ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್ ಪುತ್ರ ವಿನೀಶ್ ಇದ್ದರು ಎನ್ನಲಾದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಸ್ಥಳೀಯರು ಮತ್ತು ಕಾರಿನಲ್ಲಿದ್ದವರ ನಡುವೆ ವಾಗ್ವಾದ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಬೆಂಗಳೂರು (ಜೂ.26): ನಟ ದರ್ಶನ್ ಪುತ್ರ ವಿನೀಶ್(Actor darshan's Son vineesh) ಅವರು ಇದ್ದರು ಎನ್ನಲಾದ ಐಷಾರಾಮಿ ಕಾರು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣ(Social media)ದಲ್ಲಿ ವೈರಲ್‌(Viral) ಆಗಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟಗಾಯಗಳಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ್ಶನ್ ಪುತ್ರ ವಿನೀಶ್ ಇದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ

ಆರ್‌.ಆರ್‌.ನಗರದ ರಸ್ತೆಯಲ್ಲಿ ಹೋಗುತ್ತಿದ್ದ ಫೋರ್ಡ್ ಎಂಡೆವರ್ ಐಷಾರಾಮಿ ಕಾರು, ಮುಂಭಾಗದಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಕೆಳಗೆ ಬಿದ್ದ ದ್ವಿಚಕ್ರ ವಾಹನ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಆದರೆ ಕಾರನ್ನು ವಿನೀಶ್‌ ಚಲಾಯಿಸುತ್ತಿದ್ದರಾ ಅಥವಾ ಬೇರೆ ಯಾರಾದರೂ ಚಲಾಯಿಸುತ್ತಿದ್ದರಾ ಎಂಬುದು ಖಚಿತಪಟ್ಟಿಲ್ಲ.

ಸಾರ್ವಜನಿಕರಿಂದ ತರಾಟೆ:

ಅಪಘಾತ ಸಂಭವಿಸುತ್ತಿದ್ದಂತೆ ಕಾರನ್ನು ಸುತ್ತುವರಿದ ದ್ವಿಚಕ್ರ ವಾಹನ ಸವಾರ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಕಾರಿನಿಂದ ಇಳಿದವರು ಮತ್ತು ಸ್ಥಳೀಯರ ನಡುವೆ ರಸ್ತೆಯಲ್ಲೇ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.