ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತದಲ್ಲಿ ಮಗನನ್ನು ಕಳೆದುಕೊಂಡ ತಂದೆಯೊಬ್ಬರ ಆರ್ತನಾದ ಮನಕಲಕುವಂತೆ ಮಾಡಿತು.

ಆರ್‌ಸಿಬಿ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ಆಚರಿಸಲು ಬಂದು ಪ್ರಾಣ ಕಳೆದುಕೊಂಡ ಅಭಿಮಾನಿಗಳದ್ದು, ಒಬ್ಬೊಬ್ಬರದ್ದು ಒಂದೊಂದು ಕತೆಯಾಗಿದೆ. ಬಹುತೇಕರು 17ರಿಂದ 30 ವರ್ಷದೊಳಗಿನ ಎಳೆ ಪ್ರಾಯದವರೇ ಆಗಿದ್ದಾರೆ. ಬಹುತೇಕರು ಪೋಷಕರಿಗೆ ಹೇಳದೆಯೇ ಈ ಸಂಭ್ರಮಾಚರಣೆ ಮಾಡಲು ಹೋಗಿ ಜೀವ ಕಳೆದುಕೊಂಡವರು. ಗಾಯಾಳುಗಳು ಮೃತಪಟ್ಟವರನ್ನು ಇರಿಸಿದ್ದ ಆಸ್ಪತ್ರೆಯ ಮುಂದೆ ತಮ್ಮವವರನ್ನು ಕಳೆದುಕೊಂಡ ಕುಟುಂಬಸ್ಥರ ಗೋಳಾಟ ನೋಡತೀರದಾಗಿತ್ತು. ಈ ದುರಂತ ಹಲವು ಮನಕಲಕುವ ಘಟನೆಗಳಿಗೆ ಸಾಕ್ಷಿಯಾಯ್ತು. ಅದೇ ರೀತಿ ಈ ದುರಂತದಲ್ಲಿ ಮಗನನ್ನು ಕಳೆದುಕೊಂಡು ರೋದಿಸುತ್ತಿದ್ದ ತಂದೆಯೊಬ್ಬರನ್ನು ನೋಡಿದರೆ ಎಂಥವರಿಗೂ ಮನಕಲುಕುವಂತಿತ್ತು.

ತನ್ನ ಏಕೈಕ ಮಗನನ್ನು ಕಳೆದುಕೊಂಡ ತಂದೆಯೊಬ್ಬರು, ತನ್ನ ಮಗನ ಮರಣೋತ್ತರ ಪರೀಕ್ಷೆ ಮಾಡದೇ ದೇಹವನ್ನು ನೀಡುವಂತೆ ಅಲ್ಲಿದ್ದ ಅಧಿಕಾರಿಗಳಲ್ಲಿ ಮನವಿ ಮಾಡಿದ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿದವು ಕನಿಷ್ಠ ಆತನ ದೇಹವನ್ನು ನನಗೆ ನೀಡಿ, ಮರಣೋತ್ತರ ಪರೀಕ್ಷೆ ಮಾಡಬೇಡಿ, ಅವನ ದೇಹವನ್ನು ಭಾಗಗಳಾಗಿ ಕತ್ತರಿಸಬೇಡಿ ಎಂದು ತಂದೆಯೊಬ್ಬರು ನೋವಿನಿಂದ ಮನವಿ ಮಾಡಿದರು. ಮಗನ ಕಳೆದುಕೊಂಡ ದುಃಖವನ್ನು ತಡೆದುಕೊಂಡು ತಮ್ಮ ಭಾವನೆಯನ್ನು ನಿಯಂತ್ರಿಸಿಕೊಂಡು ಮಾತು ಮುಂದುವರೆಸಿದ ಅವವರು ನನಗಿರುವುದು ಒಬ್ಬನೇ ಮಗ, ಈಗ ನಾನು ಅವನನ್ನು ಕಳೆದುಕೊಂಡಿದ್ದೇನೆ. ಆತ ನನಗೆ ಹೇಳದೇ ಇಲ್ಲಿಗೆ ಬಂದಿದ್ದ. ಈಗ ಮುಖ್ಯಮಂತ್ರಿಗಳು, ಡಿಸಿಎಂಗಳು ಇಲ್ಲಿಗೆ ಬರಬಹುದು, ಆದರೆ ಅವನನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದು ಅವರು ಗೋಳಾಡಿದ್ದಾರೆ.

