ಸರ್ಕಾರದ ಸಹಾಯಧನ ಮಂಜೂರು ಮಾಡಲು ಉದ್ಯಮಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್, ಉದ್ಯಮಿಯಿಂದ ₹1.15 ಲಕ್ಷ ಲಂಚ ಸ್ವೀಕರಿಸುವಾಗ ವಶಕ್ಕೆ..
ತುಮಕೂರು (ಡಿ.11): ಸರ್ಕಾರದ ಸಹಾಯಧನ ಮಂಜೂರು ಮಾಡಲು ಉದ್ಯಮಿಯೊಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಇಂದು ಬಲೆಗೆ ಬೀಳಿಸಿದ್ದಾರೆ. ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್ ಎನ್‌ಎಸ್ ಬಂಧಿತ ಆರೋಪಿಗಳಾಗಿದ್ದು, ಇವರು ತುಮಕೂರಿನ ಸದಾಶಿವನಗರ ನಿವಾಸಿ ಹಾಗೂ ಮೆಸರ್ಸ್ ಶಿವಲಿಂಗ ಇಂಡಸ್ಟ್ರಿಸ್ ಮಾಲೀಕ ಉದ್ಯಮಿ ಚನ್ನಬಸವೇಶ್ವರ ಎಂ.ಎಸ್. ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ.
ಸಹಾಯಧನ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ:
ಉದ್ಯಮಿ ಚನ್ನಬಸವೇಶ್ವರ ಅವರು ವಸಂತನರಸಾಪುರದ ಎರಡನೇ ಹಂತದಲ್ಲಿ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಕಾ ಕಾರ್ಖಾನೆಯನ್ನು ಕಳೆದ ಒಂದು ವರ್ಷದ ಹಿಂದೆ ಪ್ರಾರಂಭಿಸಿದ್ದರು. ಇವರು ತಮ್ಮ ಉದ್ದಿಮೆಗೆ ಸಂಬಂಧಿಸಿದಂತೆ ಸರ್ಕಾರದ ರೂ. 18.75 ಲಕ್ಷ ಸಹಾಯಧನ ಮಂಜೂರಾತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಹಾಯಧನವನ್ನು ಮಂಜೂರು ಮಾಡಲು ಜಂಟಿ ನಿರ್ದೇಶಕ ಲಿಂಗರಾಜು ಅವರು ರೂ. 1.25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತಕ್ಕೆ ದೂರು ನೀಡಿದ್ದ ಉದ್ಯಮಿ:
ಲಂಚ ನೀಡಲು ಇಷ್ಟವಿಲ್ಲದ ಚನ್ನಬಸವೇಶ್ವರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಇಂದು ಮಧ್ಯಾಹ್ನ ಜಿಲ್ಲಾ ಕೈಗಾರಿಕಾ ಕೇಂದ್ರದ ಮುಂದೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಉದ್ಯಮಿಯಿಂದ ರೂ. 1.15 ಲಕ್ಷ ಹಣವನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಹಾಯಕ ಪ್ರಸಾದರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಡಿವೈಎಸ್ಪಿ ಡಾ ಸಂತೋಷ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸರು ಪ್ರಸ್ತುತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.


