ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರವು ತನ್ನ ಮೊದಲ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಭೆ ನಡೆಯುವ ಸಾಧ್ಯತೆಗಳಿದ್ದು, ರಾಜಧಾನಿಯಾಚೆ ಆಡಳಿತ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ.

ಮಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಗೊಂಡ ಬಳಿಕ ಅದರ ಮೊದಲ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುಲೈ ತಿಂಗಳಲ್ಲಿ ಸಚಿವ ಸಂಪುಟ ಸಭೆ ಬಹುತೇಕ ಖಚಿತ

ರಾಜ್ಯದ ರಾಜಧಾನಿಯಿಂದ ಹೊರಗೆ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಮೊದಲ ಬಾರಿಗೆ ಜುಲೈ ತಿಂಗಳಲ್ಲಿ ಸಚಿವ ಸಂಪುಟ ಸಭೆ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ವಿಧಾನಸೌಧ ಸಚಿವಾಲಯದ ಅಧಿಕಾರಿಗಳು ಸಿದ್ಧತೆಗೆ ಸೂಚನೆ ನೀಡಿದ್ದಾರೆ. ಮಂಗಳೂರಿನಲ್ಲಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್‌ ಚುನಾವಣೆ ಮುಕ್ತಾಯ ಬಳಿಕ ಜೂನ್‌ ಕೊನೆ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟದ ಮೊದಲ ಸಭೆಯನ್ನು ಕಡಲ ತೀರದ ಮಂಗಳೂರಿನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ.

ಯು.ಟಿ.ಖಾದರ್‌ ಸಚಿವರಾದ ಬಳಿಕ ಮತ್ತೆ ಈ ಪ್ರಸ್ತಾಪ

ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೇ ಸಚಿವ ಸಂಪುಟ ಸಭೆ ಬೆಂಗಳೂರು ಮತ್ತು ಬೆಳಗಾವಿ ಹೊರತುಪಡಿಸಿ ಜಿಲ್ಲಾ ಕೇಂದ್ರದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು. ಆಗಲೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಈಗ ಯು.ಟಿ.ಖಾದರ್‌ ಸಚಿವರಾದ ಬಳಿಕ ಮತ್ತೆ ಈ ಪ್ರಸ್ತಾಪ ಬೇಗನೆ ಈಡೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.