ಉಡುಪಿ ಕೃಷ್ಣಮಠದಲ್ಲಿ ಇಂದಿನಿಂದ 3 ದಿನ ಎಐಒಸಿ ಸಮ್ಮೇಳನ; ಪೌರ್ವಾತ್ಯ ಜ್ಞಾನದ ಮೇಲೆ ಹೊಸ ಬೆಳಕು

ಉಡುಪಿಯಲ್ಲಿ ನಡೆಯುತ್ತಿರುವ 51ನೇ ಸಮ್ಮೇಳನದಲ್ಲಿ ಸುಮಾರು 20 ವಿಷಯಗಳಲ್ಲಿ ಭಾರತೀಯ ಅಧ್ಯಯನದ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ಪುತ್ತಿಗೆ ಮಠದ ಮಹತ್ವದ ಯೋಜನೆಯಾದ ಭಗವದ್ಗೀತಾ ಅಭಿಯಾನಕ್ಕೆ ವಿಶೇಷ ಒತ್ತು ನೀಡಿ ಹೊಸ ಪ್ರಬಂಧಗಳು ಮಂಡನೆಗೊಳ್ಳುತ್ತಿವೆ.

AIOC conference festival of knowledge in udupi Krishna Math from today rav

- ಜಿ.ಪಿ.ಪ್ರಭಾಕರ ತುಮರಿ

ಆಲ್ ಇಂಡಿಯಾ ಓರಿಯಂಟಲ್ ಕಾನ್ಫರೆನ್ಸ್‌ನ (ಎಐಒಸಿ) 51ನೇ ಸಮ್ಮೇಳನ ಅಕ್ಟೋಬರ್ 24ರಿಂದ 26ರವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿದೆ. ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ (ಬಿವಿಪಿ), ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. (ಸಿ.ಎಸ್.ಯು) ಜೊತೆ ಸೇರಿ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಎಐಒಸಿ ಈ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನ ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ. ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು ಇದರಲ್ಲಿ ಭಾಗವಹಿಸುತ್ತಾರೆ.

ಎಐಒಸಿ ಹಿನ್ನೆಲೆ ಮತ್ತು ಉದ್ದೇಶ

ಭಾರತೀಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳ ಬೆಳವಣಿಗೆ ಮತ್ತು ರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಎಐಒಸಿ ಸುದೀರ್ಘ ಇತಿಹಾಸ ಹೊಂದಿದೆ. ಎಐಒಸಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 1919ರಲ್ಲಿ ಆರಂಭಗೊಂಡರೂ ಅದರ ಮೂಲವಾದ ಇಂಟರ್ನ್ಯಾಷನಲ್ ಕಾಂಗ್ರೆಸ್‌ ಆಫ್ ಒರಿಯಂಟಲಿಸ್ಟ್ (ಐಸಿಒ) ಮೊದಲ ಸಭೆ 1873ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಿತು. ಪೂರ್ವ ದೇಶಗಳ, ಮುಖ್ಯವಾಗಿ ಭಾರತದ ಕಲೆ, ಪರಂಪರೆ, ತತ್ವಜ್ಞಾನದ ಕುರಿತು ಇರುವ ಆಸಕ್ತಿಯಿಂದ ಆರಂಭಗೊಂಡಿದ್ದ ಪಶ್ಚಿಮದ ದೇಶಗಳ ಈ ಅಧ್ಯಯನ ಮೊದಲು ವಿದೇಶಗಳಲ್ಲೇ ನಡೆದರೂ ಆಕ್ಸಫರ್ಡ್‌ನ ಸಂಸ್ಕೃತ ವಿದ್ವಾಂಸರಾದ ಪಂಡಿತ್ ಶ್ಯಾಮಜಿ ಕೃಷ್ಣ ವರ್ಮಾ ಭಾರತದಲ್ಲೇ ಇದು ಮುಖ್ಯವಾಗಿ ನಡೆಯಬೇಕು ಎಂಬ ಆಗ್ರಹ ಮಾಡಿದರು. ಬಳಿಕ ಭಾರತದಲ್ಲೇ ಮುಂದೆ ಈ ಸಮ್ಮೇಳನ ಹೊಸ ಆಶಯದೊಂದಿಗೆ ನಡೆಯಲು ಸಾಧ್ಯವಾಯಿತು. ಹಿರಿಯ ಭಾಷಾಶಾಸ್ತ್ರಜ್ಞ ಮೆಕ್ಡಾನಲ್ ಸೇರಿದಂತೆ ಹಲವರು ಇದನ್ನು ಸ್ವಾಗತಿಸಿದರು. ಮತ್ತೆ ಇದು ಕಲ್ಕತ್ತಾದಲ್ಲಿ ನಡೆಯಿತು.

