ನಟ ದರ್ಶನ್ ಮತ್ತು ಅವರ ಮಗ ವಿನೀಶ್ ನಡುವಿನ ಜಗಳದಂತೆ ಕಾಣುವ ವಿಡಿಯೋವೊಂದು ವೈರಲ್ ಆಗಿದೆ. ಆದರೆ, ಇದು 'ಡೆವಿಲ್' ಸಿನಿಮಾದ ಚಿತ್ರೀಕರಣದ ದೃಶ್ಯವಾಗಿದ್ದು, ಇದರಲ್ಲಿ ವಿನೀಶ್ ದರ್ಶನ್‌ರ ಡಬಲ್ ರೋಲ್‌ಗೆ ಡ್ಯೂಪ್ ಆಗಿ ನಟಿಸಿದ್ದಾರೆ.  

ಅಪ್ಪ ಅಂದ್ರೆ ಗೌರವ. ಅಪ್ಪ ಅಂದ್ರೆ ಭಯ. ಆದ್ರೆ ಈಗ ಹರಿದಾಡುತ್ತಿರೋ ವಿಡಿಯೋ ನೋಡಿದ್ರೆ ಅಪ್ಪ ಮಗನ ಸಂಬಂಧ ಏನಪ್ಪಾ ಅನ್ನಿಸುತ್ತೆ. ಅದು ನಟ ದರ್ಶನ್ ಹಾಗು ಮಗ ವಿನೀಶ್ ನಡುವಿನ ಸಂಬಂಧ. ಹೌದು, ನಟ ದರ್ಶನ್​ ಕೊಳ್ಳ ಪಟ್ಟಿಗೆ ಮಗ ವಿನೀಶ್​ ಕೈ ಹಾಕಿದ್ದಾನೆ. ಇದನ್ನ ನೋಡಿದ್ರೆ ಯಾವ್ದೋ ದೊಡ್ಡ ಗಲಾಟೆ ಆಗಿದ್ಯಾ ಅನ್ನಿಸುತ್ತೆ. ಅಷ್ಟಕ್ಕೂ ದರ್ಶನ್ ಮತ್ತು ಅವರ ಮಗನ ನಡುವೆ ಏನಾಯ್ತು. ರಿವಿಲ್ ಆಗಿರೋ ಆ ವಿಡಿಯೋ ಹಿಂದಿನ ಕಥೆ ಏನು? ನೋಡೋಣ ಬನ್ನಿ.

ಅಪ್ಪ ಅಂದ್ರೆ ಮಕ್ಕಳ ಪಾಲಿಗೆ ಆತನೇ ಹೀರೋ. ವೀರ, ಶೂರ. ಆತನೇ ದೇವರು ಕೂಡ. ಅಷ್ಟೆ ಅಲ್ಲ ಹೀ ಇಸ್ ದ ರೋಲ್ ಮಾಡೆಲ್​. ಅಪ್ಪ ಹಾಕಿಕೊಟ್ಟ ದಾರಿಯಲ್ಲೇ ಮಕ್ಕಳು ಸಾಗ್ತಾರೆ ಅನ್ನೋದು ಅದೆಷ್ಟೋ ಅಪ್ಪ ಮಕ್ಕಳಲ್ಲಿ ಕಂಡಿದ್ದೇವೆ, ಕೇಳಿದ್ದೇವೆ. ಆದ್ರೀಗಾ ನಟ ದರ್ಶನ್​ ಹಾಗು ಅವರ ಮಗ ವಿನೀಶ್​​ ಇರೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಸಿಕ್ಕಾಪಟ್ಟೆ ಸೌಂಡ್​ ಮಾಡ್ತಾ ಇದೆ.

ನಟ ದರ್ಶನ್‌ಗೆ ಇದೆಂಥಾ ದುರ್ವಿಧಿ!

