ಗೃಹಜ್ಯೋತಿಗೆ ಸರ್ವರ್ ವಿಘ್ನ, ಕೊಡಗು ಜಿಲ್ಲೆಯಾದ್ಯಂತ ಕಾದು ಕಾದು ಸುಸ್ತಾಗಿ ವಾಪಸ್ಸಾದ ಜನರು
ಸರ್ಕಾರವೇನೋ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ತನ್ನ ಐದು ಗ್ಯಾರಂಟಿಗಳ ಪೈಕಿ ಒಂದಾದ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.19): ಸರ್ಕಾರವೇನೋ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ತನ್ನ ಐದು ಗ್ಯಾರಂಟಿಗಳ ಪೈಕಿ ಒಂದಾದ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಿದೆ. ಭಾನುವಾರದಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಆದರೆ ನಿನ್ನೆ ಭಾನುವಾರ ಶುರುವಾದ ಸರ್ವರ್ ಸಮಸ್ಯೆ ಸೋಮವಾರವೂ ಇಡೀ ದಿನವೂ ಸರಿಯಾಗಿಲ್ಲ. ಕೊಡಗು ಜಿಲ್ಲೆಯಲ್ಲೂ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು ಇಡೀ ಜಿಲ್ಲೆಯ ಗ್ರಾಮ ಒನ್, ಸೇವಾ ಕೇಂದ್ರಗಳು ಮತ್ತು ಕೆಇಬಿಗಳಲ್ಲಿ ಅರ್ಜಿ ಸಲ್ಲಿಸಲು ಜನರು ಸರದಿಯಲ್ಲಿ ಕಾದು ನಿಂತು ಸುಸ್ತಾಗುತ್ತಿದ್ದಾರೆ.
ಭಾನುವಾರವೇ ಗ್ರಾಮ ಒನ್ ಅಥವಾ ಕೆಇಬಿ ಕಚೇರಿಗಳಲ್ಲಿ ಅರ್ಜಿ ಹಾಕಲು ಜನರು ಮುಂದಾಗಿದ್ದರು. ಆದರೆ ರಜೆ ಇದ್ದಿದ್ದರಿಂದ ತಮ್ಮ ಮೊಬೈಲ್, ಕಂಪ್ಯೂಟರ್ಗಳನ್ನು ಬಳಸಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದ್ದರು. ಸರ್ವರ್ ಸಮಸ್ಯೆ ಮಾತ್ರ ಜನರನ್ನು ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ ಸೋಮವಾರ ಅರ್ಜಿ ಸಲ್ಲಿಸಲು ಗ್ರಾಹಕರು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗ್ರಾಮ ಒನ್ ಮತ್ತು ವಿವಿಧ ಸೇವಾ ಕೇಂದ್ರಗಳಿಗೆ ಆಗಮಿಸಿದ್ದರು. ಅರ್ಜಿ ಸಲ್ಲಿಸಲು ಬಂದವರಿಗೆ ಸರ್ವರ್ ಅಡ್ಡಿಯುಂಟು ಮಾಡಿತ್ತು.
ವಿಶ್ವದಲ್ಲಿಯೇ ಅತೀ ಅಪರೂಪ ಪ್ರಕರಣ, 30 ವರ್ಷದ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಕಿಡ್ನಿ ಕಸಿ
ಸರ್ಕಾರದ ಈ ಯೋಜನೆಗೆ ಜನರೇನೋ ಅರ್ಜಿಸಲು ಕಾತರರಾಗಿ ಗ್ರಾಮೀಣ ಭಾಗಗಳಿಂದಲೂ ಬಂದು ಸರದಿಯಲ್ಲಿ ನಿಂತು ತುಂಬಾ ಸಮಯದವರೆಗೆ ಕಾದು ನಿಂತಿದ್ದರೂ. ಆದರೆ ಸರ್ವರ್ ತೀರಾ ನಿಧಾನವಾಗಿರುವುದರಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಅರ್ಜಿ ಸಲ್ಲಿಕೆಗೆ ತುಂಬಾ ಜನರು ಬಂದರೆ ನೂಕುನುಗ್ಗಲಾಗಬಹುದೆಂದು ಸಾಕಷ್ಟು ಜನರು ಸರದಿಯಲ್ಲಿ ಬಂದು ನಿಂತಿದ್ದರು. ಬೆಳಿಗ್ಗೆ ಒಂಭತ್ತು ಗಂಟೆಯಿಂದ 11 ಗಂಟೆಯವರೆಗೆ ಅಂದರೆ ಒಂದುವರೆ ಗಂಟೆಯವರೆಗೆ ಕಾದು ನಿಂತರೂ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.
ಈ ಕುರಿತು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಗ್ರಾಮೀಣ ಭಾಗಗಳಿಂದ ಬಂದಿದ್ದ ಜನರು ಸರ್ಕಾರವೇನೋ ಒಳ್ಳೆಯ ಕಾರ್ಯಕ್ರಮ ಜಾರಿ ಮಾಡಿದೆ. ಅರ್ಜಿ ನೋಂದಣಿ ಬೇಗ ಆಗಬಹುದೆಂದು ಬೆಳಿಗ್ಗೆಯೇ ಕನಿಷ್ಠ ಉಪಹಾರವನ್ನೂ ಸೇವಿಸದೆ ಕೇಂದ್ರಗಳಿಗೆ ಬಂದಿದ್ದೆವು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಇಷ್ಟು ತನಕ ಕಾಯ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಳೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ, ಬಿಜೆಪಿಗೆ ಶೆಟ್ಟರ್ ಟಕ್ಕರ್, ಯಾರಾಗ್ತಾರೆ ಮೇಯರ್?
ಇನ್ನು ಕೆಇಬಿ ಸಿಬ್ಬಂದಿಯನ್ನು ಮಾತನಾಡಿಸಿದರೆ ಅರ್ಜಿ ಸಲ್ಲಿಸಲು ನಾವು ಬೆಳಿಗ್ಗೆಯಿಂದ ಪ್ರಯತ್ನಿಸುತ್ತಿದ್ದೇವೆ. ಒಂಭತ್ತುವರೆಯಿಂದ ಇದುವರೆಗೆ ಒಂದೇ ಒಂದು ಅರ್ಜಿ ಸಲ್ಲಿಸಲು ಮಾತ್ರ ಸಾಧ್ಯವಾಗಿದೆ. ಅದು ಕೂಡ ಆಧಾರ್ ಕಾರ್ಡ್ ಪರಿಶೀಲನೆ ಆಗದೆ ಅರ್ಜಿ ಪೂರ್ಣಗೊಂಡಿಲ್ಲ. ಇಲ್ಲಿ ಜನರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಏನು ಮಾಡಬೇಕೆಂಬುದು ನಮಗೂ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇವಲ ಮಡಿಕೇರಿಯಷ್ಟೇ ಅಲ್ಲ, ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಕೇಂದ್ರಗಳು ಮತ್ತು ಎಲ್ಲಾ ಹೋಬಳಿ ಕೇಂದ್ರಗಳ ಗ್ರಾಮ ಒನ್, ನಾಡಕಚೇರಿ ಸೇರಿದಂತೆ ಎಲ್ಲೆಡೆ ಜನರು ಗೃಹಜ್ಯೋತಿ ಯೋಜನೆಗಾಗಿ ಅರ್ಜಿಸಲು ಮುಂದಾಗಿದ್ದರು. ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆಯಿಂದ ಜನರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಉತ್ತಾ ಬೇಸರದಿಂದ ವಾಪಸ್ಸಾದರು.