Backward Classes Commission interview: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ಬಗ್ಗೆ ಈ ಸಂದರ್ಶನದಲ್ಲಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂಧನ್‌ ಆರ್‌. ನಾಯ್ಕ್‌ ಅವರು ಸಮೀಕ್ಷೆಯ ಉದ್ದೇಶ, ಪ್ರಶ್ನಾವಳಿಗಳ ಹಿಂದಿನ ಕಾರಣ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮುಖಾಮುಖಿ - ಮಧುಸೂಧನ್‌ ಆರ್‌. ನಾಯ್ಕ್‌, ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

- ಚಂದ್ರಮೌಳಿ ಎಂ.ಆರ್

ಹತ್ತು ವರ್ಷಗಳ ನಂತರ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯು ಅನೇಕ ಗೊಂದಲ, ತಾಂತ್ರಿಕ ಸಮಸ್ಯೆಗಳ ಜತೆಗೇ ಶುರುವಾಯಿತು. ಸಮೀಕ್ಷೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರುವ ಜತೆಗೆ ಸಮೀಕ್ಷೆ ವಿರುದ್ಧ ರಾಜಕೀಯ ನಾಯಕರು, ಕೆಲ ಸಮುದಾಯದ ನಾಯಕರ ಹೇಳಿಕೆಗಳು ಸಮೀಕ್ಷೆ ಮೇಲೆ ಪರಿಣಾಮ ಬೀರಿದವು. ಮಾಹಿತಿ ನೀಡಲು ನಿರಾಕರಣೆ ಪ್ರಸಂಗಗಳೂ ಅನೇಕ ಕಡೆ ನಡೆದವು. ಇದರ ನಡುವೆಯೂ ಸಮೀಕ್ಷೆ ಶೇ.90ರಷ್ಟು ಪೂರ್ಣಗೊಂಡಿರುವುದು ವಿಶೇಷ. ಮಹತ್ವದ್ದಾಗಿರುವ ಈ ಸಮೀಕ್ಷೆಗೆ ಎದುರಾದ ಸಮಸ್ಯೆ ನಿವಾರಿಸಿಕೊಂಡ ಬಗೆ, ಸಮೀಕ್ಷೆ ವಿರುದ್ಧ ಹೇಳಿಕೆಗಳಿಂದ ಉಂಟಾದ ಪರಿಣಾಮ, ತೀವ್ರ ಟೀಕೆಗೆ ಗುರಿಯಾದ ಪ್ರಶ್ನಾವಳಿಗಳ ಹಿಂದಿನ ಉದ್ದೇಶ, ಸಮೀಕ್ಷೆಯಲ್ಲಿ ಭಾಗಿಯಾಗದಿರುವುದರಿಂದ ಸಮುದಾಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ‘ಕನ್ನಡಪ್ರಭ’ದ ಈ ವಾರದ ‘ಮುಖಾಮುಖಿ’ಯಲ್ಲಿ ಉತ್ತರಿಸಿದ್ದಾರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್‌ ಆರ್‌.ನಾಯ್ಕ್‌.

ಸಣ್ಣಪುಟ್ಟ ಅಡ್ಡಿ, ಗೊಂದಲಗಳೊಂದಿಗೆ ಸಮೀಕ್ಷೆ ಆರಂಭವಾಗಿದೆ. ಸಮಾಧಾನವಿದೆಯೇ?