ನೋಡಿದ್ರಲ್ಲ. ಅಪ್ಪನ ಮೇಲೆ ಮಗ ವಿನೀಶ್​​ ಹೇಗೆ ಎಗರಿ ಬಿದ್ದಿದ್ದಾನೆ ಅಂತ. ಅಪ್ಪ ಏನು ಕಮ್ಮಿ ಅಲ್ಲ. ಮಗನನ್ನ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ್ದಾರೆ. ಇದನ್ನ ನೋಡಿದ್ರೆ ಅಪ್ಪ ಮಗನ ಮಧ್ಯೆ ಏನೋ ಸರಿ ಇಲ್ಲ ಅನ್ನಿಸುತ್ತೆ ಅಲ್ವಾ? ಏನಾದ್ರು ಫ್ಯಾಮಿಲಿ ಮ್ಯಾಟರ್‌ಗೆ ಜಗಳಕ್ಕೆ ಬಿದ್ದಂತೆ ಅನ್ನಿಸುತ್ತೆ. ಆದ್ರೆ ಇಲ್ಲಿ ಅಸಲಿ ಮ್ಯಾಟರ್​​ ಬೇರೆ. ಆ ಮ್ಯಾಟರೇ ಡೆವಿಲ್ ಸಿನಿಮಾ.

ಡೆವಿಲ್ ಡಬಲ್​ ಆ್ಯಕ್ಟಿಂಗ್, ಅಪ್ಪ-ಮಗನ ಫೈಟಿಂಗ್!

ನಟ ದರ್ಶನ್ ಪುತ್ರ ವಿನೀಶ್​ ಅಪ್ಪ ಅಂತಲೂ ನೋಡದೇ ತಂದೆಯ ಕೊರಳು ಪಟ್ಟಿಗೆ ಕೈ ಹಾಕಿ ಧಮ್ಕಿ ಹಾಕಿದ್ದಾನೆ. ಆದ್ರೆ ಇದೆಲ್ಲಾ ಆಗಿರೋದು ಬಿಡುಗಡೆ ಆಗಿ ಅಭಿಮಾನಿಗಳ ಮನಸ್ಸು ಗೆದ್ದಿರೋ ಡೆವಿಲ್ ಸಿನಿಮಾಗಾಗಿ. ಡೆವಿಲ್. ನಟ ದರ್ಶನ್‌ರ ಹಿಟ್ ಸಿನಿಮಾ. ಕಳೆದ ವರ್ಷ ಬಂದ ಈ ಸಿನಿಮಾದಲ್ಲಿ ನಟ ದರ್ಶನ್ ಡಬಲ್ ರೋಲ್​ ಮಾಡಿದ್ದಾರೆ. ಈ ಡಬಲ್​ ರೋಲ್​​ನಲ್ಲಿ ಒಂದ್ ಕಡೆ ದರ್ಶನ್ ಇದ್ರೆ, ಮತ್ತೊಂದು ಕಡೆ ಡ್ಯೂಪ್​ ಆಗಿ ನಿಂತಿದ್ದು ದರ್ಶನ್ ಮಗ ವಿನೀಶ್. ಆ ವಿಡಿಯೋ ಈಗ ರಿವಿಲ್ ಆಗ್ತಾ ಇದೆ..

ದರ್ಶನ್‌ರ ಡಬಲ್ ರೋಲ್‌ನ ಡ್ಯೂಪ್‌ಗೆ ಬೇರೆಯವರದನ್ನ ಬಳಸಿಕೊಳ್ಳೋದಕ್ಕೆ ಹುಡುಕಾಟ ಆಗಿತ್ತು. ಆದ್ರೆ ಡೆವಿಲ್​ ಸೆಟ್‌ಗೆ ಬಂದು ಹೋಗುತ್ತಿದ್ದ ದರ್ಶನ್​ ಮಗನನ್ನ ನೋಡಿದ ನಿರ್ದೇಶನ ಪ್ರಕಾಶ್,​ ದರ್ಶನ್​ ಬಳಿ ಮಗನನ್ನ ಡ್ಯೂಪ್​​ ನಲ್ಲಿ ಬಳಸಿಕೊಳ್ಳೋಕೆ ಕೇಳಿದ್ದಾರೆ. ದರ್ಶನ್ ಹಿಂದೆ ಮುಂದೆ ಯೋಚನೆ ಮಾಡದೇ ಓಕೆ ಅಂದಿದ್ದಾರೆ. ಅದರ ಪರಿಣಾಮವೇ ದರ್ಶನ್​ ಕೊರಳ ಪಟ್ಟಿಗೆ ಮಗ ವಿನೂಶ್ ಕೈ ಹಾಕೋ ಹಾಗಾಗಿದೆ.