ನಿನ್ನೆ ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಈ ನತದೃಷ್ಟ ತಂದೆಯ ಮಗನೂ ಸೇರಿದಂತೆ ಒಟ್ಟು 11 ಕ್ರಿಕೆಟ್ ಅಭಿಮಾನಿಗಳು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಬೆಳಗಿನ ಹೊತ್ತಿಗೆ ಎಲ್ಲಾ ಶವಪರೀಕ್ಷೆಗಳು ಮುಗಿದು ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. 18 ವರ್ಷಗಳಲ್ಲಿಇದೇ ಮೊದಲ ಬಾರಿ ಟ್ರೋಫಿ ಎತ್ತಿದ್ದ ಆರ್‌ಸಿಬಿ ಚೊಚ್ಚಲ ಗೆಲುವನ್ನು ಆಚರಿಸಲು ಸಾಗರೋಪಾದಿಯಲ್ಲಿ ಜನ ಸೇರಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 35 ಸಾವಿರ ಜನರಿಗೆ ಇರಲು ವ್ಯವಸ್ಥೆ ಇದ್ದರೆ, ಹೊರಗೆ 2 ಲಕ್ಷಕ್ಕೂ ಅಧಿಕ ಜನ ಸೇರಿದ್ದರು ಎಂದು ವರದಿಯಾಗಿದೆ.

ಸ್ಟೇಡಿಯಂ ಒಳಗೆ ಆಚರಣೆಗಳು ನಡೆಯುತ್ತಿದ್ದಂತೆ, ಹೊರಗೆ ನೂಕುನುಗ್ಗಲು ಶುರುವಾಯಿತು. ನಿರೀಕ್ಷೆಗಿಂತ ಹೆಚ್ಚಿನ ಜನಸಂದಣಿ ಕ್ರೀಡಾಂಗಣದ ಕಿರಿದಾದ ಪ್ರವೇಶ ದ್ವಾರಗಳಲ್ಲಿ ನುಗ್ಗಲು ಯತ್ನಿಸಿದ್ದು, ಕಾಲ್ತುಳಿತಕ್ಕೆ ಕಾರಣವಾಯ್ತು.

ಪುತ್ತೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಬೆಂಗಳೂರು ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವಿದ್ಯಾರ್ಥಿನಿಯೂ ಸಾವನ್ನಪ್ಪಿದ್ದಾರೆ. ಹೀಗೆ ಈ ದುರಂತದಲ್ಲಿ ಮೃತಳಾದ ಚಿನ್ಮಯಿ ಶೆಟ್ಟಿ, ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದರು. ಮೂಲತಃ ಪುತ್ತೂರಿನ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಚಿನ್ಮಯಿ ಶೆಟ್ಟಿ ಕಾಲೇಜಿಗೆ ತೆರಳಿದ್ದು ಬಳಿಕ ಅಲ್ಲಿಂದ ತನ್ನ ಸ್ನೇಹಿತರ ಜೊತೆ ಆರ್‌ಸಿಬಿ ಸಂಭ್ರಮ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಲಾಗಿದೆ.

ಚಿನ್ಮಯಿ ಶೆಟ್ಟಿ (19) ತಾಯಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು, ಇವರ ಓರ್ವ ಸಹೋದರ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ತಂದೆ ಕರುಣಾಕರ ರೈ ಬೆಂಗಳೂರಿನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಓದಿನಲ್ಲೂ ಮುಂದೆ ಇದ್ದ ಈಕೆ ಕ್ರೀಡೆಯಲ್ಲೂ ಸಾಧಕಿಯಾಗಿದ್ದು, ಬೆಂಗಳೂರಿನ ಯಕ್ಷ ತರಂಗ ಯಕ್ಷಗಾನ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದರು. ಬೆಂಗಳೂರಿನ ಕನಕಪುರ ಮಾರ್ಗದ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.