ಜಾತಿಗಣತಿ ವರದಿಯಿಂದ ವೈಷಮ್ಯ ಸೃಷ್ಟಿ ಸಾಧ್ಯತೆ: ಪೇಜಾವರ ಶ್ರೀ

ಸ್ವಾತಂತ್ರ್ಯ ಪೂರ್ವದಿಂದಲೇ ಭಾರತೀಯ ಜ್ಞಾನ ಪರಂಪರೆಯ ಸಂಶೋಧನೆ ಸಂರಕ್ಷಣೆಯಲ್ಲಿ ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಬಿಒಆರ್‌ಇ) ಸಂಸ್ಥೆಯ ಪಾತ್ರ ಸರ್ವವಿದಿತ. ಇದರ ಅಂಗವಾಗಿ ಎಐಒಸಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿತು. ಭಾರತೀಯ ಜ್ಞಾನ ಮಾತ್ರವಲ್ಲ ಯಾವುದೇ ಪೌರ್ವಾತ್ಯ ಪಾರಂಪರಿಕ ಜ್ಞಾನವನ್ನು ಪರಿಶೋಧಿಸುವ ಉದ್ದೇಶವನ್ನು ಇದು ಹೊಂದಿದೆ.

ಭಾರತೀಯ ಜ್ಞಾನಪರಂಪರೆ ಪ್ರಚಾರ

ಎಐಒಸಿ ಭಾರತೀಯ ಜ್ಞಾನಪರಂಪರೆಯನ್ನು ವಿಶ್ವದಾದ್ಯಂತ ಪ್ರಚಾರ, ಪ್ರಸಾರ ಮಾಡಲು ಪ್ರಯತ್ನಿಸುತ್ತಿದೆ. ಓರಿಯಂಟಲ್ (ಪ್ರಾಚ್ಯ) ಅಧ್ಯಯನಕ್ಕೆ ಪಾಶ್ಚಾತ್ಯ ಪ್ರಣೀತ ಕಾರ್ಯವಿಧಾನಗಳೇ ಮೊದಲಿನಿಂದ ಇದ್ದರೂ ಈಗ ಪೌರಾತ್ಯ ಚಿಂತನೆಯ ಪ್ರಭಾವದಿಂದ ಸಾಕಷ್ಟು ಹೊಸ ದೃಷ್ಟಿಕೋನಗಳು ಬಂದಿವೆ. ಹೊಸ ವೈಧಾನಿಕತೆಯಲ್ಲಿ ಸಾಕಷ್ಟು ವಿಶೇಷತೆಗಳು ಒದಗಿ ಬಂದಿದೆ.

ಪಾಶ್ಚಾತ್ಯ ವೈಧಾನಿಕತೆಯನ್ನು ಹೆಚ್ಚು ಬಳಸುತ್ತಿದ್ದರಿಂದ ಅದು ಅಪೂರ್ಣ ಎನಿಸುತ್ತಿತ್ತು. ಕಳೆದ ಹಲವು ದಶಕಗಳಿಂದ ಪೌರಾತ್ಯ ಚಿಂತನೆಯ ದೃಷ್ಟಿಕೋನ ಮತ್ತು ವೈಧಾನಿಕತೆಯನ್ನು ಅಳವಡಿಸಿಕೊಂಡು ಹೊಸ ಸಂಶೋಧನಾ ಮಾರ್ಗ ಕಂಡುಕೊಳ್ಳಲಾಗುತ್ತಿದೆ. ಈ ದೃಷ್ಟಿಯಿಂದ ಈಗ ಓರಿಯಂಟಲ್ ಅಧ್ಯಯನ ಸಮಗ್ರತೆಯನ್ನು ಪಡೆದುಕೊಂಡಿದೆ.

