ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಸರ್ವರ್‌ ಸಮಸ್ಯೆ ಕಾಡಿದೆ. ಹಾಗಂತ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿಂತಿಲ್ಲ. ಪ್ರತಿದಿನ ಲಕ್ಷಾಂತರ ಜನರು ಅರ್ಜಿ ಹಾಕುತ್ತಿದ್ದಾರೆ. ನಮಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲವಾದಲ್ಲಿ, ಇಲ್ಲಿದೆ ನೋಡಿ ಸುಲಭ ಮಾರ್ಗ. 

ಬೆಂಗಳೂರು (ಜೂ.22): ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ ಸೇವಾಸಿಂಧು ವೆಬ್‌ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಹೇಳಿದೆ. ಇಲ್ಲಿ ಮುಖ್ಯವಾಗಿ ಒಂದು ವಿಚಾರ ತಿಳಿಸಬೇಕು. ಇಲ್ಲಿವರೆಗೂ ಇದ್ದ ಸೇವಾಸಿಂಧು ವೆಬ್‌ಸೈಟ್‌ (https://sevasindhu.karnataka.gov.in/Sevasindhu/Kannada?ReturnUrl=%2F) ನಲ್ಲಿ ನಿಮಗೆ ಗೃಹಜ್ಯೋತಿಯ ಲಿಂಕ್‌ ಸಿಗೋದಿಲ್ಲ. ಈ ಲಿಂಕ್‌ಅನ್ನು ದಾಖಲಿಸಿದ ತಕ್ಷಣವೇ ನಿಮಗೆ 'ಗೃಹಜ್ಯೋತಿ ಯೋಜನೆಯು ಈಗ ಪ್ರಾರಂಭವಾಗಿದೆ. ಕೆಳಗಿನ ಲಿಂಕ್‌ ಬಳಸಿ ನೀವು ಅರ್ಜಿ ಸಲ್ಲಿಸಬಹುದು' ಎನ್ನುವ ಸಾಲು ಕಾಣುತ್ತದೆ. ಅದರೊಂದಿಗೆ ಲಿಂಕ್‌ ಕೂಡ ಕಾಣುತ್ತದೆ. ಸೇವಾಸಿಂಧು ವೆಬ್‌ಸೈಟ್‌ನ ಕೊನೆಯಲ್ಲಿ ಜಿಎಸ್‌ (ಗ್ಯಾರಂಟಿ ಸ್ಕೀಮ್‌) ಎನ್ನುವ ಪದ ಸೇರಿಸಿ (https://sevasindhugs.karnataka.gov.in/) ಹೊಸ ವೆಬ್‌ಸೈಟ್‌ಅನ್ನು ಸರ್ಕಾರ ಮಾಡಿದೆ. ಇದನ್ನು ಬಳಸಿಕೊಂಡು ನೀವು ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಎಂದಿನ ಸೇವಾಸಿಂಧು ವೆಬ್‌ಸೈಟ್‌ ಬಳಸಿಕೊಂಡು ಲಾಗಿನ್‌ ಮಾಡಿದರೆ ನಿಮಗೆ ಗೃಹಜ್ಯೋತಿ ಅರ್ಜಿಯ ಲಿಂಕ್‌ ಕಾಣೋದಿಲ್ಲ. ಹೊಸ ಲಿಂಕ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಲಾಗಿನ್‌ನ ಅವಶ್ಯಕತೆ ಇರೋದಿಲ್ಲ. ಹಾಗಾಗಿ ಈ ಯೋಚನೆ ಬೇಡ. ಎಲ್ಲಕ್ಕಿಂತ ಮುಖ್ಯವಾಗಿ "ಗೃಹ ಜ್ಯೋತಿ" ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೋಂದಣಿ ಮಾಡಿಕೊಳ್ಳುವುದೇ ಬಹಳ ಸುಲಭ. ಅದಕ್ಕಾಗಿ ಗಂಟೆಗಟ್ಟಲೆ ಬೆಂಗಳೂರು ಒನ್‌, ಕರ್ನಾಟಕ ಒನ್‌ ಕಚೇರಿಯಲ್ಲಿ ಕಾಯುವ ಅಗತ್ಯವೂ ಇಲ್ಲ. ಅದಲ್ಲದೆ ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲದಿರುವ ಕಾರಣ ಆ ಚಿಂತೆಯೂ ಬೇಡ.

ಹಾಗಿದ್ದರೆ ಬೇಕಾಗಿರೋದೇನು?: ವಿದ್ಯುತ್‌ ಬಿಲ್‌ನಲ್ಲಿರುವ ಅಕೌಂಟ್‌ ಐಡಿ ಅಥವಾ ಸಂಪರ್ಕ ಸಂಖ್ಯೆ (ಸಾಮಾನ್ಯವಾಗಿ 10 ನಂಬರ್‌ ಇರುತ್ತದೆ). ಆಧಾರ್‌ ಸಂಖ್ಯೆ, ಆಧಾರ್‌ ಕಾರ್ಡ್‌ನಲ್ಲಿರುವ ಮೊಬೈಲ್‌ ನಂಬರ್‌ ನಿಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುವುದು ಅಗತ್ಯ. ಈ ಮೂರು ಇದ್ದರೆ ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ. ಸ್ವಲ್ಪ ತಾಳ್ಮೆ ವಹಿಸಿ, ಸರ್ವರ್‌ಗೂ ಸಮಾಧಾನ ಮಾಡಿದರೆ ಅರ್ಜಿ ಸಲ್ಲಿಕೆ ಆಗುತ್ತದೆ.