ಅಪ್ಪನ ಎತ್ತರಕ್ಕೆ ಬೆಳೆದು ನಿಂತ ಮಗ ವಿನೀಶ್​!

ತಂದೆಯ ಕಾಲರ್‌ಗೆ ಮಗ ಕೈ ಹಾಕ್ತಾನಾ? ಈ ರೀತಿಯೂ ನಡೆಯುತ್ತಾ? ಅಂತ ಒಂದಷ್ಟು ಅಚ್ಚರಿ ಮೂಡುತ್ತೆ. ಆದ್ರೆ ಇದಕ್ಕೆ ಕಾರಣ ನಟ ದರ್ಶನ್​ ತನ್ನ ಮಗನಿಗೆ ಭವಿಷ್ಯವನ್ನ ಹುಡುಕೋಕೆ ಸಜ್ಜಾಗಿದ್ದಾರೆ ಅನ್ನಿಸುತ್ತೆ. ಯಾಕಂದ್ರೆ ನಟ ದರ್ಶನ್​ ಪುತ್ರ ವಿನೀಶ್ ದರ್ಶನ್​ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ದರ್ಶನ್‌ರ ಹಾಗೆ 6.3 ಅಡಿ ಎತ್ತರದ ನಿಲುವು ಅದೇ ದೇಹದಾಡ್ಯ ವಿನೀಶ್‌ಗೆ ಇದೆ.

ಕನ್ನಡದ ಚಿತ್ರರಂಗದಲ್ಲಿ ಈಗಾಗ್ಲೆ ಮೂರನೇ ತಲೆಮಾರಿನ ಟ್ರೆಂಡ್ ನಡೀತಾ ಇದೆ. ಅವರೆಲ್ಲಾ ಅವರವರ ಭವಿಷ್ಯವನ್ನ ಹುಡುಕುತ್ತಿದ್ದಾರೆ. ದರ್ಶನ್​ ಮಗ ತೆರೆ ಮರೆಯ ತಯಾರಿ ನೋಡುತ್ತಿದ್ರೆ ಇವನೂ ಬಣ್ಣ ಹಚ್ಚುತ್ತಾನೆ ಅನ್ನಿಸುತ್ತೆ. ತೂಗುದೀಪ ಕುಟುಂಬದ ಎರಡನೇ ತಲೆಮಾರು ದರ್ಶನ್ ಹಾಗು ದಿನಕರ್ ಭದ್ರ ಬುನಾದಿ ಹೂಡಿದ್ದಾರೆ. ಇದರ ಮಧ್ಯೆ ದರ್ಶನ್​ ಅಕ್ಕನ ಮಗ ಚಂದನ್​​ ಕೂಡ ಬೆಳ್ಳಿತೆರೆಗೆ ಬರೋದಕ್ಕೆ ರೆಡಿಯಾಗಿದ್ದಾರೆ.

ಚಂದನ್​​ರನ್ನ ದಿನಕರ್ ತೂಗುದೀಪ್​​​ ಲಾಂಚ್​ ಮಾಡುತ್ತಿದ್ದಾರೆ. ಈಗ ವಿನೀಶ್‌ನ ನೋಡುತ್ತಿದ್ರೆ ತಂದೆಯ ದಾರಿಯನ್ನೇ ಹಿಡಿಯುತ್ತಾನೆ ಅಂತ ಸೂಕ್ಷ್ಮವಾಗಿ ಕಾಣುತ್ತಿದೆ. ಈ ಹಿಂದೆ ಐರಾವತ ಸಿನಿಮಾದಲ್ಲಿ ಅಪ್ಪನ ಹಾಗೆ ಪೊಲೀಸ್ ಡ್ರೆಸ್​​ನಲ್ಲಿ ಅಪ್ಪನಿಗೆ ಸೆಲ್ಯೂಟ್ ಹೊಡೆದಿದ್ದ ವಿನೀಶ್​​. ಅದಾದ ಮೇಲೆ ದರ್ಶನ್​ ನಟನೆಯ ಯಜಮಾನ ಸಿನಿಮಾದಲ್ಲಿ ಮಗನ ಖದರ್​ ಅನ್ನ ದರ್ಶನ್​ ತೋರಿಸಿದ್ರು. ಅಪ್ಪನ ಹಾಗೆ ಮಗ ವಿನೀಶ್ ಆ ಸಿನಿಮಾದ ಹಾಡಿನಲ್ಲಿ ನಡೆದುಕೊಂಡು ಬಂದಿದ್ದ.