ಭಾರತೀಯ ಚಿಂತನೆಯಲ್ಲಿ ವ್ಯಕ್ತಿನಿಷ್ಠ ಗ್ರಹಿಕೆಯೇ ಮುಖ್ಯವಾದದ್ದು. ಅಂದರೆ ಸಬ್‌ಜೆಕ್ಟಿವ್‌ ಸ್ಟಡಿ ಜಾಸ್ತಿ. ಆದರೆ ಪಾಶ್ಚಾತ್ಯದಲ್ಲಿ ವಸ್ತುನಿಷ್ಠ ಅಧ್ಯಯನ ಅಂದರೆ ಆಬ್ಜೆಕ್ಟಿವ್‌ ಸ್ಟಡಿ ಪ್ರಮುಖವಾಗಿದೆ. ಈ ಎರಡನ್ನೂ ಸಮನ್ವಯಿಸಿ ಸಂಶೋಧನೆ ಮಾಡುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಎಐಒಸಿ ಹಲವು ತರಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಎಐಒಸಿ ಅಧ್ಯಯನದ ಇನ್ನೊಂದು ವಿಶೇಷತೆ ಎಂದರೆ ಹೆಚ್ಚು ಹೆಚ್ಚು ಅಂತರ್ಗತ ಆಗುವ ಅಂದರೆ ಹೆಚ್ಚು ಹೆಚ್ಚು ಜ್ಞಾನ ಪರಂಪರೆಯನ್ನು ಒಳಗೊಳ್ಳುವ ಮತ್ತು ವೈವಿಧ್ಯವನ್ನು ಅರಸುವ ಹೊಸ ಅಧ್ಯಯನ ಕ್ರಮವನ್ನು ಹೊಸ ಸಂಶೋಧಕರಲ್ಲಿ ಉತ್ತೇಜಿಸುತ್ತದೆ. ಇದರಿಂದಾಗಿ ಅನೇಕ ರೀತಿಯ ಪೌರ್ವಾತ್ಯ ಜ್ಞಾನಪರಂಪರೆಯ ಹೊಸ ಅಧ್ಯಯನಕ್ಕೆ ಅವಕಾಶ ಸಾಧ್ಯ ಆಗುತ್ತಿದೆ. ಒಂದು ಸಮಗ್ರತೆ, ಅಖಂಡತೆ ಈ ಅಧ್ಯಯನಕ್ಕೆ ಬಂದಿದೆ.

ಪ್ರಾಚೀನತೆಯ ಸಮಕಾಲೀನ ಹೊಂದಾಣಿಕೆ

ಎಐಒಸಿಯು ಹೊಂದಿರುವ ಇನ್ನೊಂದು ಹೊಸ ಸವಾಲು ಪ್ರಾಚೀನವಾಗಿರುವುದನ್ನು ಸಮಕಾಲೀನ ಸಂದರ್ಭಕ್ಕೆ ಹೊಂದಿಸುವ ಹೊಸ ಸವಾಲು. ಇಂಡಿಯಾ ಭಾರತವಾದ ಹೊಸ ಐಡೆಂಟಿಟಿ ಈಗ ನಮ್ಮ ಮುಂದಿರುವ ಆದರ್ಶ. ಈ ಗ್ರಹಿಕೆಯ ಮೂಲವನ್ನೇ ಇಟ್ಟುಕೊಂಡು ಆಧುನಿಕ ಜಗತ್ತಿನ ಸವಾಲುಗಳನ್ನು ಜೊತೆಗಿರಿಸಿಕೊಂಡೇ ಹೊಸ ಅಧ್ಯಯನ ಕ್ರಮವನ್ನು ಮಂಡಿಸಲು ಮತ್ತು ಯುವ ಸಮುದಾಯಕ್ಕೆ ಪ್ರೇರೇಪಣೆ ನೀಡಲು ಎಐಒಸಿ ಪ್ರಯತ್ನಿಸುತ್ತಿದೆ.

ಇನ್ನೊಂದು ಮುಖ್ಯವಾದ ಉದ್ದೇಶ ಅಂತರ್ಶಿಸ್ತೀಯ ಅಧ್ಯಯನಕ್ಕೆ ಪ್ರವೇಶ ಒದಗಿಸುವುದು. ಬೇರೆ ಬೇರೆ ಜ್ಞಾನ ಶಾಖೆಗಳ ಅಧ್ಯಯನದ ಹಿನ್ನೆಲೆಯಲ್ಲಿ ಮಾಡುವ ಅಧ್ಯಯನ ಸಂಶೋಧನೆ ಪಾರಸ್ಪರಿಕವಾಗಿ ಹೊಸ ಜ್ಞಾನಸೇತು ನಿರ್ಮಿಸುತ್ತದೆ. ಸಂಶೋಧನೆಗೆ ಸಮಗ್ರತೆಯನ್ನು ತಂದುಕೊಡುತ್ತವೆ. ಸಾಹಿತ್ಯ, ವಿಜ್ಞಾನ, ತತ್ವಜ್ಞಾನ, ಕಲೆ ಇವುಗಳ ನಡುವಿನ ಸಂಬಂಧಗಳ ಸೂಕ್ಷ್ಮಅಧ್ಯಯನ ಇಲ್ಲಿ ತುಂಬಾ ಮುಖ್ಯ ಎಂಬುದು ಎಐಒಸಿ ನಿಲುವು.

