ಬೆಂಗಳೂರಿನ ಐತಿಹಾಸಿಕ 'ಕುಮಾರ ಕೃಪಾ' ಅತಿಥಿಗೃಹವನ್ನು 'ಗಂಗಾ' ಎಂದು ಮರುನಾಮಕರಣ ಮಾಡಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿ ಮಾಡಲಾಗಿದೆ. ಸರ್ ಕೆ.ಶೇಷಾದ್ರಿ ಅಯ್ಯರ್ ಕಟ್ಟಿಸಿದ ಈ ಖಾಸಗಿ ಬಂಗಲೆ ಸರ್ಕಾರಿ ಅತಿಥಿಗೃಹವಾದ ಕುತೂಹಲಕಾರಿ ಕಥೆ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ 'ಕುಮಾರ ಕೃಪಾ' ಅತಿಥಿಗೃಹ ಮತ್ತೆ ಸುದ್ದಿಯಲ್ಲಿದೆ. ದಶಕಗಳಿಂದ ರಾಜ್ಯ ರಾಜಕಾರಣದ ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದ್ದ ಹಳೆಯ ಪಾರಂಪರಿಕ ಬಂಗಲೆಯು ನವೀಕರಣಗೊಂಡಿದೆ. ಜೊತೆಗೆ 'ಗಂಗಾ' ಎಂಬ ಹೊಸ ಹೆಸರಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ನಿವಾಸವಾಗಿ ಬದಲಾಯಿಸಲಾಗಿದೆ.
ರಾಜಕೀಯ ಇತಿಹಾಸದ ಪರಂಪರೆಯನ್ನೇ ಹೊಂದಿರುವ ಈ ಕುಮಾರ ಕೃಪಾ ಅತಿಥಿಗೃಹ ಆರಂಭದಲ್ಲಿ ಸರ್ಕಾರಿ ಕಟ್ಟಡವಾಗಿರಲಿಲ್ಲ. ಅದೊಂದು ಖಾಸಗಿ ಮನೆಯಾಗಿತ್ತು. ಹಾಗಾದರೆ ಒಬ್ಬ ವ್ಯಕ್ತಿಯ ಸ್ವಂತ ಬಂಗಲೆ ಸರ್ಕಾರಿ ಅತಿಥಿಗೃಹವಾಗಿದ್ದು ಹೇಗೆ? ಆ ಕುತೂಹಲಕಾರಿ ಕಥೆ ಇಲ್ಲಿದೆ.
ಮೈಸೂರು ಸಂಸ್ಥಾನದಲ್ಲಿ ದೀರ್ಘಕಾಲ ದಿವಾನರಾಗಿ ಸೇವೆ ಸಲ್ಲಿಸಿದ ಮತ್ತು 'ಆಧುನಿಕ ಬೆಂಗಳೂರಿನ ನಿರ್ಮಾಪಕ' ಎಂದೇ ಹೆಸರಾದ ಸರ್ ಕೆ.ಶೇಷಾದ್ರಿ ಅಯ್ಯರ್ (1883–1901) ಅವರು ತಮ್ಮ ಸ್ವಂತ ವಾಸಕ್ಕಾಗಿ ಕಟ್ಟಿಸಿದ ಬಂಗಲೆ ಇದಾಗಿದೆ. 1897ರ ಸುಮಾರಿಗೆ ಈ ಭವ್ಯ ಬಂಗಲೆಯನ್ನು ನಿರ್ಮಿಸಲಾಯಿತು. ಕೇರಳದ ಪಾಲಕ್ಕಾಡ್ನ 'ಕುಮಾರಪುರಂ' ಮೂಲದವರಾದ ಶೇಷಾದ್ರಿ ಅಯ್ಯರ್ಗೆ ಸುಬ್ರಹ್ಮಣ್ಯ ಸ್ವಾಮಿ (ಕುಮಾರಸ್ವಾಮಿ) ಕುಲದೇವರಾಗಿದ್ದರು. ತಮ್ಮ ಕುಲದೇವರ ಆಶೀರ್ವಾದದಿಂದ ಕಟ್ಟಿಸಿದ ಮನೆ ಎಂಬ ಅರ್ಥದಲ್ಲಿ ಈ ಬಂಗಲೆಗೆ 'ಕುಮಾರ ಕೃಪಾ' ಎಂದು ಹೆಸರಿಟ್ಟರು.
ಖಾಸಗಿ ಬಂಗಲೆ ಸರ್ಕಾರದ ಕೈಸೇರಿದ್ದು ಹೇಗೆ?
