ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ, ಈ ಕಾರ್ಯಕ್ರಮ ನಮಗೆ ಪುಟುಗೋಸಿ ಅಂದರೆ ಪುಟುಗೋಸಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಕರವೇ ಅಧ್ಯಕ್ಷನ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರು (ಜ.14) ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಜನಪ್ರಿಯತೆ ಹೆಚ್ಚಿಸಿಕೊಂಡಂತೆ ಅಷ್ಟೇ ವಿವಾದ, ಟೀಕೆಗೂ ಗುರಿಯಾಗಿದೆ. ಬಿಗ್ ಬಾಸ್ 12ರ ಹಲವು ಎಪಿಸೋಡ್‌ಗಳು ಬಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಇಷ್ಟೇ ಅಲ್ಲ ಪ್ರಕರಣ, ಬಿಗ್ ಬಾಸ್ ಮನೆಗೆ ಬೀಗ ಸೇರಿದಂತೆ ಹಲವು ಅನಿರೀಕ್ಷಿತ ಘಟನೆಗಳು ನಡೆದಿದೆ. ಇತ್ತೀಚೆಗೆ ಕಿಚ್ಚನ ಚಪ್ಪಾಳೆ, ಬಿಗ್ ಬಾಸ್‌ನಲ್ಲಿ ಕೆಲ ಸ್ಪರ್ಧಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಅನ್ನೋ ವಿಚಾರದಲ್ಲಿ ಭಾರಿ ವಿವಾದಗಳು ಸೃಷ್ಟಿಯಾಗಿದೆ. ಈ ಪೈಕಿ ಅಶ್ವಿನಿ ಗೌಡ ಗೆಲ್ಲಿಸಲು ಬಿಗ್ ಬಾಸ್ ಟೊಂಕ ಕಟ್ಟಿ ನಿಂತಿದೆ. ಆದರೆ ಜನರ ಆಯ್ಕೆ ಗಿಲ್ಲಿ ನಟ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕರವೇ ಅಧ್ಯಕ್ಷ ನಾರಾಯಣ ಗೌಡರು ಕಿಚ್ಚು ಸುದೀಪ್ ಭೇಟಿ ಫೋಟೋಗಳು ಕಿಚ್ಚೆಬ್ಬಿಸಿದೆ. ಕನ್ನಡ ಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಪರ ಬ್ಯಾಟಿಂಗ್ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ ಕರವೇ ನಾಯಕರು ಕೆರಳಿದ್ದಾರೆ. ಈ ಪುಟುಗೋಸಿ ಬಿಗ್ ಬಾಸ್ ಶೋನಿಂದ ನಮಗೇನು ಆಗಬೇಕಾಗಿಲ್ಲ ಎಂದು ಬೆಂಗಳೂರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ್ಯ ಧರ್ಮರಾಜ್ ಗೌಡ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಲವರು ಗರಂ
ಧರ್ಮರಾಜ್ ಗೌಡ ನೀಡಿದ ಬಿಗ್ ಬಾಸ್ ಪುಟುಗೋಸಿ ಕಾರ್ಯಕ್ರಮ ಹೇಳಿಕೆಗೆ ವಿರೋಧಗಳು ವ್ಯಕ್ತವಾಗಿದೆ. ಬಿಗ್ ಬಾಸ್ ಕಾರ್ಯಕ್ರಮ ಹಲವು ಪ್ರತಿಭೆಗಳಿಗೆ ಮಣೆ ಹಾಕಿದೆ. ಜನರು ಮೆಚ್ಚಿದ ಸ್ಪರ್ಧಿಗಳು ಗೆಲುವು ಕಂಡಿದ್ದಾರೆ. ಹಲವರು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಹೊಸ ಬದುಕು ರೂಪಿಸಿಕೊಂಡಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಹೀಗಾಗಿ ಪುಟುಗೋಸಿ ಕಾರ್ಯಕ್ರಮ ಎಂಬ ಹೇಳಿಕೆ ಸರಿಯಲ್ಲ ಎಂಬ ಮಾತುಗಳು ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಧರ್ಮರಾಜ್ ಹೇಳಿಕೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಏನಿದು ಘಟನೆ?