20 ವಿಷಯಗಳಲ್ಲಿ ಪ್ರಬಂಧ ಮಂಡನೆ

ಉಡುಪಿಯಲ್ಲಿ ನಡೆಯುತ್ತಿರುವ 51ನೇ ಸಮ್ಮೇಳನದಲ್ಲಿ ಸುಮಾರು 20 ವಿಷಯಗಳಲ್ಲಿ (ಥೀಮ್) ಭಾರತೀಯ ಅಧ್ಯಯನದ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ಈ ಸಮ್ಮೇಳನಕ್ಕೆ ಆಶ್ರಯ ನೀಡಿದ ಪರ್ಯಾಯ ಪುತ್ತಿಗೆ ಮಠದ ಮಹತ್ವದ ಯೋಜನೆಯಾದ ಭಗವದ್ಗೀತಾ ಅಭಿಯಾನಕ್ಕೆ ವಿಶೇಷ ಒತ್ತು ನೀಡಿ ಹೊಸ ಪ್ರಬಂಧಗಳು ಮಂಡನೆಗೊಳ್ಳುತ್ತಿವೆ.

ಈ ಸಮ್ಮೇಳನದಲ್ಲಿ ಇನ್ನೊಂದು ಸಹಭಾಗಿತ್ವ ವಹಿಸಿದ ಸಂಸ್ಥೆ ಭಾರತೀಯ ವಿದ್ವತ್ ಪರಿಷತ್ (ಬಿವಿಪಿ) ಭಾರತೀಯ ಶಾಸ್ತ್ರ ಪರಂಪರೆಯ ಅಧ್ಯಯನ, ಸಂಶೋಧನೆಗಳನ್ನು ಬೆಳೆಸುವ ದೃಷ್ಟಿಯಿಂದ 2009ರಲ್ಲಿ ಆರಂಭಗೊಂಡಿತು. ಸಕ್ರಿಯವಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡ ಈ ಸಂಸ್ಥೆ 2500ಕ್ಕೂ ಹೆಚ್ಚು ಸದಸ್ಯರನ್ನು ದೇಶ ವಿದೇಶಗಳಲ್ಲಿ ಹೊಂದಿದೆ.

ಇಡೀ ಸಮ್ಮೇಳನದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪಾತ್ರ ಅತ್ಯಂತ ಮುಖ್ಯವಾಗಿದೆ. ಸಂಪನ್ಮೂಲ ವಿದ್ವಾಂಸರು ಮತ್ತು ಒಟ್ಟು ಸಂಘಟನೆಯ ಜವಾಬ್ದಾರಿ ಹೊತ್ತಿರುವ ಸಂಸ್ಕೃತ ವಿವಿ ಇಡೀ ಮೂರು ದಿನದ ಕಾರ್ಯಕ್ರಮವನ್ನು ಸಂಯೋಜಿಸುತ್ತಿದೆ. ವಿವಿ ಕುಲಪತಿ ಡಾ। ಶ್ರೀನಿವಾಸ್ ವರಖೇಡಿ ಅವರ ಮಾರ್ಗದರ್ಶನ ಸಮ್ಮೇಳನಕ್ಕಿದೆ. ಪರಂಪರೆ ಉಳಿಸುವುದು, ರಕ್ಷಿಸುವುದು, ಪ್ರಸಾರ ಮಾಡುವುದು ಮತ್ತು ಗೌರವಿಸುವುದೇ ಎಐಒಸಿಯ ಮುಖ್ಯ ಉದ್ದೇಶ.

