- Home
- News
- State
- ಮಂತ್ರಿಗಿರಿ ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ.ಶಿವಕುಮಾರ್, ಚಕ್ರಾಯುಧ ಕೆಳಗಿಳಿಸ್ತಾರ ಕೃಷ್ಣಪ್ಪ!
ಮಂತ್ರಿಗಿರಿ ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ.ಶಿವಕುಮಾರ್, ಚಕ್ರಾಯುಧ ಕೆಳಗಿಳಿಸ್ತಾರ ಕೃಷ್ಣಪ್ಪ!
ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಮುನಿಸಿಕೊಂಡಿದ್ದ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸಮಾಧಾನಪಡಿಸಲು ಡಿ.ಕೆ. ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಸಮಾಧಾನ ತೋರಿದ ಕೃಷ್ಣಪ್ಪ ಅವರೊಂದಿಗೆ 'ಕ್ಲೋಸ್ ಡೋರ್' ಸಭೆ ನಡೆಸಿ ಚರ್ಚೆ ನಡೆಸಲಾಗಿದೆ.

ಬೆಂಗಳೂರು (ಆ.05): ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ನಾಯಕರನ್ನು ತಂಪಾಗಿಸಲು ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ/ಬದಲಾವಣೆಯ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಮುನಿಸಿಕೊಂಡಿರುವ ಬೆಂಗಳೂರಿನ ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಕಾಂಗ್ರೆಸ್‌ನ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ದಿಢೀರ್ ಭೇಟಿ ನೀಡಿ ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ.
ಮನೆಯಲ್ಲಿದ್ದರೂ ಸ್ವಾಗತಿಸಲು ಹೊರಬರದೆ ಮುನಿಸು ತೋರಿದ ಕೃಷ್ಣಪ್ಪ!
ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಹೈಕಮಾಂಡ್ ನಾಯಕರು ಆಗಮಿಸಿದ ವೇಳೆ ಮನೆಯಲ್ಲಿ ಆತಂಕ ಮತ್ತು ಅಸಮಾಧಾನದ ವಾತಾವರಣ ಎದ್ದು ಕಾಣುತ್ತಿತ್ತು. ಪ್ರಮುಖ ನಾಯಕರು ಮನೆ ಬಾಗಿಲಿಗೆ ಬಂದರೂ ಶಾಸಕ ಎಂ. ಕೃಷ್ಣಪ್ಪ ಅವರು ಹೊರಗೆ ಬಾರದೆ ತಮ್ಮ ತೀವ್ರ ಮುನಿಸನ್ನು ಪ್ರದರ್ಶಿಸಿದರು. ಕೊನೆಗೆ ಅವರ ಪುತ್ರ, ಶಾಸಕ ಪ್ರಿಯಾ ಕೃಷ್ಣ ಅವರೇ ಅತ್ಯಂತ ಬೇಸರದಿಂದಲೇ ಬಂದಂತಹ ನಾಯಕರನ್ನು ಮನೆಗೆ ಬರಮಾಡಿಕೊಂಡರು.
ಈ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ರಾಜ್ಯ ನಾಯಕರಾದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ, ಸಚಿವರಾದ ಜಮೀರ್ ಅಹಮದ್ ಖಾನ್, ಹೆಚ್.ಸಿ. ಬಾಲಕೃಷ್ಣ, ಶಾಸಕ ರಂಗನಾಥ್ ಹಾಗೂ ಎಂಎಲ್‌ಸಿ ವಿನಯ್ ಕಾರ್ತಿಕ್ ಉಪಸ್ಥಿತರಿದ್ದರು.
ಸತತ ಒಂದೂವರೆ ಗಂಟೆ ಕ್ಲೋಸ್ ಡೋರ್ ಸಭೆ!
