ಬೆಂಗಳೂರಿನ ಚಿಕ್ಕಪೇಟೆಯಲ್ಲಿ, ಕನ್ನಡದಲ್ಲಿ ಮಾತನಾಡಲು ಹೇಳಿದ ಗ್ರಾಹಕನಿಗೆ ರಾಜಸ್ಥಾನ ಮೂಲದ ಅಂಗಡಿ ಮಾಲೀಕ ಅವಾಚ್ಯ ಶಬ್ದಗಳಿಂದ ನಿಂದಿಸಿ, 'ನೀನೇ ಹಿಂದಿ ಮಾತಾಡು' ಎಂದು ದರ್ಪ ತೋರಿದ್ದಾನೆ. ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾದ ನಂತರ ಕ್ಷಮೆಯಾಚಿಸಿದ್ದಾನೆ.
ಬೆಂಗಳೂರು(ಡಿ.11): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಹಿಂದಿವಾಲಾನಿಂದ ಕನ್ನಡಿಗನ ಮೇಲೆಯೇ ದರ್ಪ ತೋರಿದ ಘಟನೆ ನಡೆದಿದೆ. ಚಿಕ್ಕಪೇಟೆ ಪ್ರದೇಶದ ಎಲೆಕ್ಟ್ರಿಕ್ ಅಂಗಡಿ ಮಾಲೀಕನೊಬ್ಬ ಗ್ರಾಹಕರೊಬ್ಬರೊಂದಿಗೆ ಮಾತನಾಡುವಾಗ ಕನ್ನಡ ಮಾತನಾಡು ಎಂದಿದ್ದಕ್ಕೆ ಅವಾಚ್ಯ ಪದಗಳನ್ನು ಬಳಸಿ, ಬಳಿಕ 'ನೀನೇ ಹಿಂದಿಯಲ್ಲಿ ಮಾತಾಡು' ಎಂದು ಅಹಂಕಾರ ಪ್ರದರ್ಶಿಸಿದ ಆರೋಪ ಕೇಳಿಬಂದಿದೆ.
ರಾಜಸ್ಥಾನದ ಜಾಲಂ ಎಂಬಾತನ ದುರಾಹಂಕಾರ:
ಘಟನೆಗೆ ಕಾರಣನಾದ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಜಾಲಂ ಎಂದು ಗುರುತಿಸಲಾಗಿದೆ. ಈತ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ನಡೆಸುತ್ತಿದ್ದಾನೆ. ವ್ಯಾಪಾರಕ್ಕೆ ಬಂದಿದ್ದ ಸ್ಥಳೀಯ ಗ್ರಾಹಕರೊಂದಿಗೆ ಮಾತುಕತೆ ವೇಳೆ ಭಾಷೆಯ ವಿಚಾರವಾಗಿ ಜಗಳ ಪ್ರಾರಂಭವಾಗಿದೆ. ಈ ವೇಳೆ ಗ್ರಾಹಕರು ಕನ್ನಡದಲ್ಲಿ ಮಾತನಾಡಲು ಹೇಳಿದಾಗ ಜಾಲಂ ಅವಾಚ್ಯ ಪದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿ ನೀನೇ ಹಿಂದಿಯಲ್ಲಿ ಮಾತಾಡು ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.
ಕನ್ನಡ ಸಂಘಟನೆಯಿಂದ ದೂರು, ಎಫ್‌ಐಆರ್ ದಾಖಲು
ಈ ಘಟನೆ ತಿಳಿದ ತಕ್ಷಣವೇ ಕನ್ನಡ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಬೆಂಗಳೂರಿನ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಅಂಗಡಿ ಮಾಲೀಕ ಜಾಲಂ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಕನ್ನಡಿಗರ ಆಕ್ರೋಶದ ಬಳಿಕ ಕ್ಷಮೆ ಕೋರಿದ ಆರೋಪಿ
ಕನ್ನಡ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಿದ ಬಳಿಕ ಎಚ್ಚೆತ್ತ ಜಾಲಂ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ ಎಂದು ತಿಳಿದುಬಂದಿದೆ.
ಹಿಂದಿವಾಲಾಗಳ ಉಪಟಳ ಹೆಚ್ಚಾಗಿದೆ
ಈ ಘಟನೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಿಂದಿವಾಲಾಗಳ ದಬ್ಬಾಳಿಕೆ ಮತ್ತು ಉಪಟಳ ಹೆಚ್ಚಾಗುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದು ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಉತ್ತರದ ರಾಜ್ಯಗಳಿಂದ ದುಡಿಯಲು ಬೆಂಗಳೂರಿಗೆ ಬಂದು ನೆಲೆಸಿರುವ ಹಿಂದಿವಾಲಾಗಳು ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ದುಡಿಯುವವರು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ಕೊಡಬೇಕು. ಸರ್ಕಾರ ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.


