ನಟಿ ರಮ್ಯಾ ಅವರಿಗೆ ಅಶ್ಲೀಲ  ಕಾಮೆಂಟ್‌ಗಳನ್ನು ಮಾಡಿದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ. ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಬೆಂಗಳೂರು (ಆ.2): ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆ ಮಾಡಲಾಗಿದೆ. ಈ ಪ್ರಕರಣ ಕುರಿತು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೆಂದು ನಟಿ ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ಈ ಪೋಸ್ಟ್‌ಗೆ ನಟಿ ರಮ್ಯಾಗೆ 46 ಜನ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು, ಈ ಕೇಸಿನಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಗೂ ಮಾಜಿ ಸಂಸದ ರಮ್ಯಾ ಅವರಿಗೆ ಅಶ್ಲೀಲ ಮತ್ತು ಅವಹೇಳನಕಾರಿ ಭಾಷೆ ಬಳಸಿ ಕಾಮೆಂಟ್ ಮೂಲಕ ನಿಂದನೆ ಮಾಡಿದ್ದ ಮೂವರು ಯುವಕರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ನಟಿಯ ಮಾನಹಾನಿಗೆ ಕಾರಣವಾಗುವಂತಹ ಮೆಸೇಜ್‌ಗಳನ್ನು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಸಿಸಿಬಿ, ನಿಜಕ್ಕೂ ಇದೀಗ ಅಸಲಿ ಆಟವನ್ನು ಆರಂಭಿಸಿದೆ. ನಟಿ ರಮ್ಯಾಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿ, ಪೊಲೀಸರಿಗೆ ರಮ್ಯಾ 46 ಜನರ ವಿರುದ್ಧ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಕೆಲವರು ಅಕೌಂಟ್ ಡಿಲೀಟ್ ಮಾಡಿದ್ದರು. ಆದರೆ, ಪೊಲೀಸರು ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ. ಇದೀಗ ಚಿಕ್ಕಬಳ್ಳಾಪುರದ ಗಂಗಾಧರ್ (18) ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಣ್ಣ (25) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯ ವಿವರ:

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕುರಿತಂತೆ ನಟ ದರ್ಶನ್ ಜಾಮೀನು ಅರ್ಜಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಮತ್ತು ವಾದ ವಿವಾದಗಳನ್ನು ಆಲಿಸಿದ ನಂತರ ಜಾಮೀನು ರದ್ದುಗೊಳಿಸುವಂತಹ ತೀರ್ಮಾನ ಹೊರಬೀಳುವ ಸಾಧ್ಯತೆ ಕಂಡುಬಂದಿತು. ಆದರೆ, ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ನೀಡದೇ ಆದೇಶವನ್ನು ಕಾಯ್ದಿರಿಸಿದೆ. ಈ ಬಗ್ಗೆ ನಟಿ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆಯಿದೆ ಎಂಬಾರ್ಥದಲ್ಲಿ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ನಟ ದರ್ಶನ್ ಅಭಿಮಾನಿಗಳು, ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣ ಖಾತೆಗಳಿಗೆ ಹಲವು ಅಶ್ಲೀಲ ಕಾಮೆಂಟ್‌ಗಳು ಹರಿದು ಬಿದ್ದಿದ್ದು, ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಟಿಯು ಪೊಲೀಸರ ಬಳಿ ದೂರು ನೀಡಿದ್ದರು. ದೂರಿನ ಮೇರೆಗೆ ಸಿಸಿಬಿ ಸೈಬರ್ ಕ್ರೈಂ ವಿಭಾಗ ಗಂಭೀರ ತನಿಖೆಗೆ ಮುಂದಾಗಿ, ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದ ಮೂವರನ್ನು ಗುರುತಿಸಿ ಬಂಧಿಸಿದೆ.

ಐಪಿ ಅಡ್ರೆಸ್ ಹಾಗೂ ಐಡಿ ಮೂಲಕ ಪತ್ತೆ:

ಸೈಬರ್ ವಿಶೇಷ ತಂತ್ರಜ್ಞಾನದ ನೆರವಿನಿಂದ ಆರೋಪಿಗಳ ಸೋಷಿಯಲ್ ಮೀಡಿಯಾ ಖಾತೆಗಳ ವಿಶ್ಲೇಷಣೆ ನಡೆಸಿದ ಪೊಲೀಸರು, ಅವರ ಐಪಿ ಅಡ್ರೆಸ್ ಆಧರಿಸಿ ಸ್ಥಳ ನಿಖರವಾಗಿ ಪತ್ತೆಹಚ್ಚಿದ್ದಾರೆ. ಬಂಧಿತ ಮೂವರು ಯುವಕರು ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳ ಮೂಲದವರಾಗಿದ್ದಾರೆ. ಆರೋಪಿಗಳಲ್ಲಿ ಕೆಲವರು, 'ಏನು ಮಾಡ್ತಾರೆ ನೋಡೋಣ' ಎಂದು ಖಾತೆಗಳಲ್ಲಿ ನೇರವಾಗಿ ಸವಾಲು ಹಾಕಿದ್ದರು. ಇಂತಹ ಅಸಹ್ಯ ಭಾಷೆ ಬಳಕೆ ಮಾಡಿದ ಯುವಕರಿಗೆ ಇದೀಗ ಕಾನೂನು ಬುದ್ಧಿ ಕಲಿಸಿದೆ. ಸಿಸಿಬಿ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ನಿನ್ನೆ ಸಂಜೆ ವಿಚಾರಣೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯತೆಗಾಗಿ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯವೂ ಸಕ್ರಿಯವಾಗಿದೆ. ಶೀಘ್ರದಲ್ಲೇ ಇನ್ನೂ ಹಲವರ ಬಂಧನ ಸಾಧ್ಯವಿದೆ ಎನ್ನಲಾಗಿದೆ.