ದರ್ಶನ್ ಪುತ್ರ ವಿನೀಶ್ ಕಾರು ಚಲಾಯಿಸಿಲ್ಲ. ಬೈಕ್ ಸವಾರರ ತಪ್ಪಿನಿಂದ ಸಣ್ಣ ಅಪಘಾತವಾಗಿದೆ ಎಂದು ದರ್ಶನ್ ಪುತ್ರ ವಿನೀಶ್ ಕಾರು ಅಫಘಾತ ಪ್ರಕರಣ ಕುರಿತು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮಿ ಹೇಳಿದ್ದೇನು? 

ಬೆಂಗಳೂರು (ಜೂ.26) ನಟ ದರ್ಶನ್ (Actor Darshan Thoogudeepa) ಪುತ್ರ ವಿನೀಶ್(vineesh) ಕಾರು ಅಪಘಾತ ಪ್ರಕರಣ ಭಾರಿ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ (vijayalakshmi) ಘಟನೆ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ಬೈಕ್‌ಗೆ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಈ ಕುರಿತು ವಿಡಿಯೋಗಳು ಪೋಸ್ಟ್ ಆಗಿತ್ತು. ಅಪಘಾತ ಪ್ರಕರಣ ಕೋಲಾಹಲ ಸೃಷ್ಟಿಸುತ್ತಿದ್ದಂತೆ ವಿಜಯಲಕ್ಷ್ಮಿ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಸುಳ್ಳು ಸುದ್ದಿಗಳು,ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ ಏನು?

ಕೆಲವು ಮಾಧ್ಯಮಗಳಲ್ಲಿ ವಿನೀಶ್ ಅವರಿಗೆ ಅಪಘಾತವಾಗಿದೆ ಮತ್ತು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಎಂದು ನಾವು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ವಿಜಯಲಕ್ಷ್ಮಿ ತಮ್ಮ ಸ್ಪಷ್ಟನೆಯ ಆರಂಭದಲ್ಲೇ ಹೇಳಿದ್ದಾರೆ. ವಿನಿಶ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಮತ್ತು ಆರಾಮವಾಗಿದ್ದಾರೆ. ಘಟನೆ ನಡೆದಾಗ ಅವರು ವಾಹನವನ್ನು ಚಲಾಯಿಸುತ್ತಿರಲಿಲ್ಲ. ಎಂದಿನಂತೆ ನಮ್ಮ ಕಾರು ಚಾಲಕ ವಾಹನ ಚಲಾಯಿಸುತ್ತಿದ್ದರು. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ(Bengaluru Traffic) ಇಂತಹ ಸಣ್ಣಪುಟ್ಟ ರಸ್ತೆ ಘಟನೆಗಳು ಸಂಭವಿಸುವುದು ಅಸಹಜವೇನಲ್ಲ, ಅದೇ ರೀತಿ ಇಲ್ಲೂ ಒಂದು ಸಣ್ಣ ಘಟನೆ ನಡೆದಿದೆ. ಅಪಘಾತವಾದ ಬೈಕ್ ಬೈಕ್ ಸವಾರರು ಅದು ತಮ್ಮದೇ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಘಟನೆಗೆ ಕ್ಷಮೆಯನ್ನೂ ಕೇಳಿದ್ದಾರೆ ಎಂದು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ಬೈಕ್ ಸವಾರರ ಸುರಕ್ಷತೆ ಖಾತ್ರಿಪಡಿಸಲು ಕಾರಿನಿಂದ ಇಳಿದ ವಿನೀಶ್

ಬೈಕ್‌ನಲ್ಲಿದ್ದ ಸವಾರರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿನೀಶ್ ವಾಹನದಿಂದ ಕೆಳಗಿಳಿದಿದ್ದರು. ಆದರೆ, ದುರದೃಷ್ಟವಶಾತ್ ಇದೇ ಕ್ಷಣದ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿ ಕೆಲ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಚಾರ ಮಾಡಲಾಗಿದೆ. ಈ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ನಾವು ಸಂಕಷ್ಟದಲ್ಲಿದ್ದೇವೆ, ಮತ್ತೆ ನೋವು ಆತಂಕ ಹೆಚ್ಚಿಸಬೇಡಿ

ಒಂದು ಕುಟುಂಬವಾಗಿ ನಾವು ಈಗಾಗಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ವಿರುದ್ದ ಸುಳ್ಳು ಹಾಗೂ ಖಚಿತವಿಲ್ಲದ ಮಾಹಿತಿಗಳನ್ನು ಪ್ರಚಾರ ಮಾಡುವುದರಿಂದ ನಮ್ಮ ನೋವು ಹಾಗೂ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಅವರ ಕುಟುಂಬಕ್ಕೆ ಅನಗತ್ಯ ಮಾನಸಿಕ ಕಿರಿಕಿರಿ ಉಂಟುಮಾಡುವಂತಹ ಮಾಹಿತಿಯನ್ನು ಪ್ರಕಟಿಸುವ ಅಥವಾ ಬಿತ್ತರಿಸುವ ಮುನ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿ ನಾವು ಪ್ರತಿಯೊಬ್ಬರಲ್ಲೂ ವಿನಂತಿಸಿಕೊಳ್ಳುತ್ತೇವೆ. ಅಲ್ಲದೆ ಇಂತಹ ಸುಳ್ಳು ವರದಿಗಳನ್ನು ಯಾರೂ ನಂಬಬಾರದು ಮತ್ತು ಶೇರ್ ಮಾಡಬಾರದು ಎಂದು ನಾವು ವಿನಂತಿಸುತ್ತೇವೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದೇ ವೇಳೆ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮಾಡಲು ಮನವಿ ಮಾಡಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.