ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ಬಗ್ಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಹೊರಗೆ ನಡೆದ ದುರ್ಘಟನೆಯ ಅರಿವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಜೂ.4): ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದೊಳಗೆ ಇದ್ದ ಅಧಿಕಾರಿಗಳಿಗೆ ಹೊರಗೆ ಏನು ನಡೆಯುತ್ತಿದೆ ಎಂಬುದರ ಅರಿವಿರಲಿಲ್ಲ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಇದರ ಮಾಹಿತಿ ಇದ್ದಿರಲಿಲ್ಲ ಎಂದಿದ್ದಾರೆ.
ಬಿಸಿಸಿಐ ಹಾಗೂ ಐಪಿಎಲ್ ವತಿಯಿಂದ ಆಗಬೇಕಾಗಿರುವ ಸಂಭ್ರಮ ಅಹಮದಾಬಾದ್‌ನಲ್ಲಿಯೇ ಮಂಗಳವಾರ ಮುಗಿದಿದೆ. ಆದರೆ, ಬೆಂಗಳೂರಿನ ಕಾರ್ಯಕ್ರಮವನ್ನು ಆಯೋಜಿಸಿದ್ದು ಯಾರು ಎನ್ನುವುದನ್ನು ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.
"ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಾಗ ನಾವು ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದೇವೆ ಮತ್ತು ಅವರು ಸಮಾರಂಭವನ್ನು ತ್ವರಿತವಾಗಿ ಮುಗಿಸುವುದಾಗಿ ಭರವಸೆ ನೀಡಿದರು. ಇದು ಖಂಡಿತವಾಗಿಯೂ ದುಃಖಕರ ಮತ್ತು ದುರಂತ. ಆರ್‌ಸಿಬಿ ಅಧಿಕಾರಿಗಳು ಈಗಲೇ ಆಚರಣೆಗಳನ್ನು ಮುಕ್ತಾಯಗೊಳಿಸುವುದಾಗಿ ನನಗೆ ಭರವಸೆ ನೀಡಿದರು" ಎಂದು ಧುಮಾಲ್ ಹೇಳಿದ್ದಾರೆ.ಕ್ರೀಡಾಂಗಣದ ಹೊರಗೆ ಅಭಿಮಾನಿಗಳಿಗೆ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳಿಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದರು.
"ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಹೊರಗೆ ಏನಾಯಿತು ಎಂದು ತಿಳಿದಿರಲಿಲ್ಲ. ಅವರು ಕಾರ್ಯಕ್ರಮವನ್ನು ಬೇಗ ಮುಗಿಸುವುದಾಗಿ ನನಗೆ ಭರವಸೆ ನೀಡಿದರು. ಇದು ತುಂಬಾ ದುಃಖಕರ ಮತ್ತು ದುರಂತ. ಸಾವು ಕಂಡವರ ಬಗ್ಗೆ ಸಂತಾಪವಿದೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಯಾರು ಅನ್ನೋದು ನಮಗೆ ಗೊತ್ತಿಲ್ಲ. ಇಷ್ಟೊಂದು ದೊಡ್ಡ ಜನಸಮೂಹ ಕ್ರೀಡಾಂಗಣಕ್ಕೆ ಹೇಗೆ ಬಂತು ಅನ್ನೋದೂ ಕೂಡ ಗೊತ್ತಿಲ್ಲ' ಎಂದು ಐಪಿಎಲ್ ಅಧ್ಯಕ್ಷ ಹೇಳಿದ್ದಾರೆ.
ಬಿಸಿಸಿಐ ಹಾಗೂ ಐಪಿಎಲ್ ಪಾಲಿನ ಸಂಭ್ರಮಗಳು ಮಂಗಳವಾರದ ಫೈನಲ್ ಬೆನ್ನಿಗೆ ಮುಕ್ತಾಯವಾಗಿದೆ ಎಂದಿದ್ದಾರೆ."ಇದನ್ನು ಹೇಗೆ ಮುಂದುವರಿಸಬೇಕು ಎಂಬುದು ಆಯಾ ಫ್ರಾಂಚೈಸಿಗೆ ಬಿಟ್ಟದ್ದು. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಅಲ್ಲಿದ್ದರು. ಶಿಷ್ಟಾಚಾರ ಜಾರಿಯಲ್ಲಿತ್ತು" ಎಂದು ಧುಮಾಲ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಂಡವನ್ನು ಸನ್ಮಾನಿಸಲು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸಮೂಹ ಜಮಾಯಿಸಿದ ನಂತರ ಗೊಂದಲ ಶುರುವಾಯಿತು.
ಗಾಯಗೊಂಡು ಪ್ರಜ್ಞಾಹೀನರಾದ ಜನರನ್ನು ಪೊಲೀಸರು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯೋತ್ಸವ ವೀಕ್ಷಿಸಲು ಬಂದಿದ್ದ ಅನೇಕ ಜನರು ಕಾಲ್ತುಳಿತದ ನಡುವೆ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. "ಜನದಟ್ಟಣೆಗೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಶ್ರೀ ಶಿವಕುಮಾರ್ ಹೇಳಿದರು. "ನಾವು 5,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿದ್ದೇವೆ. ಇದು ಯುವ ಉತ್ಸಾಹಭರಿತ ಗುಂಪು, ನಾವು ಅವರ ಮೇಲೆ ಲಾಠಿ ಪ್ರಹಾರ ಮಾಡಲು ಸಾಧ್ಯವಿಲ್ಲ." ಎಂದಿದ್ದಾರೆ.