ಸಮೀಕ್ಷೆ 15 ವರ್ಷದ ನಂತರ ನಡೆಯುತ್ತಿದೆ, ಜನರೇಷನ್‌ ಚೇಂಜ್‌ ಆಗಿರುವುದರಿಂದ ಬೇರೆ ರೀತಿಯಲ್ಲಿ ಸಮೀಕ್ಷೆ ಹಾಗೂ ಸಿದ್ಧತೆ ಮಾಡಬೇಕಾಯಿತು. ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಸಮೀಕ್ಷೆ ನಡೆಸಬೇಕಾಯಿತು. ಪ್ರತಿ ಮನೆಯ ವಿದ್ಯುತ್‌ ಮೀಟರ್‌ಗಳಿಗೆ ಜಿಯೋ ಟ್ಯಾಗಿಂಗ್‌ ಮಾಡುವುದು, ಮನೆಗಳ ಪಟ್ಟಿ ಸಿದ್ಧಪಡಿಸಿದ ನಂತರ ಮ್ಯಾಪಿಂಗ್‌ ಮಾಡುವ ಕಾರ್ಯದಲ್ಲಿ ವಿಳಂಬವಾಯಿತು. ಜಿಯೋ ಟ್ಯಾಗಿಂಗ್‌ಗಳನ್ನು ಮನೆಗಳು ಅಲ್ಲದ ಮೀಟರ್‌ಗಳಿಗೂ ಅಂಟಿಸಿದ್ದರಿಂದ ಶೇ.100 ರಷ್ಟು ಮನೆಗಳಿಗೆ ಜಿಯೋ ಟ್ಯಾಗಿಂಗ್‌ ಆಗಲಿಲ್ಲ. ಅಲ್ಲದೆ ಇ-ಆಡಳಿತ ಸಿದ್ಧಪಡಿಸಿದ ಆ್ಯಪ್‌ನಲ್ಲಿ ಸಮೀಕ್ಷೆ ಆರಂಭದ ಒಂದೆರಡು ದಿನ ತೊಂದರೆಯಾಯಿತು. ಒಟ್ಟಾರೆ ನಮ್ಮ ವ್ಯವಸ್ಥೆ ಶೇ.100ರಷ್ಟು ಕಾರ್ಯನಿರ್ವಹಿಸಲಿಲ್ಲ. ಆದರೂ ಹೊಸ ಪದ್ಧತಿಯಲ್ಲಿ ತಪ್ಪು ಸರಿಪಡಿಸಿಕೊಂಡು ಸಮೀಕ್ಷೆ ಮಾಡಬೇಕಾಗುತ್ತದೆ. ಈಗಾಗಲೇ ಶೇ.90ರಷ್ಟು ಸಮೀಕ್ಷೆ ಮುಗಿದಿದೆ. ಗುರಿ ನಿಗದಿ ಮಾಡಿದ್ದ ದಿನದೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಆಗಲಿಲ್ಲ. ಆದ್ದರಿಂದ ಈಗ ಸಮೀಕ್ಷೆಯ ದಿನ ವಿಸ್ತರಣೆ ಮಾಡಬೇಕಾಯಿತು.

ಮಾಹಿತಿ ನೀಡುವಂತೆ ಒತ್ತಾಯಿಸುವಂತಿಲ್ಲ ಎಂಬ ಕೋರ್ಟ್‌ ಆದೇಶ. ರಾಜಕೀಯ ಹಾಗೂ ಕೆಲ ಸಮುದಾಯದ ಮುಖಂಡರ ಹೇಳಿಕೆ ಸಮೀಕ್ಷೆ ಮೇಲೆ ಋಣಾತ್ಮಕ ಪರಿಣಾಮ ಬೀರಿದೆಯೇ?

ಸ್ವಲ್ಪ ಪರಿಣಾಮ ಬೀರಿದೆ. ಕೋರ್ಟ್‌ ಪ್ರಮುಖವಾಗಿ ಸಂಗ್ರಹಿಸುವ ದತ್ತಾಂಶಗಳನ್ನು ಯಾರಿಗೂ ನೀಡಬಾರದು, ಸೋರಿಕೆಯಾಗಬಾರದು ಎಂದು ಹೇಳಿದೆ. ಯಾರಿಗೂ ಒತ್ತಾಯ ಮಾಡಿ ಮಾಹಿತಿ ಪಡೆಯುತ್ತಿಲ್ಲ.

