ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮೆಗಾ ಮಾರ್ಕೆಟ್‌ನಲ್ಲಿರುವ ಗೋವಿನಜೋಳ ಖರೀದಿ ಕೇಂದ್ರದಲ್ಲಿ ರೈತರಿಗೆ ವಂಚನೆ ಆರೋಪ. ಉತ್ತಮ ಗುಣಮಟ್ಟದ ಫಸಲನ್ನು ಸಿಬ್ಬಂದಿ ತಿರಸ್ಕರಿಸುತ್ತಿದ್ದು, ಪ್ರಭಾವಿಗಳಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ರೈತರು ಗೇಟ್ ಬಂದ್ ಮಾಡಿ ಬೃಹತ್ ಪ್ರತಿಭಟನೆ
ಹಾವೇರಿ (ಜ.22): ರೈತರ ನೆರವಿಗೆ ಬರಬೇಕಾದ ಸರ್ಕಾರಿ ಖರೀದಿ ಕೇಂದ್ರಗಳೇ ಈಗ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿವೆ. ಜಿಲ್ಲೆಯ ರಾಣೇಬೆನ್ನೂರು ಮೆಗಾ ಮಾರ್ಕೆಟ್‌ನಲ್ಲಿರುವ ಗೋವಿನಜೋಳ ಖರೀದಿ ಕೇಂದ್ರದಲ್ಲಿ ರೈತರಿಗೆ ದೊಡ್ಡ ಮಟ್ಟದ ವಂಚನೆಯಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಉತ್ತಮ ಫಸಲು ತಂದರೂ ರಿಜೆಕ್ಟ್: ರೈತರ ಕಣ್ಣೀರು
ರಾಣೇಬೆನ್ನೂರು ಮಾರುಕಟ್ಟೆಗೆ ಸಾವಿರಾರು ಕ್ವಿಂಟಾಲ್ ಗೋವಿನಜೋಳವನ್ನು ಲಾರಿ ಮತ್ತು ಟ್ರಾಕ್ಟರ್‌ಗಳಲ್ಲಿ ತುಂಬಿಕೊಂಡು ರೈತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಕಷ್ಟಪಟ್ಟು ಬೆಳೆದ ಉತ್ತಮ ಗುಣಮಟ್ಟದ ಜೋಳವನ್ನು ತಂದಿದ್ದರೂ, ಖರೀದಿ ಕೇಂದ್ರದ ಸಿಬ್ಬಂದಿ ಮಾತ್ರ ವಿನಾಕಾರಣ ನೆಪ ಹೇಳಿ ಜೋಳವನ್ನು ತಿರಸ್ಕರಿಸುತ್ತಿದ್ದಾರೆ. ಕೈಯಲ್ಲಿ ಜೋಳದ ಕಾಳುಗಳನ್ನು ಹಿಡಿದು ತಮ್ಮ ಬೆಳೆ ಎಷ್ಟು ಚೆನ್ನಾಗಿದೆ ಎಂದು ತೋರಿಸಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಖರೀದಿ ಪ್ರಕ್ರಿಯೆಯಲ್ಲಿ ತಾರತಮ್ಯದ ಆರೋಪ
ಸರ್ಕಾರವು ಪ್ರತಿ ಕ್ವಿಂಟಾಲ್ ಗೋವಿನಜೋಳಕ್ಕೆ 2,400 ರೂಪಾಯಿ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಇಲ್ಲಿ ಅರ್ಹ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಖರೀದಿ ಕೇಂದ್ರದ ಸಿಬ್ಬಂದಿ ತಮಗೆ ಬೇಕಾದವರ ಮತ್ತು ಪ್ರಭಾವಿಗಳ ಜೋಳವನ್ನು ಮಾತ್ರ ಸದ್ದಿಲ್ಲದೆ ಖರೀದಿ ಮಾಡುತ್ತಿದ್ದಾರೆ. ಆದರೆ ದೂರದ ಊರುಗಳಿಂದ ಬಂದು ಕ್ಯೂನಲ್ಲಿ ನಿಂತಿರುವ ಸಾಮಾನ್ಯ ರೈತರ ಗುಣಮಟ್ಟದ ಜೋಳಕ್ಕೆ ಇಲ್ಲಸಲ್ಲದ ತಾಂತ್ರಿಕ ಕಾರಣ ನೀಡಿ ವಾಪಸ್ ಕಳಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಗೇಟ್ ಬಂದ್ ಮಾಡಿ ರೈತರ ಬೃಹತ್ ಪ್ರತಿಭಟನೆ
ಸಿಬ್ಬಂದಿಯ ಈ ದಬ್ಬಾಳಿಕೆಯಿಂದ ಆಕ್ರೋಶಗೊಂಡ ರೈತರು ಇಂದು ಖರೀದಿ ಕೇಂದ್ರದ ಮುಖ್ಯ ಗೇಟ್ ಬಂದ್ ಮಾಡಿ ಪ್ರತಿಭಟನೆಗೆ ಇಳಿದಿದ್ದಾರೆ. 'ನಮ್ಮ ರಕ್ತ ಸುರಿಸಿ ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ, ಸರ್ಕಾರಿ ಕೇಂದ್ರದಲ್ಲೇ ನಮಗೆ ಅನ್ಯಾಯವಾಗುತ್ತಿದೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಡಲೇ ಖರೀದಿ ಪ್ರಕ್ರಿಯೆ ಸರಿಪಡಿಸಬೇಕು ಎಂದು ಅನ್ನದಾತರು ಪಟ್ಟು ಹಿಡಿದಿದ್ದಾರೆ.


