ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರಿನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಪತಿಯ ಸಾವಿನ ಮರು ತನಿಖೆಗೆ ಒತ್ತಾಯಿಸಿ ಸ್ನೇಹಮಯಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪವಿತ್ರಾ ಎಂಬ ಮಹಿಳೆ ದೂರು ನೀಡಿದ್ದಾರೆ. 

ಬೆಂಗಳೂರು (ಫೆ. 22): ಮುಡಾ ಹಗರಣ ಬೆನ್ನತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ರಾಜಧಾನಿಯಲ್ಲಿ ಮತ್ತೊಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಪವಿತ್ರಾ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ಹಾಗೂ ಮೈಲಾರಪ್ಪ ಎಂಬುವವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಪತಿಯ ಸಾವಿನ ಮರು ತನಿಖೆಗೆ ಆಗ್ರಹಿಸಿ ಕಿರುಕುಳ?

ದೂರುದಾರೆ ಪವಿತ್ರಾ ಅವರ ಪತಿ ಕಳೆದ ವರ್ಷ ಆತ್ಮ1ಹತ್ಯೆ ಮಾಡಿಕೊಂಡಿದ್ದರು. ಆದರೆ, ಈ ಸಾವಿನ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪತಿಯ ಸಾವಿನ ಮರು ತನಿಖೆಗೆ ಆಗ್ರಹಿಸಿ ಸ್ನೇಹಮಯಿ ಕೃಷ್ಣ ಒತ್ತಡ ಹೇರುತ್ತಿರುವುದು ಮಾತ್ರವಲ್ಲದೆ, ಮೈಲಾರಪ್ಪ ಎಂಬುವವರ ವಿರುದ್ಧ ನೀಡಿದ್ದ ದೂರನ್ನು ವಾಪಸ್ ಪಡೆಯುವಂತೆ ತಮಗೆ ತಾಕೀತು ಮಾಡುತ್ತಿದ್ದಾರೆ ಎಂದು ಪವಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮನೆ ವಿಳಾಸಕ್ಕೆ ಪತ್ರ: ನೆಮ್ಮದಿ ಕೆಡಿಸಿದ ಸ್ನೇಹಮಯಿ?

ಸ್ನೇಹಮಯಿ ಕೃಷ್ಣ ಅವರು ಕಳೆದ ಡಿಸೆಂಬರ್ 5, 2025 ರಂದು ಪವಿತ್ರಾ ಅವರ ಮನೆ ವಿಳಾಸಕ್ಕೆ ಪತ್ರ ಬರೆದಿದ್ದರು ಎಂದು ಆರೋಪಿಸಲಾಗಿದೆ. ಈ ಪತ್ರದ ಮೂಲಕ ತಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಮತ್ತು ಇದರಿಂದ ತಮ್ಮ ಕುಟುಂಬದ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ ಎಂದು ಸಂತ್ರಸ್ತೆ ದೂರಿದ್ದಾರೆ.

ನ್ಯಾಯಾಲಯದ ಅನುಮತಿ ಮೇರೆಗೆ ಎಫ್‌ಐಆರ್

ಆರಂಭದಲ್ಲಿ ಪವಿತ್ರಾ ಅವರು ನೀಡಿದ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಕೇವಲ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈಗ ನ್ಯಾಯಾಲಯದ ವಿಶೇಷ ಅನುಮತಿಯನ್ನು ಪಡೆದು ಸ್ನೇಹಮಯಿ ಕೃಷ್ಣ ಮತ್ತು ಮೈಲಾರಪ್ಪ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಪೊಲೀಸರು ಈ ಪತ್ರದ ಮೂಲ ಮತ್ತು ದೂರಿನ ಸತ್ಯಾಸತ್ಯತೆಯ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

YouTube video player