Jollywood Studios pollution notice: ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಕಿದೆ. ಎರಡು ವರ್ಷಗಳ ಹಿಂದೆಯೇ ನಿಯಮ ಪಾಲಿಸದ ಕಾರಣ ನೋಟಿಸ್ ನೀಡಲಾಗಿತ್ತು, ಇದರಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಸ್ಪಷ್ಟನೆ.
ಬೆಂಗಳೂರು (ಅ.9): ಬಿಗ್‌ಬಾಸ್ ರಿಯಾಲಿಟಿ ಶೋಗೂ ನಮಗೂ ಸಂಬಂಧವಿಲ್ಲ. ಜಾಲಿವುಡ್ ಸ್ಟುಡಿಯೋದವರಿಗೆ ಎರಡು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ನಿಯಮ ಪಾಲಿಸದ ಕಾರಣ ಇದೀಗ ಬೀಗ ಹಾಕಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಸ್ಪಷ್ಟಪಡಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಡದಿ ಬಳಿ 30 ಎಕರೆ ಪ್ರದೇಶದಲ್ಲಿ ಜಾಲಿವುಡ್ ಸ್ಟುಡಿಯೋ ಇದೆ. ಇದರಲ್ಲಿ ಒಂದೂವರೆ ಎಕರೆಯಲ್ಲಿ ಮಾತ್ರ ಬಿಗ್‌ಬಾಸ್ ಶೋ ಆಯೋಜಿಸಲಾಗಿದೆ. ಎರಡು ವರ್ಷದ ಹಿಂದೆಯೇ ಇಡೀ 30 ಎಕರೆ ಪ್ರದೇಶಕ್ಕೂ ನೋಟಿಸ್ ನೀಡಲಾಗಿತ್ತು. ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಒತ್ತಡವಿಲ್ಲ. ಅವರು ಅನುಮತಿಯನ್ನೇ ಪಡೆದಿರಲಿಲ್ಲ. ಆದ್ದರಿಂದ ಬೀಗ ಹಾಕಲಾಗಿದೆ. ಪುನರ್‌ಪರಿಶೀಲನೆಗೆ ಮನವಿ ಮಾಡಿದರೆ ಪರಿಗಣಿಸಲಾಗುವುದು. ಜೊತೆಗೆ ಜಾಲಿವುಡ್‌ಗೆ ಮಾತ್ರ ನೋಟಿಸ್ ನೀಡಿಲ್ಲ. ಇದೇ ರೀತಿ 150ಕ್ಕೂ ಹೆಚ್ಚು ಇತರೆ ವ್ಯಕ್ತಿಗಳಿಗೂ ನೋಟಿಸ್ ನೀಡಲಾಗಿದೆ ಎಂದು ನರೇಂದ್ರ ಸ್ವಾಮಿ ಹೇಳಿದರು.
ಇದನ್ನೂ ಓದಿ: Interview | ಗಣತಿಗೆ ಮಾಹಿತಿ ಕೊಡಬೇಡಿ ಅನ್ನೋದು ಮೂರ್ಖತನ: ಮಧುಸೂಧನ್ ಆರ್. ನಾಯ್ಕ್
ಎರಡು ವರ್ಷದ ಹಿಂದೆಯೇ ನೋಟಿಸ್ ನೀಡಿದ್ದು ಆಗಸ್ಟ್‌ನಲ್ಲಿ ಇದು ನನ್ನ ಗಮನಕ್ಕೆ ಬಂತು. ಸೆಪ್ಟೆಂಬರ್‌ನಲ್ಲಿ ಪುನಃ ನೋಟಿಸ್ ನೀಡಿ ಕಾಲಾವಕಾಶ ನೀಡಲಾಗಿತ್ತು. ಒಟ್ಟಾರೆ ಮೂರು ನೋಟಿಸ್ ನೀಡಲಾಗಿದೆ. ಸ್ಥಳ ಮಹಜರು ಸಹ ನಡೆಸಲಾಗಿತ್ತು. ಆಗ ಅಲ್ಲಿ ಬಿಗ್‌ಬಾಸ್ ಇರಲಿಲ್ಲ. ಕಾನೂನು ಪ್ರಕಾರವೇ ಎಲ್ಲಾ ಕ್ರಮ ನಡೆದಿದೆ ಎಂದು ತಿಳಿಸಿದರು.
ಡಿಸಿಎಂ ಶಿವಕುಮಾರ್ ಪಾತ್ರವಿಲ್ಲ:
ಬಿಗ್‌ಬಾಸ್‌ಗೆ ಬೀಗ ಹಾಕುವ ಹಿಂದೆ ಯಾವ ವ್ಯಕ್ತಿಯ ಕೈವಾಡವೂ ಇಲ್ಲ. ಸುಖಾಸುಮ್ಮನೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರು ಎಳೆದು ತರಲಾಗುತ್ತಿದೆ. ಇದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಜಾಲಿವುಡ್‌ನವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಾಲಾವಕಾಶ ನೀಡುವಂತೆ ಮಂಡಳಿಯನ್ನು ಕೋರಿಲ್ಲ. ಒಂದೊಮ್ಮೆ ಕೋರಿದರೆ ಪರಿಶೀಲನೆ ನಡೆಸಿ 10 ದಿನ ಅವಕಾಶ ನೀಡಬಹುದು ಎಂದು ನರೇಂದ್ರಸ್ವಾಮಿ ಹೇಳಿದರು.