* ಇವೆಲ್ಲ ಆದ ನಂತರ (https://sevasindhugs.karnataka.gov.in/) ಈ ವೆಬ್‌ಸೈಟ್‌ ಲಿಂಕ್‌ ಅನ್ನು ನಿಮ್ಮ Internet Explorer/Google Chrome/ Mozilla Firefox App ನಲ್ಲಿ ತೆರೆಯಿರಿ.

* ನಿಮ್ಮದು ಯಾವ ಎಸ್ಕಾಂ ESCOM ಅಂತ ಟಿಕ್ 🔘 ಮಾಡಿ (ರಾಜ್ಯದಲ್ಲಿ ಒಟ್ಟು ಆರು ಎಸ್ಕಾಂಗಳಿವೆ, ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಹೀಗೆ.. ನಿಮ್ಮದು ಯಾವ ವಿಭಾಗ ಎನ್ನುವುದು ವಿದ್ಯುತ್‌ ಬಿಲ್‌ನಲ್ಲಿ ಇರುತ್ತದೆ.)

* ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ (ಟೈಪ್‌ ಮಾಡಿದ ಬಳಿಕ ಕೆಲ ಹೊತ್ತು ಕಾಯಬೇಕು. ಮನೆ ವಿಳಾಸ ತಾನಾಗಿಯೇ ನಂತರದ ಎರಡು ಬಾಕ್ಸ್‌ಗಳಲ್ಲಿ ಮೂಡುತ್ತದೆ..ವಿಳಾಸ ಬರುವವರೆಗೆ ತಾಳಿ)

* ಮುಂದೆ ಸ್ವಂತ ಮನೆಯೇ ಅಥವಾ ಬಾಡಿಗೆ ಮನೆಯೇ ಅಂತ ಟಿಕ್ ಮಾಡಿ

* ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಹಾಕಿ

* ನಂತರ ಆಧಾರ್ e - KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ.

* ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್'ನಲ್ಲಿ ಇರುವ ಫೋನ್ ನಂಬರ್'ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e - KYC‌ ಮುಕ್ತಾಯ

* 8 ನಂತರ ಮುಂದಿನ ಬಾಕ್ಸ್' ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪ್‌ ಮಾಡಿ. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.. ‌
ಅದನ್ನ ಟೈಪಿಸಿ OK ಮಾಡಿ..

* ಕೆಳಗೆ I agree ಅಂತ ಇರುವ ಡಿಕ್ಲೆರೇಶನ್'ಗೆ ಟಿಕ್‌ ಮಾಡಿ

* ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್'ನಲ್ಲಿ ಟೈಪ್ ಮಾಡಿ submit ಮಾಡಿ..

* ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ.‌.

* ನಿಮ್ಮ‌ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ (ಕೆಲವೊಮ್ಮೆ ಪಿಡಿಎಫ್‌ ಜನರೇಟ್‌ ಆಗುವುದು ತಡವಾಗುತ್ತದೆ ಅದಕ್ಕೆ ಕಾಯಿರಿ, ರಿಫ್ರೆಶ್‌ ಮಾಡಬೇಡಿ)

* ಪಿಡಿಎಫ್‌ ಜನರೇಟ್‌ ಆದ ಬಳಿಕ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು

ಗೃಹಜ್ಯೋತಿಗೆ ಸರ್ವರ್‌ ಕಾಟ: ಹೈರಾಣಾದ ಜನತೆ..!

ಇಷ್ಟೆಲ್ಲ ಮಾಡಿದರೆ, ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಕೆಲವೊಮ್ಮೆ ನಿಮ್ಮ ಅಕೌಂಟ್‌ ಐಡಿ ಹಾಕಿದಾಗ, ಈ ನಂಬರ್‌ ಇಲ್ಲ ಎಂದೂ ಹೇಳುವ ನೋಟಿಫಿಕೇಶನ್‌ ಕೂಡ ಬರುತ್ತದೆ. ಹಾಗೆ ಬಂದಾಗ ಮತ್ತೊಮ್ಮೆ ಅರ್ಜಿ ನಂಬರ್‌ಅನ್ನು ಹಾಕಿ. ಎರಡು- ಮೂರು ಸಲ ಪ್ರಯತ್ನ ಮಾಡಿದರೆ ಸಾಕು, ಸುಲಭವಾಗಿ ಅರ್ಜಿ ನೊಂದಾಯಿಸಬಹುದು.

ಗೃಹಜ್ಯೋತಿಗೆ ಸರ್ವರ್ ವಿಘ್ನ, ಕೊಡಗು ಜಿಲ್ಲೆಯಾದ್ಯಂತ ಕಾದು ಕಾದು ಸುಸ್ತಾಗಿ ವಾಪಸ್ಸಾದ ಜನರು

ಸೂಕ್ತ ಸಮಯ ಯಾವುದು: ಸರ್ವರ್‌ ಸಮಸ್ಯೆ ಇರುವುದರಿಂದ ಬೆಳಿಗ್ಗೆ 10 ಗಂಟೆಯ ಒಳಗೆ, ರಾತ್ರಿ 8ರ ನಂತರ ನೊಂದಾಯಿಸಿದರೆ‌ ಉತ್ತಮ. ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ,ಹಾಗಾಗಿ ಅವಸರದ ಅಗತ್ಯವಿಲ್ಲ.