗಿ ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರೆ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಯಿತು. ಭಕ್ತರ ಪುಣ್ಯಸ್ನಾನದ ಸಂಭ್ರಮದ ನಡುವೆ ಸ್ಥಳದಲ್ಲಿ ಸೂಕ್ತ ಭದ್ರತೆ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆ ಕಲ್ಪಿಸುವುದು ಪೊಲೀಸ್ ಹಾಗೂ ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.