ಕೃಷ್ಣಪ್ಪ ಅವರ ನಿವಾಸದ ಪ್ರತ್ಯೇಕ ಕೊಠಡಿಯಲ್ಲಿ ಸತತ 1.5 ಗಂಟೆಗಳ ಕಾಲ ಸುದೀರ್ಘ 'ಕ್ಲೋಸ್ ಡೋರ್' (ಬಾಗಿಲು ಮುಚ್ಚಿದ) ಚರ್ಚೆ ನಡೆಯಿತು. ಈ ಮಹತ್ವದ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕ ಎಂ. ಕೃಷ್ಣಪ್ಪ, ಶಾಸಕ ಪ್ರಿಯಾ ಕೃಷ್ಣ ಹಾಗೂ ಕೃಷ್ಣಪ್ಪ ಅವರ ಎರಡನೇ ಪುತ್ರ ಪ್ರದೀಪ್ ಮಾತ್ರ ಭಾಗವಹಿಸಿದ್ದರು. ಸಚಿವರಾದ ಜಮೀರ್ ಅಹಮದ್, ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಇತರ ನಾಯಕರು ಹೊರಗಿನ ಹಾಲ್‌ನಲ್ಲೇ ಕಾಯುತ್ತ ಕುಳಿತಿದ್ದರು.
ಸಭೆಯ ಉದ್ದಕ್ಕೂ ಎಂ. ಕೃಷ್ಣಪ್ಪ ಅವರು ತಮಗಾದ ಅನ್ಯಾಯ ಮತ್ತು ನೋವನ್ನು ನಾಯಕರ ಮುಂದೆ ತೋಡಿಕೊಂಡರು. ಬೆಂಗಳೂರಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.
ಕೃಷ್ಣಪ್ಪ ಮನೆಯಲ್ಲೇ 'ದೋಸೆ ಡಿಪ್ಲೊಮಸಿ':
ಸುದೀರ್ಘ ಸಭೆಯ ಬಳಿಕ ಶಾಸಕರ ಮುನಿಸು ತಣಿಸಲು 'ದೋಸೆ ಡಿಪ್ಲೊಮಸಿ' ತಂತ್ರ ಬಳಸಲಾಯಿತು. ಕೃಷ್ಣಪ್ಪ ಅವರ ಮನೆಯಲ್ಲೇ ನಾಯಕರು ಊಟ ಮಾಡಲು ನಿರ್ಧರಿಸಿದರು. ಪ್ರಸಿದ್ಧ ಇಂದ್ರಪ್ರಸ್ಥ ಹೋಟೆಲ್‌ನಿಂದ ವಿಶೇಷವಾಗಿ 'ಖಾಲಿ ದೋಸೆ' ತರಿಸಿ, ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲ ಅವರಿಗೆ ಕೃಷ್ಣಪ್ಪ ಉಪಚಾರ ಮಾಡಿದರು.
ಅಸಮಾಧಾನದ ನಡುವೆಯೂ ನಡೆದ ಈ ಭೋಜನ ಕೂಟವು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಹೈಕಮಾಂಡ್ ನಾಯಕರ ಭರವಸೆಯಿಂದಾಗಿ ಎಂ. ಕೃಷ್ಣಪ್ಪ ತಮ್ಮ ಪಟ್ಟು ಸಡಿಲಿಸಿ 'ಚಕ್ರಾಯುಧ' ಕೆಳಗಿಳಿಸುತ್ತಾರೆಯೇ ಅಥವಾ ತಮ್ಮ ಅಸಮಾಧಾನವನ್ನು ಮುಂದುವರಿಸುತ್ತಾರೆಯೇ ಎಂಬುದನ್ನು ಕಾಯ್ದುನೋಡಬೇಕಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಂದಿದ್ದರು. ಮಿಸ್ಟೇಕ್ ಆಗಿದೆ ಸರಿ ಮಾಡ್ತೀನಿ ಎಂದಿದ್ದಾರೆ. ಹೇಗೆ ಸರಿ ಮಾಡಿ ಕೊಡ್ತಾರೆ ಗೊತ್ತಿಲ್ಲ. ಮಿಸ್ಟೇಕ್ ಆಗಿದೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ. ನಾವು ಬೆಸ್ಟ್ ಏನು ಮಾಡೋದಕ್ಕೆ ಸಾಧ್ಯ ಅದನ್ನು ಮಾಡುತ್ತೇವೆ ಅಂದಿದ್ದಾರೆ. ಸಚಿವ ಸ್ಥಾನ ಹೊರತು ಪಡಿಸಿ ಬೇರೆ ಏನಾದ್ರು ಕೊಟ್ಟರೆ ನಿಮಗೆ ಒಪ್ಪಿಗೆ ಇದೆಯೇ ಎಂಬ ಪ್ರಶ್ನೆಗೆ ಇಲ್ಲ…, ಒಪ್ಪಿಗೆ ಇಲ್ಲ ಎಂದು ಶಾಸಕ ಕೃಷ್ಣಪ್ಪ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

