ಬೆಂಗಳೂರಿನಲ್ಲಿ ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್ ಸೇವೆ ಆರಂಭಿಸಿದೆ ಹಾಗೂ ಈಶ ಫೌಂಡೇಶನ್ ಜೊತೆಗೂಡಿ ಧಾರ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಸಹ ಪ್ರಾರಂಭಿಸಿದೆ. ಸಾಮಾನ್ಯ ದರದಲ್ಲಿಯೇ ಎಕ್ಸ್‌ಪ್ರೆಸ್ ಬಸ್ ಸೇವೆ ಲಭ್ಯ.
ಬೆಂಗಳೂರು (ಜೂ.20): ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಶ್ರೇಯೋಭಿವೃದ್ಧಿಗೆ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಹೊಸ ಹೆಜ್ಜೆ ಇಟ್ಟಿದ್ದು, ನಗರ ಸಾರಿಗೆ ಮತ್ತು ಧಾರ್ಮಿಕ ಪ್ರವಾಸ ಪ್ರಿಯರಿಗೆ ಎರಡು ಉತ್ತಮ ಸುದ್ದಿಗಳನ್ನು ನೀಡಿದೆ. ದೆಹಲಿ ಹಾಗೂ ಮುಂಬೈ ಮಾದರಿಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಎಕ್ಸ್‌ಪ್ರೆಸ್ ಬಸ್ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ.
ಸಾಮಾನ್ಯ ದರದಲ್ಲಿ ಎಕ್ಸ್‌ಪ್ರೆಸ್ ಬಸ್ ಸೇವೆ ಪ್ರಾರಂಭ!
ಪ್ರತಿದಿನದ ಸಂಚಾರದಲ್ಲಿ ತೀವ್ರವಾಗಿ ಸಮಯ ನಷ್ಟವಾಗುತ್ತಿದ್ದ ಪ್ರಯಾಣಿಕರಿಗೆ ಬಿಎಂಟಿಸಿ ಇದೀಗ ಪರಿಹಾರ ನೀಡುತ್ತಿದೆ. ನಾಳೆಯಿಂದ ಬೆಂಗಳೂರು ನಗರದಲ್ಲಿ ಲಿಮಿಟೆಡ್ ಸ್ಟಾಪ್ ಎಕ್ಸ್‌ಪ್ರೆಸ್ ಬಸ್‌ಗಳು ಸಾಮಾನ್ಯ ಬಸ್ ದರದಲ್ಲೇ ಸಂಚರಿಸಲಿವೆ. ಇದು ದೆಹಲಿ ಮತ್ತು ಮುಂಬೈ ನಂತರ, ಲಿಮಿಟೆಡ್ ಸ್ಟಾಪ್ ನಗರ ಸಾರಿಗೆ ಆರಂಭಗೊಳ್ಳುತ್ತಿರುವ ಮೂರನೇ ಮಹಾನಗರವಾಗಿದೆ. ಇನ್ನು ಬಿಎಂಟಿಸಿ ಬಸ್‌ಗಳು ಯಾವಾವ ಮಾರ್ಗಗಳಿಗೆ ಎಕ್ಸ್‌ಪ್ರೆಸ್ ಸೇವೆ ನಿಲ್ಲಿಸಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..
ಮುಖ್ಯ ಮಾರ್ಗಗಳು ಹಾಗೂ ಸೇವೆಗಳ ವಿವರ:
- ಮೆಜೆಸ್ಟಿಕ್ – ಅತ್ತಿಬೆಲೆ: ಪ್ರತಿ ಅರ್ಧ ಗಂಟೆಗೆ ಒಂದು ಬಸ್ – ಕೇವಲ 3 ನಿಲ್ದಾಣಗಳು
- ಬನಶಂಕರಿ – ಅತ್ತಿಬೆಲೆ: 10 ಬಸ್‌ಗಳು, 30 ನಿಮಿಷಕ್ಕೊಮ್ಮೆ
- ಮೆಜೆಸ್ಟಿಕ್ – ದೇವನಹಳ್ಳಿ: 10 ಬಸ್‌ಗಳು, 20 ನಿಮಿಷಕ್ಕೊಮ್ಮೆ
- ಬನಶಂಕರಿ – ಹಾರೋಹಳ್ಳಿ: 8 ಬಸ್‌ಗಳು, 20 ನಿಮಿಷಗಳಿಗೊಂದು
- ಮೆಜೆಸ್ಟಿಕ್ – ನೆಲಮಂಗಲ: 10 ಬಸ್‌ಗಳು, 20 ನಿಮಿಷಗಳಿಗೊಂದು
ಒಟ್ಟು 48 ಬಸ್‌ಗಳ ಮೂಲಕ 348 ಟ್ರಿಪ್‌ಗಳು ಪ್ರತಿ ದಿನ ನಿರ್ವಹಣೆಯಾಗಲಿದೆ. ಈ ಬಸ್‌ಗಳಲ್ಲಿ ತಿಂಗಳ ಪಾಸ್ ಬಳಸಲು ಕೂಡ ಅನುಮತಿ ಇದೆ.
ಈಶ ಫೌಂಡೇಶನ್ ಧಾರ್ಮಿಕ ಪ್ರವಾಸ ಪ್ಯಾಕೇಜ್:
ಬಿಎಂಟಿಸಿ ಮತ್ತು ಈಶ ಫೌಂಡೇಶನ್ ಸಹಯೋಗದಲ್ಲಿ ವಿಶಿಷ್ಟ ವಾರಾಂತ್ಯ ಪ್ರವಾಸ ಪ್ಯಾಕೇಜ್ ಒಂದನ್ನು ಪ್ರಾರಂಭಿಸಲಾಗಿದೆ. ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿ ಈ ವಿಶೇಷ ಪ್ರವಾಸ ನಡೆಯಲಿದೆ.
ಪ್ರವಾಸ ಮಾರ್ಗ:
ನೆಲದಾಂಜನೇಯ ಸ್ವಾಮಿ ದೇವಸ್ಥಾನ
ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ
ಜ್ಞಾನತೀರ್ಥ ಲಿಂಗ (ಮುದ್ದೇನಹಳ್ಳಿ)
ಪಂಚನಂದಿ ಕ್ಷೇತ್ರ ಪಾಪಾಘ್ನಿ ಮಠ (ಸ್ಕಂದಗಿರಿ)
ಕಲ್ಯಾಣಿ (ಕಾರಂಜಿ) – ಊಟ ವಿರಾಮ
ಈಶ ಫೌಂಡೇಶನ್
ಪ್ರವಾಸ ಶುರುವಾಗುವುದು: ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 9:00 ಗಂಟೆಗೆ
ಹಿಂತಿರುಗುವುದು: ಸಂಜೆ 7:00ಕ್ಕೆ
ಟಿಕೆಟ್ ವಿವರ: ₹600 (ಟೋಲ್ + ಜಿಎಸ್ಟಿ ಸೇರಿ) ಪ್ರತಿ ಆಸನಕ್ಕೆ
ಬುಕಿಂಗ್: https://mybmtc.karnataka.gov.in/en ಅಥವಾ https://www.ksrtc.in/ ಲಿಂಕ್ ಕ್ಲಿಕ್ ಮಾಡಿ.