ಸರೋಜಾ ಭಾಟೆ ಅಧ್ಯಕ್ಷೆ

ಉಡುಪಿಯ 51ನೇ ಈ ಸಮ್ಮೇಳನದ ವಿಶೇಷತೆ ಏನೆಂದರೆ ಎರಡು ದಶಕದ ಕಾಲ ಎಐಒಸಿ ಕಾರ್ಯದರ್ಶಿಯಾಗಿದ್ದ ಸರೋಜಾ ಭಾಟೆ (ಖ್ಯಾತ ಸಂಸ್ಕೃತ ವ್ಯಾಕರಣ ವಿದುಷಿ, ಇಂಡೊಲಾಜಿಸ್ಟ್) ಈ ಸಮ್ಮೇಳನದ ಅಧ್ಯಕ್ಷರಾಗಿರುವುದು. ಮಧ್ಯಪ್ರದೇಶದ ಕಾಳಿದಾಸ ವಿವಿಯ ಕವಿತಾ ಹೊಳೆ (ಎಐಒಸಿ ಪ್ರಧಾನ ಕಾರ್ಯದರ್ಶಿ) ಹಾಗೂ ಬೆಂಗಳೂರು ಸಂಸ್ಕೃತ ವಿವಿಯ ಡಾ। ಶಿವಾನಿ ಹೀಗೆ ಹೆಚ್ಚು ಮಹಿಳಾ ವಿದ್ವಾಂಸರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯಲಿದೆ.

ವೇದ, ಇರಾನಿಯನ್, ಇಸ್ಲಾಮಿಕ್, ಅರೇಬಿಕ್ ಮತ್ತು ಪರ್ಷಿಯನ್ ಅಧ್ಯಯನ, ಶಾಸ್ತ್ರೀಯ ಸಂಸ್ಕೃತ ಭಾಷೆ, ಪಾಳಿ ಮತ್ತು ಬೌದ್ಧ ಧರ್ಮ, ಪ್ರಾಕೃತ ಮತ್ತು ಜೈನ ಧರ್ಮ, ಇತಿಹಾಸ ಪುರಾತತ್ವ ಶಾಸ್ತ್ರ ಮತ್ತು ತಾಳೆಗರಿ ಲಿಪಿ ಶಾಸ್ತ್ರ, ದ್ರಾವಿಡ ಅಧ್ಯಯನ, ತತ್ವಜ್ಞಾನ ಮತ್ತು ಧರ್ಮ, ತಂತ್ರಜ್ಞಾನ ಮತ್ತು ಕಲೆ, ಕಂಪ್ಯೂಟರ್, ಏಷ್ಯನ್ ಅಧ್ಯಯನ, ಆಧುನಿಕ ಸಂಸ್ಕೃತ, ಪುರಾಣ ಮತ್ತು ಮಹಾಕಾವ್ಯ ಪರಂಪರೆ, ಭಾರತೀಯ ಸೌಂದರ್ಯ ಶಾಸ್ತ್ರ ಮತ್ತು ಕಾವ್ಯ ಭಾರತೀಯ ಜ್ಞಾನಪರಂಪರೆ, ಇಂಡೊಲಜಿ ಮರು ಅಧ್ಯಯನ, ಭಗವದ್ಗೀತಾ ಅಧ್ಯಯನ, ಯೋಗ ಆಯುರ್ವೇದ, ವೈಷ್ಣವ ಭಕ್ತಿ ಪರಂಪರೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜನಪದ ಬುಡಕಟ್ಟು ಸಂಸ್ಕೃತಿ ಅಧ್ಯಯನ, ಶಿಕ್ಷಣ ಮತ್ತು ಮಕ್ಕಳ ಸಾಹಿತ್ಯದ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ಹಾಗೂ ಪ್ರಬಂಧ ಮಂಡನೆ ನಡೆಯುತ್ತಿದೆ.

ಕರ್ನಾಟಕದಲ್ಲೇ ಈ ಸಮ್ಮೇಳನ ನಡೆಯುವುದರಿಂದ ಕನ್ನಡ ಭಾಷೆ, ಸಂಸ್ಕೃತಿ ಸಾಹಿತ್ಯ, ಜಾನಪದ ಕುರಿತ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಮುಖ್ಯವಾಗಿ ಯುವ ವಿದ್ವಾಂಸರನ್ನು ಹಾಗೂ ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಅವರು ಸಂಶೋಧನೆಯ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳು, ಸಂಶೋಧನಾ ವಿಧಾನ, ಸಂಶೋಧನೆಯ ತಾತ್ವಿಕ ಗ್ರಹಿಕೆ ಇತ್ಯಾದಿ ವಿಷಯಗಳ ಕುರಿತು ಸಮ್ಮೇಳನದಲ್ಲಿ ಭಾಗವಹಿಸುವ ಹಿರಿಯ ಸಂಶೋಧಕರು ಮಾರ್ಗದರ್ಶನ ನೀಡಲಿದ್ದಾರೆ.