ಸಮೀಕ್ಷೆಗೂ ಮುನ್ನ ಮನೆಗಳಿಗೆ ಪ್ರಶ್ನಾವಳಿಗಳ ಪುಸ್ತಕ ಹಂಚುವುದಾಗಿ ತಿಳಿಸಲಾಗಿತ್ತು. ಯಾಕೆ ಪೂರೈಸುತ್ತಿಲ್ಲ?

ನಿಜ. ಆ್ಯಪ್‌ನಲ್ಲಿ ಇರುವ ಪ್ರಶ್ನಾವಳಿಗಳ ಪುಸ್ತಕವನ್ನು ಹಂಚಲು ರೆಡಿ ಮಾಡಿಕೊಳ್ಳಲಾಗಿತ್ತು. ಯಾರ ಮೂಲಕ ಹಂಚಬೇಕೆಂದು ಗುರುತಿಸಲಾಗಿತ್ತೋ ಅವರು ಲಭ್ಯರಾಗಲಿಲ್ಲ. ಆದರೆ ಕೆಲ ಕಡೆ ಮಾತ್ರ ವಿತರಿಸಲಾಯಿತು. ಅಲ್ಲಿಯೂ ಸ್ವಲ್ಪ ಗೊಂದಲ ಆಗಿರಬಹುದು. ಆದರೆ ನಮ್ಮ ವೆಬ್‌ ಸೈಟ್‌ನಲ್ಲಿ ಪ್ರಶ್ನಾವಳಿಗಳ ವಿವರ ನೀಡಲಾಗಿತ್ತು. ಸಮೀಕ್ಷೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲಾಗಿದೆ. ಜತೆಗೆ ಸಮೀಕ್ಷೆದಾರರಿಗೂ ಸಾಕಷ್ಟು ತರಬೇತಿ ಸಹ ನೀಡಲಾಗಿತ್ತು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಮೀಕ್ಷೆಯ ಪ್ರಮಾಣ ಕಡಿಮೆ ಇದೆಯಲ್ವಾ?

ಕೆಲ ಜಿಲ್ಲೆಗಳಲ್ಲಿ ರಾಜಕೀಯ ಕಾರಣಗಳಿಂದ ಜನರ ಮನಸ್ಥಿತಿ ಬೇರೆ ಇದೆ. ನಾವು ಆರಂಭದಿಂದಲೂ ಈ ಸಮೀಕ್ಷೆ ನಿರ್ದಿಷ್ಟ ಜಾತಿ, ಧರ್ಮಕ್ಕೆ ಸಂಬಂಧವಿಲ್ಲ. ನಮ್ಮ ಮುಖ್ಯ ಉದ್ದೇಶ ಯಾರು ಮುಂದುವರೆದಿದ್ದಾರೆ, ಯಾರು ಹಿಂದುಳಿದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಷ್ಟೇ. ಕೆಲವರು ತಪ್ಪು ತಿಳಿವಳಿಕೆಯಿಂದಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂಜರಿದರು. ಈಗ ತಿಳಿವಳಿಕೆ ಬಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳತೊಡಗಿದ್ದಾರೆ.

ಸಮೀಕ್ಷೆಯಲ್ಲಿ 60 ಪ್ರಶ್ನೆಗಳು ಅತಿಯಾಯಿತು ಅಂತ ಉಪ ಮುಖ್ಯಮಂತ್ರಿಗಳೇ ಹೇಳ್ತಾರಲ್ಲ?

