ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ, ಅರಣ್ಯ ಇಲಾಖೆಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ರೈತರು ಜಿಲ್ಲಾ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ವನ್ಯಜೀವಿ ದಾಳಿಯಿಂದ ರೈತರು ಸತ್ತರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.

ಚಾಮರಾಜನಗರ (ಜ.22): ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯು ಇಂದು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ರೈತ ಸಂಘಟನೆಯ ಮುಖಂಡರು ಅರಣ್ಯ ಇಲಾಖೆಯ ದ್ವಂದ್ವ ನೀತಿಯನ್ನು ಪ್ರಶ್ನಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

'ಕೋಟಿ ಕೊಡ್ತೀವಿ, ನಿಮ್ಮ ಸರ್ಕಾರದಲ್ಲಿ ಯಾರು ಸಾಯ್ತಾರೆ?' - ರೈತರ ಆಕ್ರೋಶ

ಚಿರತೆಗೆ ವಿಷವಿಟ್ಟ ಹಿನ್ನೆಲೆಯಲ್ಲಿ ರೈತನನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಿದಿರಿ. ಈಗ ವನ್ಯಮೃಗಗಳ ದಾಳಿಗೆ ರೈತರು ಬಲಿಯಾಗುತ್ತಿದ್ದರೆ ನಿಮ್ಮ ಸರ್ಕಾರದಲ್ಲಿ ಯಾರನ್ನು ಜೈಲಿಗೆ ಕಳುಹಿಸುತ್ತೀರಿ? ಎಂದು ರೈತರು ಸಚಿವರನ್ನು ನೇರವಾಗಿ ಪ್ರಶ್ನಿಸಿದರು. ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, 'ಒಂದು ಕೋಟಿ ರೂಪಾಯಿ ಪರಿಹಾರ ನಾವು ಕೊಡ್ತೀವಿ, ನಿಮ್ಮ ಸರ್ಕಾರದಲ್ಲಿ ಯಾರಾದರೂ ಸಾಯುತ್ತಾರಾ ಹೇಳಿ?' ಎಂದು ಕೇಳುವ ಮೂಲಕ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದರು.

ಅರಣ್ಯ ಸಚಿವರ ಅನುಪಸ್ಥಿತಿಗೆ ತೀವ್ರ ಅಸಮಾಧಾನ

ವನ್ಯಜೀವಿ ಸಂಘರ್ಷದ ವಿಚಾರವು ಅತ್ಯಂತ ಸೂಕ್ಷ್ಮವಾಗಿದ್ದರೂ ಅರಣ್ಯ ಸಚಿವರು ಸ್ಥಳಕ್ಕೆ ಬಾರದಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಕಾಡಿನಲ್ಲಿ ಹುಲಿ ಸತ್ತ ತಕ್ಷಣ ಬೆಂಗಳೂರಿನಿಂದ ತಜ್ಞರ ತಂಡ ಓಡಿ ಬರುತ್ತದೆ. ಆದರೆ ರೈತರು ಸತ್ತರೆ ಯಾರೂ ಬರುವುದಿಲ್ಲವೇ?' ಎಂದು ಪ್ರಶ್ನಿಸಿದ ಅವರು, ಕಾಡುಪ್ರಾಣಿಗಳ ರಕ್ಷಣೆಗೆ ತೋರುವ ಮುತುವರ್ಜಿಯನ್ನು ಜನರ ಪ್ರಾಣ ರಕ್ಷಣೆಯಲ್ಲಿ ಏಕೆ ತೋರುತ್ತಿಲ್ಲ ಎಂದು ಕಿಡಿಕಾರಿದರು.

ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಪಟ್ಟು; ಭದ್ರತೆಗೆ ಆಗ್ರಹ

ನಿರ್ಲಕ್ಷ್ಯ ವಹಿಸಿರುವ ಅರಣ್ಯಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಘರ್ಷದ ತಾಣಗಳಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು. ಮುಂಬರುವ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಕಾಡಂಚಿನ ದೇವಾಲಯಗಳಿಗೆ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ, ಅಹಿತಕರ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಕೂಡಲೇ ಬಿಗಿ ಭದ್ರತೆ ಒದಗಿಸಬೇಕು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.