ವಿದ್ಯಾಮಾನ್ಯ ಯುವ ಪಂಡಿತ ಪರಿಷತ್ ವತಿಯಿಂದ ಗಂಭೀರ ವಿದ್ವತ್ ಚರ್ಚೆಗಳು, ಪ್ರಾಚೀನ ವಿಷಯಗಳು, ಅವುಗಳ ವಿಮರ್ಶೆ, ವಿವರಣೆ, ಹೊಸ ವ್ಯಾಖ್ಯಾನ, ವಾಕ್ಯಾರ್ಥ ಗೋಷ್ಠಿ, ವಿಶೇಷವಾಗಿ ಈ ಬಾರಿ ಯುವ ಮಹಿಳಾ ವಿದ್ವಾಂಸರೇ ನಡೆಸುವ ಕಲ್ಯಾಣಿ ಯುವ ಪಂಡಿತ ಪರಿಷತ್ ವತಿಯಿಂದ ವಾಕ್ಯಾರ್ಥ ಗೋಷ್ಠಿ ನಡೆಯಲಿದೆ. ಸಾಂಪ್ರದಾಯಿಕವಾಗಿ ಪುರುಷ ವಿದ್ವಾಂಸರೇ ನಡೆಸುತ್ತಿದ್ದ ಈ ವಾಕ್ಯಾರ್ಥ ಗೋಷ್ಠಿಯನ್ನು ಈ ಬಾರಿ ಮೊದಲ ಬಾರಿಗೆ ಉಡುಪಿಯಲ್ಲಿ ಮಹಿಳಾ ವಿದ್ವಾಂಸರು ನಡೆಸುತ್ತಿರುವುದು ವಿಶೇಷ. ಜೊತೆಗೆ ವಾದಿರಾಜ ಯುವ ಕವಿಗೋಷ್ಠಿ, ಅಷ್ಟಾವಧಾನ, ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಲವು ಹಿರಿ ಕಿರಿ ವಿದ್ವಾಂಸರ ಪುಸ್ತಕ ಬಿಡುಗಡೆಯೂ ನಡೆಯಲಿದೆ.

ರಾಮನ ಗುಣಗಳು ಮೈಗೂಡಿಸಿಕೊಂಡು ಪ್ರಜೆಗಳು ರಾಮನಾದ್ರೆ ದೇಶ ರಾಮರಾಜ್ಯ: ಪೇಜಾವರಶ್ರೀ

ಪುಸ್ತಕ ಪ್ರದರ್ಶನ ಮತ್ತು ಮಾರಾಟ

ಇನ್ನೊಂದು ಗಮನ ಸೆಳೆಯುವ ಕಾರ್ಯಕ್ರಮವೆಂದರೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ. ರಾಷ್ಟ್ರಮಟ್ಟದ ಪ್ರಖ್ಯಾತ 50ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. ಇಡೀ ಸಮ್ಮೇಳನಕ್ಕೆ ಮುಖ್ಯ ಆಶ್ರಯ ನೀಡಿರುವ ಪರ್ಯಾಯ ಪುತ್ತಿಗೆ ಮಠದ ಮಹತ್ವದ ಯೋಜನೆಯಾದ ಭಗವದ್ಗೀತಾ ಕೋಟಿಯಜ್ಞದ ಅಂಗವಾಗಿ ಭಗವದ್ಗೀತೆಯ ಕುರಿತ ಗೋಷ್ಠಿಗಳು ಮತ್ತು ಪ್ರಬಂಧ ಮಂಡನೆಗಳು ನಡೆಯಲಿವೆ.

ಉಡುಪಿ ಮತ್ತು ಕರಾವಳಿ ಭಾಗದ ಮಟ್ಟಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮ. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವ ಎಲ್ಲ ಹಿರಿ ಕಿರಿಯ ವಿದ್ವಾಂಸರಿಗೆ ವಿಮರ್ಶಕ ಸಾಹಿತಿಗಳಿಗೆ ಪ್ರಾಧ್ಯಾಪಕರಿಗೆ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಇದೊಂದು ವಿಶೇಷ ಅವಕಾಶ ಮತ್ತು ಅನುಭವ ನೀಡಲಿದೆ ಎಂಬುದು ಸಂಘಟಕರ ಆಶಯ.

Latest Videos
Follow Us:
Download App:
  • android
  • ios