ಸಮೀಕ್ಷೆ ಆರಂಭವಾಗುತ್ತಿದ್ದಂತೆ ರಾಜಕೀಯ ವಿಚಾರಗಳು ಉದ್ಭವವಾಗತೊಡಗಿದವು. ಮಾಧ್ಯಮಗಳಲ್ಲೂ ದೊಡ್ಡದಾಗಿ ಬಿಂಬಿತವಾದವು. ಜಾತಿ, ಧರ್ಮ ಮುಂತಾದ ವಿಚಾರಗಳ ಕುರಿತು ಹೇಳಿಕೆಗಳು ಕೇಳಿ ಬಂದಾಗ ಅವುಗಳನ್ನು ಪರಿಹರಿಸಲು ಸ್ವಲ್ಪ ಸಮಯ ಬೇಕಾಯಿತು. ಹೀಗಾಗಿ ನಮ್ಮ ಮೂಲ ಉದ್ದೇಶ ಕೆಲ ಕಾಲ ಬೇರೆಡೆ ತಿರುಗಿತು. ಆದರೆ ನಾವು ಹೊಸದಾಗಿ ಯಾವ ಪ್ರಶ್ನೆಗಳನ್ನೂ ಸೇರ್ಪಡೆ ಮಾಡಲಿಲ್ಲ.

ಹೌದು, ಯಾಕೆ ಇಷ್ಟೊಂದು ಪ್ರಶ್ನೆಗಳು?

ವಾಸ್ತವವಾಗಿ ನಮ್ಮ ಇಡೀ ಪ್ರಶ್ನಾವಳಿಗಳು ಕೇವಲ ಯಾರು ಹಿಂದುಳಿದ್ದಾರೆ, ಯಾರು ಮುಂದುವರೆದಿದ್ದಾರೆ ಎಂಬುದನ್ನು ಗುರುತಿಸಲು ಮಾತ್ರ ಸೀಮಿತವಾಗಿಲ್ಲ. ನಾವು ಸಂಗ್ರಹಿಸುವ ದತ್ತಾಂಶ ಸರ್ಕಾರಕ್ಕೆ ಬೇರೆ ಬೇರೆ ರೂಪದಲ್ಲಿ ಅನುಕೂಲವಾಗಬಹುದು ಎಂಬ ಉದ್ದೇಶದಿಂದ ಹೆಚ್ಚು ಪ್ರಶ್ನೆಗಳನ್ನು ಸೇರ್ಪಡೆ ಮಾಡಿದ್ದೇವೆ. ಉದಾಹರಣೆಗೆ ಯಾವುದಾದರೂ ದಾವೆಗಳು ಇವೆಯೇ, ಕಾನೂನು ಸಹಾಯ ಬೇಕೇ, ಸಾರಿಗೆ ವ್ಯವಸ್ಥೆ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಇವೆ. ಇವುಗಳನ್ನು ಕೇಳದಿದ್ದರೂ ನಡೆಯುತ್ತಿತ್ತು. ಆದರೆ ಸರ್ಕಾರಕ್ಕೆ ಅನುಕೂಲವಾಗಬೇಕು, ಪ್ರತಿಯೊಂದು ಇಲಾಖೆ ಸರ್ವೆ ಮಾಡಿ ತನ್ನ ಕಾರ್ಯಕ್ರಮ ಜಾರಿಗೆ ತರಲು ಆಗುವುದಿಲ್ಲ. ಆದ್ದರಿಂದ ವಿವಿಧ ಇಲಾಖೆಗಳಿಗೆ ಅನುಕೂಲವಾಗುವ ಬೇರೆ ಬೇರೆ ಸ್ವರೂಪದ ಪ್ರಶ್ನೆಗಳನ್ನು ಕೇಳಲಾಗಿದೆ ಅಷ್ಟೆ.

ಸಿಟಿ ಜನರಿಗೆ ಕುರಿ, ಕೋಳಿ ಸಾಕಿದ್ದೀರಾ?, ಚಿರಾಸ್ತಿಗಳ ವಿವರ ನೀಡಿ ಅಂತ ಕೇಳುವ ಅಗತ್ಯವಿದೆಯೇ?