1901ರ ಮಾರ್ಚ್ನಲ್ಲಿ ದಿವಾನ ಹುದ್ದೆಯಿಂದ ನಿವೃತ್ತರಾದ ಶೇಷಾದ್ರಿ ಅಯ್ಯರ್.. ಅದೇ ವರ್ಷದ ಸೆಪ್ಟೆಂಬರ್ನಲ್ಲಿ ನಿಧನರಾದರು. ಕುಮಾರ ಕೃಪಾ ಬಳಿಯ ಮೈದಾನದಲ್ಲೇ ಅವರ ಅಂತ್ಯಕ್ರಿಯೆಯೂ ನಡೆಯಿತು. ನಂತರ ಅವರ ಕುಟುಂಬದವರು ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ನೆಲೆಸಿದರು. ಈ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಅವಧಿಯಲ್ಲಿ (ಸುಮಾರು 1915–1918ರ ನಡುವೆ) ಮೈಸೂರು ಸರ್ಕಾರವು ಶೇಷಾದ್ರಿ ಅಯ್ಯರ್ ಅವರ ಪುತ್ರರಿಂದ ಬಂಗಲೆಯನ್ನು ಖರೀದಿಸಿತು. ಮುಂದೆ ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡ ನಂತರ.. ಸರ್ಕಾರ ವಶಕ್ಕೆ ಪಡೆದು ಗಣ್ಯರ ವಾಸ್ತವ್ಯಕ್ಕಾಗಿ ಅಧಿಕೃತ 'ರಾಜ್ಯ ಅತಿಥಿಗೃಹ' ಆಗಿ ಬದಲಾಯಿಸಿತು.
ಹಿಂದೆ ಈ ಕುಮಾರ ಪಾರ್ಕ್ ಮೈದಾನವು ಬರೋಬ್ಬರಿ 100 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿತ್ತು. ಬೆಂಗಳೂರು ಬೆಳೆದಂತೆ ಈ ಜಾಗವೂ ಹಂಚಿಹೋಯಿತು. 1947ರಲ್ಲಿ ಇಲ್ಲಿನ ಜಾಗವು 'ಕುಮಾರ ಪಾರ್ಕ್ ಪಶ್ಚಿಮ' ಬಡಾವಣೆ ನಿರ್ಮಾಣವಾಯಿತು. 1965 & 1971 ಅವಧಿಯಲ್ಲಿ ಭವನ ಮತ್ತು ಹೋಟೆಲ್ ಅಶೋಕ್ (ಈಗಿನ ಲಲಿತ್ ಅಶೋಕ್) ತಲೆ ಎತ್ತಿದವು. ಆಗ ಕುಮಾರ ಕೃಪಾ ಸಂಕೀರ್ಣ 14 ಎಕರೆಗೆ ಸೀಮಿತವಾಯಿತು.
ಗಣ್ಯರ ಸಂಖ್ಯೆ ಹೆಚ್ಚಾದಂತೆ.. 1977ರಲ್ಲಿ 27 ಕೊಠಡಿಗಳ 'ಕುಮಾರ ಕೃಪಾ ಅನೆಕ್ಸ್' ಕಟ್ಟಡ ನಿರ್ಮಿಸಲಾಯಿತು. 1990ರಲ್ಲಿ ಹಿಂಭಾಗದಲ್ಲಿ 202 ಕೊಠಡಿಗಳ ಹೊಸ ಕಟ್ಟಡ ಕಟ್ಟಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ನೀಡಲಾಯಿತು.
ರಾಜ್ಯ ರಾಜಕಾರಣದ 'ಪವರ್ ಸೆಂಟರ್'
ವಿಧಾನಸೌಧಕ್ಕೆ ತೀರಾ ಹತ್ತಿರದಲ್ಲಿರುವುದರಿಂದ ಕುಮಾರ ಕೃಪಾ ದಶಕಗಳಿಂದ ಕರ್ನಾಟಕ ರಾಜಕಾರಣದ ಪ್ರಮುಖ ಶಕ್ತಿ ಕೇಂದ್ರ. ಸರ್ಕಾರ ರಚನೆಯ ಮಾತುಕತೆಗಳು, ರಾಜಕೀಯ ಬಿಕ್ಕಟ್ಟು ಶಮನ ಮಾಡುವ ಸಂಧಾನ ಸಭೆಗಳು, ಕೇಂದ್ರ ಹಾಗೂ ರಾಜ್ಯ ನಾಯಕರ ರಹಸ್ಯ ಭೇಟಿಗಳಿಗೆ ಈ ಬಂಗಲೆ ಸಾಕ್ಷಿಯಾಗಿದೆ. ರಾಜ್ಯ ರಾಜಕಾರಣದಲ್ಲಿ ಯಾವುದೇ ದೊಡ್ಡ ಬೆಳವಣಿಗೆ ನಡೆದರೂ, ಮಾಧ್ಯಮಗಳ ಕ್ಯಾಮೆರಾಗಳು ತಕ್ಷಣ ತಿರುಗುತ್ತಿದ್ದುದು ಇದೇ ಕುಮಾರ ಕೃಪಾ ಕಡೆಗೆ!
ಕೇವಲ ರಾಜಕೀಯವಷ್ಟೇ ಅಲ್ಲ, ನಾಡಿನ ಸಾಹಿತಿಗಳು, ಕಲಾವಿದರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆಗಳಿಗೂ ಇದು ವೇದಿಕೆಯಾಗಿದೆ. ಇಷ್ಟೆಲ್ಲಾ ಶ್ರೀಮಂತ ಇತಿಹಾಸ ಇರುವ 'ಕುಮಾರ ಕೃಪಾ' ಅತಿಥಿಗೃಹದ ಮುಖ್ಯ ಪಾರಂಪರಿಕ ಕಟ್ಟಡ ಈಗ 'ಗಂಗಾ' ಆಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿ ಮಾರ್ಪಟ್ಟಿದೆ.










