ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರ ಮೇಲೆ ಮಹಿಳಾ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಬಸ್ ನಿಲ್ದಾಣವಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸಲು ಚಾಲಕ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರು (ಜೂ.14): ಸರಕಾರಿ ಸ್ವಾಮ್ಯದ ಬೆಂಗಳೂರು ಬಸ್ ಚಾಲಕರೊಬ್ಬರ ಮೇಲೆ ರಸ್ತೆ ಮಧ್ಯದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಆಕ್ರೋಶ ತೋರಿಸಿರುವ ಘಟನೆ ವರದಿಯಾಗಿದ್ದು, ಈ ಕುರಿತು ಲಘು ಗೊಂದಲದಿಂದ ಆರಂಭವಾದ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಿಎಂಟಿಸಿ ಡ್ರೈವರ್ ಅತ್ತರ ಹುಸೇನ್ ಅವರ ಮೇಲೆ ಟೆಕ್ಕಿ ಕಾವ್ಯ ಎಂಬ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಯಿಂದ ಹೊಡೆದು ಅವಮಾನಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ವಿವರ: 42 ವರ್ಷದ ಅತ್ತರ ಹುಸೇನ್ ಅವರು ಬಿಎಂಟಿಸಿ ಡಿಪೋ 38 ರ ಬಸ್ ನಂ. KA57F0836 ಗೆ ಚಾಲಕರಾಗಿದ್ದು, ದಿನಾಂಕ 11 ಜೂನ್ 2025 ರಂದು ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್ ವರೆಗೆ ಬಸ್ ಚಲಾಯಿಸುತ್ತಿದ್ದರು. ಅವರೊಂದಿಗೆ ನಿರ್ವಾಹಕ (ಕಂಡಕ್ಟರ್) ಆಗಿ ಮುರಳಿ ಮೋಹನ್ ಕರ್ತವ್ಯದಲ್ಲಿದ್ದರು. ಬೆಳಿಗ್ಗೆ ಸುಮಾರು 8:40ರ ವೇಳೆಗೆ ಕೈಕೊಂಡನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಮಹಿಳಾ ಪ್ರಯಾಣಿಕ ಕಾವ್ಯ ಅವರು ಬಸ್ಸಿನ ನಿಗದಿತ ನಿಲ್ದಾಣವಲ್ಲದೇ ರಸ್ತೆಯ ಮಧ್ಯದಲ್ಲೇ ಇಳಿಯಲು ಪ್ರಯತ್ನಿಸಿದರು.
ಸರ್ಕಾರಿ ಚಾಲಕನಿಗೆ ನಿಂದನೆ, ಹೊಡೆತ:
ಚಾಲಕ ಅತ್ತರ ಹುಸೇನ್ ಅವರು ನಿಯಮದ ಪ್ರಕಾರ 'ಮುಂದಿನ ಬಸ್ ನಿಲ್ದಾಣದಲ್ಲಿಯೇ ಇಳಿಸಿಕೊಡುತ್ತೇನೆ' ಎಂದು ಹೇಳಿದ್ದಕ್ಕೆ ಕಾವ್ಯ ಅವರು ಆಕ್ರೋಶಗೊಂಡು ಬಸ್ಸು ರಸ್ತೆಯ ಮಧ್ಯದಲ್ಲಿ ನಿಲ್ಲಿಸಲು ಒತ್ತಡ ಹಾಕಿದರು. ಇದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಹಿಳೆ, ಚಾಲಕರನ್ನು 'ಬೋ* ಮಗನೇ' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜೊತೆಗೆ ತನ್ನ ಕಾಲಿನಿಂದ ಚಪ್ಪಲಿಯನ್ನು ತೆಗೆದು ಡ್ರೈವರ್‌ಗೆ ಹೊಡೆದು ಅವರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಪಿರ್ಯಾದುದಾರ ಚಾಲಕ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
'ದೊಡ್ಡವರೆಲ್ಲಾ ಗೊತ್ತು'- ಎಂದು ಬೆದರಿಕೆ:
ಚಾಲಕ ಅತ್ತರ್ ಹುಸೇನ್ ದೂರಿನ ಪ್ರಕಾರ, ಟೆಕ್ಕಿ ಮಹಿಳೆ ಕಾವ್ಯ ಅವರು 'ನನಗೆ ದೊಡ್ಡ ದೊಡ್ಡವರೆಲ್ಲಾ ಗೊತ್ತಿದ್ದಾರೆ, ನಿಮಗೆ ಏನು ಮಾಡಿಸುತ್ತೇನೆ ನೋಡುತ್ತಿರು' ಎಂದು ಬೆದರಿಕೆಯೂ ಹಾಕಿದ್ದಾರಂತೆ. ಸಾರ್ವಜನಿಕರ ಸಮ್ಮುಖದಲ್ಲಿ ಈ ಘಟನೆ ನಡೆದು, ಪ್ರಯಾಣಿಕರು ಹಾಗೂ ವಾಹನ ಸವಾರರಿಗೂ ತೊಂದರೆಯಾಗಿರುವುದು ವರದಿಯಾಗಿದೆ. ಈ ಸಂಬಂಧ ಅತ್ತರ ಹುಸೇನ್ ಅವರು ಸಂಬಂಧಪಟ್ಟ ಠಾಣೆಗೆ ಹಾಜರಾಗಿ ಅಧಿಕೃತವಾಗಿ ದೂರು ನೀಡಿದ್ದಾರೆ. 'ಅವಾಚ್ಯ ಶಬ್ದಗಳಿಂದ ನಿಂದನೆ, ದೈಹಿಕ ದಾಳಿ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿತ:
ಇನ್ನು ಕಳೆದ ವರ್ಷ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿತದ ಘಟನೆ ನಡೆಸಿತ್ತು. ಈ ವೇಳೆ ಅನ್ಯ ರಾಜ್ಯದ ಪ್ರಯಾಣಿಕ ಸುಖಾ ಸುಮ್ಮನೆ ಕಂಡಕ್ಟರ್‌ಗೆ ಚಾಕು ಇರಿದಿದ್ದನು. ಜೊತೆಗೆ, ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪ್ರಯಾಣಿಕರ ಮೇಲೆಯೂ ಚಾಕು ಇಡಿದು ಹಲ್ಲೆಗೆ ಮುಂದಾಗಿದ್ದನು. ಆತನನ್ನು ಬಸ್ಸಿನೊಳಗೆ ಕೂಡಿಹಾಕಲಾಗಿದ್ದು, ಆಗ ಬಸ್ಸನ್ನು ಹಾನಿಗೊಳಿಸಿದ್ದನು. ಕಿಟಕಿ ಗಾಜು ಮತ್ತು ಮುಂಬದಿಯ ಗಾಜುಗಳನ್ನು ಒಡೆದು ಹಾಕಿದ್ದನು. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಘಟನೆಯಲ್ಲಿ ಕಂಡಕ್ಟರ್ ಮೇಲೆ ಕಲ್ಲು ಎಸೆದು ಓಡಿ ಹೋಗಿದ್ದ ಘಟನೆಯೂ ನಡೆದಿತ್ತು. ಇದೀಗ ಮಹಿಳೆಯೊಬ್ಬರು ತಾನು ಹೇಳಿದ ಜಾಗದಲ್ಲಿ ಬಸ್ ನಿಲ್ಲಿಸಲಿಲ್ಲವೆಂದು ಚಪ್ಪಲಿಯಿಂದ ಹೊಡೆದಿದ್ದಾರೆ.