ನೋಡಿ, ನಾವು ರಾಜ್ಯದ ಏಳು ಕೋಟಿ ಜನರ ದತ್ತಾಂಶ ಸಂಗ್ರಹಿಸುತ್ತಿದ್ದೇವೆ. ಹಳ್ಳಿ ಹಾಗೂ ನಗರ ಜನರ ಮನಸ್ಥಿತಿಯೇ ಬೇರೆ. ಹೀಗಾಗಿ ಪ್ರಶ್ನೆಗಳನ್ನು ಎಲ್ಲರಿಗೂ ಅನ್ವಯವಾಗುವಂತೆ ಕೇಳಬೇಕಾಗುತ್ತದೆ. ನಮ್ಮ ಸರ್ವೇಯಿಂದ ಯಾರಿಗೂ ಅನಾನುಕೂಲ ಆಗುವುದಿಲ್ಲ, ಸರ್ವೆ ಆಧರಿಸಿ ಸರ್ಕಾರ ಕ್ರಮಕೈಗೊಳ್ಳಲು ಆಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಒಟ್ಟು ದತ್ತಾಂಶ ಆಧರಿಸಿ ಯಾರು ಹಿಂದುಳಿದಿದ್ದಾರೆ, ಯಾರು ಮುಂದುವರೆದಿದ್ದಾರೆ ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಉಳಿದ ದತ್ತಾಂಶಗಳನ್ನು ಸಂಬಂಧಪಟ್ಟ ಇಲಾಖೆಗೆ ಮಾತ್ರ ಕಳುಹಿಸಲಾಗುವುದು. ಉದಾಹರಣೆಗೆ ಯಾರಿಗಾದರೂ ಕಾನೂನಿನ ಸಹಾಯ ಬೇಕು ಎಂದು ಮಾಹಿತಿ ನೀಡಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಅವರ ಮೊಬೈಲ್‌ ನಂಬರ್‌ ಮೂಲಕ ಸಂಪರ್ಕಿಸಿ ನೆರವು ನೀಡಲಿದೆ.

ಮಾಹಿತಿ ನೀಡಲು ಜನ ನಿರಾಕರಿಸುವವರ ಮನವೊಲಿಸುವ ಉದ್ದೇಶವಿದೆಯೇ?

ಇದು ಕಷ್ಟದ ಕೆಲಸ, ಸಾರ್ವಜನಿಕವಾಗಿ ಅರಿವು ಮೂಡಿಸುವ, ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಪ್ರಚಾರ ಮಾಡುವ ಕೆಲಸವನ್ನಷ್ಟೇ ಮಾಡಬಹುದು ಅಷ್ಟೇ.

ಮಾಹಿತಿ ನೀಡದಿದ್ದರೆ ಏನೂ ಮಾಡಲು ಆಗಲ್ಲ. ಆದರೆ ಆರಂಭದಲ್ಲಿ ಮಾಹಿತಿ ನೀಡಲು ನಿರಾಕರಿಸುತ್ತಿದ್ದರು. ಈಗ ನಿಧಾನವಾಗಿ ಭಾಗಿಯಾಗುತ್ತಿದ್ದಾರೆ.

ಆದರೆ ಕೆಲ ಸಮುದಾಯದ ಮುಖಂಡರು ಈ ಸಮೀಕ್ಷೆಯಿಂದ ತಮ್ಮ ಸಮುದಾಯಕ್ಕೆ ಏನೂ ಅನುಕೂಲವಾಗುವುದಿಲ್ಲ, ಸಮುದಾಯದ ಜನ ಭಾಗಿಯಾಗದಂತೆ ಹೇಳಿಕೆ ನೀಡಿರುವ ಬಗ್ಗೆ ಏನು ಹೇಳುತ್ತೀರಿ?