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಕರವೇ ಅಧ್ಯಕ್ಷ ಹಾಗೂ ಕಿಚ್ಚ ಸುದೀಪ್ ಭೇಟಿ ಫೋಟೋ ಕುರಿತು ಪ್ರತಿಕ್ರಿಯಿಸುವ ವೇಳೆ ಧರ್ಮರಾಜ್ ಗೌಡ ಈ ಮಾತು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಮೂಲಕ ಗುರುತಿಸಿಕೊಂಡಿದ್ದಾರೆ.ಅಶ್ವಿನಿ ಗೌಡ ಪರ ಬ್ಯಾಟಿಂಗ್ ಮಾಡಲು ನಾರಾಯಣ ಗೌಡರು ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ ಅನ್ನೋ ಪ್ರತಿಕ್ರಿಯೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ಈ ಮಾತುಗಳನ್ನು ನಿರಾಕರಿಸಿದ ಧರ್ಮರಾಜ್ ಗೌಡರು, ಅಶ್ವಿನಿ ಗೌಡರನ್ನು ನಾವು ಬೆಂಬಲಿಸಿದ್ದೇವೆ. ಆದರೆ ನಾರಾಯಣಗೌಡರು ಹಾಗೂ ಕಿಚ್ಚ ಸುದೀಪ್ ಭೇಟಿಯ ವಿಚಾರವೇ ಬೇರೆ. ನಾರಾಯಣ ಗೌಡರ ಮಗನ ವಿವಾಹ ಆಮಂತ್ರಣ ಪತ್ರಿಕೆ ನೀಡಲು ಭೇಟಿಯಾಗಿದ್ದಾರೆ. ರಾಜ್ಯ ಮುಖ್ಯಮಂತ್ರಿಗಳಿಂದ ಹಿಡಿದು ಪ್ರಮುಖ ಗಣ್ಯರನ್ನು ನಾರಾಯಣ ಗೌಡರು ಭೇಟಿಯಾಗಿ ಆಮಂತ್ರಣ ನೀಡುತ್ತಿದ್ದಾರೆ. ಇದಕ್ಕೂ ಬಿಗ್ ಬಾಸ್ ಶೋಗೂ ಸಂಬಂಧವಿಲ್ಲ. ಸಂಘಟನೆ ಸದಸ್ಯರನ್ನು ಬೆಂಬಲಿಸುವ ಸಲುವಾಗಿ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗುವ ಅವಶ್ಯತೆ ಕರವೇಗಿಲ್ಲ. ಇದು ಸೋಶಿಯಲ್ ಮೀಡಿಯಾದಲ್ಲಿ ಆಧಾರ ರಹಿತವಾಗಿ ಮಾಡುತ್ತಿರುವ ಆರೋಪ. ಇದು ಸತ್ಯಕ್ಕೆ ದೂರವಾಗಿದೆ ಎಂದು ಧರ್ಮರಾಜ್ ಗೌಡ ಹೇಳಿದ್ದಾರೆ. ಇದೇ ವೇಳೆ ಪುಟುಗೋಸಿ ಬಿಗ್ ಬಾಸ್ ಕಾರ್ಯಮದಿಂದ ಕರವೇಗೆ ಏನೂ ಆಗಬೇಕಿಲ್ಲ. ನಮ್ಮ ಹೋರಾಟ, ಚಳುವಳಿಗಳು, ಬೇರೆ ಇದೆ. ನಾರಾಯಣಗೌಡರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಬಿಗ್ ಬಾಸ್ ಶೋ ಕುರಿತು ಮಾತನಾಡಲು, ಯಾರನ್ನೋ ಬೆಂಬಲಿಸುವ ಸಲುವಾಗಿ ಭೇಟಿ ಮಾಡುವಷ್ಟು ಸಮಯವೂ ಅವರಲ್ಲಿ ಇಲ್ಲ ಎಂದು ಧರ್ಮರಾಜ್ ಗೌಡ ಸ್ಪಷ್ಟನೆ ನೀಡಿದ್ದಾರೆ.