ಈ ರೀತಿ ಹೇಳಿಕೆಯ ಪರಿಣಾಮಗಳ ಬಗ್ಗೆ ಅವರು ಯೋಚಿಸಿಲ್ಲ ಎಂದು ಅನಿಸುತ್ತದೆ. ಇಂಥ ಹೇಳಿಕೆ ನೀಡಿದವರು ಸಾಮಾನ್ಯ ವರ್ಗದಿಂದ ಬಂದಿರಬಹುದು, ಸರ್ಕಾರದಿಂದ ಸೌಲಭ್ಯ ಪಡೆಯುವ ಅವಶ್ಯಕತೆ ಅವರಿಗೆ ಇಲ್ಲದೇ ಇರಬಹುದು. ಆದರೆ ಅವರು ಪ್ರತಿನಿಧಿಸುವ ಸಮುದಾಯದಲ್ಲೂ ಬಡವರು, ಹಿಂದುಳಿದವರು ಇರಬಹುದು, ಅವರಿಗೆ ಸರ್ಕಾರದ ಸೌಲಭ್ಯಗಳ ಅಗತ್ಯ ಇರಬಹುದು. ಅಂಥವರಿಗೆ ಈಗಿನ ಸರ್ಕಾರಕ್ಕೆ ಅನುಕೂಲ ಮಾಡಲು ಆಗದೇ ಇರಬಹುದು, ಆದರೆ ಮುಂಬರುವ ಯಾವುದೇ ಸರ್ಕಾರಗಳು ಇಂತಹ ಸಮುದಾಯದ ದತ್ತಾಂಶಗಳನ್ನು ಆಧರಿಸಿ ಕಾರ್ಯಕ್ರಮ ಜಾರಿಗೆ ತರಲು ಅವಕಾಶ ಇದ್ದೇ ಇರುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸದಂತೆ ಯಾವುದೇ ಮುಖಂಡರು ಹೇಳಿದರೂ ಅದು ರಾಜಕೀಯ ಉದ್ದೇಶದ ಹೇಳಿಕೆಯಷ್ಟೇ ಆಗಿರುತ್ತದೆ. ಅಂಥವರಿಗೆ ಸಮಾಜದ ಕುರಿತು ಕಾಳಜಿ ಇಲ್ಲ, ಅವರದು ಮೂರ್ಖತನದ ಹೇಳಿಕೆ ಎಂದೇ ಹೇಳಬೇಕಾಗುತ್ತದೆ.

ಯಾವುದೋ ನಿರ್ದಿಷ್ಟ ಸಮುದಾಯದ ಸಂಖ್ಯೆ ಹೆಚ್ಚಿಸಲು ಸಮೀಕ್ಷೆ ಮಾಡಲಾಗುತ್ತಿದೆ ಎಂಬ ಆರೋಪಗಳು ಇವೆಯಲ್ವಾ?

ಈ ಮೊದಲಿನ ಆಯೋಗದ ವರದಿ ಹೊರಬಾರದಿದ್ದರೂ ಯಾವ ಸಮುದಾಯ ಎಷ್ಟಿದೆ ಎಂಬ ಅಂಕಿ-ಸಂಖ್ಯೆಗಳು ಸೋರಿಕೆಯಾಗಿದ್ದವು. ನನ್ನ ಪ್ರಕಾರ ಆ ಸಂಖ್ಯೆಗಳಿಗೆ ಯಾವ ಮಹತ್ವವೂ ಇಲ್ಲ. ನಮಗೆ ವರ್ಗವಾರು ಶೇಕಡಾ ನಿಗದಿ ಮಾಡಲು ಜನಸಂಖ್ಯೆ ಮಾಹಿತಿ ಬೇಕಾಗುತ್ತದೆ. ಜನಸಂಖ್ಯೆಯಿಂದ ಯಾರನ್ನೂ ಮೇಲೆ-ಕೆಳಗೆ ಮಾಡಲು ಆಗಲ್ಲ. ಮುಖಂಡರು ಸಮೀಕ್ಷೆ ಬಗ್ಗೆ ಜನರನ್ನು ನಿರುತ್ಸಾಹಗೊಳಿಸಿದರೆ ನಮ್ಮಲ್ಲಿ ಬೇಸಿಕ್‌ ನಂಬರ್‌ ಕಡಿಮೆಯಾಗಬಹುದೆಂದು ಒಂದೊಂದು ಸಾರಿ ಆತಂಕ ಆಗುತ್ತದೆ. ಆದ್ದರಿಂದ ಒಂದು ವೇಳೆ ಕಡಿಮೆಯಾದರೂ ಹಿಂದಿನ ಆಯೋಗದ ವರದಿಯಲ್ಲಿ ಸಂಖ್ಯೆ ಪಡೆದುಕೊಂಡು ಈಗ ಎಷ್ಟಾಗಬಹುದೆಂದು ಅಂದಾಜಿಸಿ ವರದಿ ಕೊಡಬೇಕಾಗುತ್ತದೆ.

ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದರೆ? ಮಾಹಿತಿ ಸರಿಯೇ ಎಂಬುದರ ಖಾತರಿ ಹೇಗೆ?

ಸಮೀಕ್ಷೆಯಲ್ಲಿ ಕೆಲವರು ಅಪೂರ್ಣ ಇಲ್ಲವೇ ಮಾಹಿತಿ ಕೊಡಲು ನಿರಾಕರಿಸಬಹುದು, ಆದ್ದರಿಂದ ನಿಜವಾದ ಮಾಹಿತಿ ಹೇಗೆ ಪಡೆಯಬೇಕು ಎಂಬ ಬಗ್ಗೆ ಆಯೋಗ ಈಗಾಗಲೇ ಚರ್ಚಿಸಿದೆ. ಮಾಹಿತಿ ನೀಡದ ಕಾರಣ ಬೇರೆ ಯಾವ ಮಾನದಂಡ ಅನುಸರಿಸಬೇಕು ಎಂಬ ಬಗ್ಗೆ ಆಯೋಗ ಚಿಂತನೆ ಮಾಡಲಿದೆ. ಜೊತೆಗೆ ಸರ್ಕಾರದ ಬಳಿ ಬೇರೆ ಬೇರೆ ರೂಪದಲ್ಲಿ ಹಲವಾರು ಮಾಹಿತಿಗಳು ಇರುತ್ತವೆ, ಅದನ್ನು ಪಡೆಯಲು ಅವಕಾಶ ಇರುತ್ತದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸಮೀಕ್ಷೆ ಯಾಕೆ ವಿಳಂಬವಾಯಿತು. ಮಕ್ಕಳನ್ನು ಸಮೀಕ್ಷೆಗೆ ಬಳಸಲಾಗಿದೆ ಎಂಬ ದೂರು ಇದೆ?

ಬೆಂಗಳೂರು ಸೇರಿ ರಾಜ್ಯಾದ್ಯಂತ ಏಕಕಾಲದಲ್ಲಿ ಸಮೀಕ್ಷೆ ಮಾಡುವ ಉದ್ದೇಶವಿತ್ತು. ಆದರೆ ಇದರ ಮಧ್ಯೆ ಜಿಬಿಎ ರಚನೆಯಾಯಿತು. ಹೀಗಾಗಿ ಆಡಳಿತಾತ್ಮಕವಾಗಿ ಕೆಲ ತೊಂದರೆ ಬಂದ ಕಾರಣ ಜಿಬಿಎ ವ್ಯಾಪ್ತಿಯಲ್ಲಿ ಸ್ವಲ್ಪ ತಡವಾಗಿ ಸಮೀಕ್ಷೆ ಮಾಡಲು ಚಿಂತನೆ ಮಾಡಲಾಯಿತು. ಜಿಬಿಎ ವ್ಯಾಪ್ತಿಯಲ್ಲಿ ಶಿಕ್ಷಕರನ್ನು ಸಮೀಕ್ಷೆಗೆ ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ ಎಂದು ಅ.4ರಿಂದ ಸಮೀಕ್ಷೆ ಆರಂಭಿಸಲಾಯಿತು. ಸಮೀಕ್ಷೆಗೆ ಮಕ್ಕಳನ್ನು ಬಳಸುವುದನ್ನು ಆಯೋಗ ಉತ್ತೇಜಿಸುವುದಿಲ್ಲ. ಕೆಲ ಸಮೀಕ್ಷೆದಾರರು ತಂತ್ರಜ್ಞಾನದ ವಿಷಯದಲ್ಲಿ ಅಷ್ಟೊಂದು ಪರಿಣಿತರಾಗಿಲ್ಲ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿರಬಹುದು. ಆದರೆ ಸಮೀಕ್ಷೆಯ ದತ್ತಾಂಶವನ್ನು ಮನೆಯ ಮುಖ್ಯಸ್ಥನ ಸಮ್ಮುಖದಲ್ಲಿ ದಾಖಲು ಮಾಡಲಾಗುತ್ತದೆ.

ಸಮೀಕ್ಷೆ ವಿಚಾರ ಹೈಕೋರ್ಟ್‌ನಲ್ಲಿದೆ. ತೀರ್ಪು ವಿರುದ್ಧ ಬಂದರೆ ಆಯೋಗದ ಮುಂದಿನ ನಡೆಯೇನು?

ತಮಗೆ ಅನಿಸಿದಂತೆ ಹೈಕೋರ್ಟ್‌ ಸಮೀಕ್ಷೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸದೆ ಸಮೀಕ್ಷೆ ಕಾರ್ಯ ಎತ್ತಿಹಿಡಿಯುವ ವಿಶ್ವಾಸವಿದೆ.

ಸಮೀಕ್ಷಾ ವರದಿ ಸಲ್ಲಿಕೆ ಯಾವಾಗ?

ಸಮೀಕ್ಷೆ ಕಾರ್ಯ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳ 24ರೊಳಗೆ ಸಮೀಕ್ಷೆ ಪೂರ್ಣಗೊಳಿಸಿದ ಎರಡು ತಿಂಗಳೊಳಗೆ ಅಂದರೆ ಡಿಸೆಂಬರ್‌ ಒಳಗಾಗಿ ವರದಿ ಕೊಡಬೇಕೆಂಬ ಉದ್ದೇವಿದೆ.

ಆಯೋಗ ಕೊಡುವ ವರದಿಯಲ್ಲಿನ ಶಿಫಾರಸು ರಾಜಕೀಯ ಕಾರಣಕ್ಕಾಗಿ ತಿರುಚಲ್ಪಟ್ಟರೆ ಏನು ಕಥೆ?

ಆಯೋಗದ ಕಾನೂನು, ನಿಯಮದ ಪ್ರಕಾರ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳಲು ಬದ್ಧರಾಗಿರುತ್ತದೆ. ಹಿಂದಿನ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಲಿಲ್ಲ. ಆದರೆ ಆಯೋಗದ ದತ್ತಾಂಶ ಹತ್ತು ವರ್ಷಗಳ ಹಿಂದಿನದ್ದು ಎಂಬ ಕಾರಣಕ್ಕೆ ಒಪ್ಪಿಕೊಂಡಿಲ್ಲ. ಹತ್ತು ವರ್ಷಗಳಿಗೊಮ್ಮೆ ಸಮೀಕ್ಷೆ ಮಾಡಬೇಕೆಂಬ ನಿಯಮವಿದೆ.

ವರದಿ ಅಂಗೀಕಾರಕ್ಕೆ ಕಾಲಮಿತಿ ಬೇಕಲ್ಲವೇ?

ಈ ವಿಷಯ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ .ಒಂದು ವೇಳೆ ವರದಿ ಶಿಫಾರಸುಗಳನ್ನು ಜಾರಿಗೆ ತರದಿದ್ದರೆ ಯಾರಾದರೂ ಕೋರ್ಟ್‌ಗೆ ಹೋಗಿ ಪ್ರಶ್ನಿಸಿದರೆ ನ್ಯಾಯಾಲಯ ಈ ಬಗ್ಗೆ ನಿರ್ಧರಿಸುತ್ತದೆ.