ದರ್ಶನ್​​​​​​​​ ತಂದೆ ತೂಗುದೀಪ ಶ್ರೀನಿವಾಸ್, ನಾನು ಹಿಡಿದು ದಾರಿಯನ್ನ ನನ್ನ ಮಕ್ಕಳು ಹಿಡಿಯೋದು ಬೇಡ. ನಾನು ಪಟ್ಟ ಕಷ್ಟ ಮಕ್ಕಳು ಹಿಡಿಯೋದು ಬೇಡ. ಚನ್ನಾಗಿ ಓದಿ ವಿಧ್ಯಾವಂತರಾಗ್ಲಿ, ಒಳ್ಳೆ ಕೆಲಸಕ್ಕೆ ಸೇರಲಿ ಅಂತ ಆಸೆ ಪಟ್ಟಿದ್ರು. ಆದ್ರೆ ಅದೆಲ್ಲ ಉಲ್ಟಾ ಆಯ್ತು. ದರ್ಶನ್​​ ಆಸೆಯಂತೆ ಸ್ಟಾರ್​ ಆದ್ರು. ಈಗ ಮಗನನ್ನ ಚಿತ್ರರಂಗಕ್ಕೆ ಕರೆದುಕೊಂಡು ಬರೋದಕ್ಕೆ ದರ್ಶನ್ ಆಸೆ ಪಟ್ಟಂತಿದೆ.

ಮಗನಿಗೆ ಕುದುರೆ ಸವಾರಿ ಕಲಿಸಿರೋ ಅಪ್ಪ ದರ್ಶನ್..!

ನಟ ದರ್ಶನ್ ಮಗನನ್ನ ಶೂಟಿಂಗ್ ಸೆಟ್​​ಗೆ ಕರೆದುಕೊಂಡು ಹೋಗ್ತಾ ಮಗನಿಗೆ ಸಿನಿಮಾದ ಆಗು ಹೋಗುಗಳನ್ನ ಕಷ್ಟ ನಷ್ಟಗಳನ್ನ ಗೆಲುವುಗಳನ್ನ ತೋರಿಸಿಕೊಡ್ತಾ ಇದ್ದಾರೆ. ಡೆವಿಲ್ ಶೂಟಿಂಗ್ ಸೆಟ್​​ನಲ್ಲೂ ವಿನೀಶ್ ಇದ್ದಿದ್ದನ್ನ ನೋಡ್ಬಹುದು. ಅಷ್ಟೆ ಅಲ್ಲ ಮಗನಿಗೆ ಕುದುರೆ ಸವಾರಿ ಕಲಿಸಿಕೊಟ್ಟಿದ್ದಾರೆ

ಅಷ್ಟೆ ಅಲ್ಲ ಮಗನಲ್ಲೇ ಖುಷಿ ಕಾಣೋ ನಟ ದರ್ಶನ್, ಮಗನ್ನನ ಸ್ನೇಹಿತರ ಜೊತೆ ಆಫ್​ ರೋಡ್​​ ಟ್ರಿಪ್​​ಗೆ ಕರೆದುಕೊಂಡು ಹೋಗಿದ್ರು. ದರ್ಶನ್ ತನಗಿರೋ ಎಲ್ಲಾ ಕ್ರೇಜ್​​ಗಳನ್ನ ಮಗನಿಗೂ ಕಲಿಸಿಕೊಡುತ್ತಿದ್ದಾರೆ. ಈಗ ಸಿನಿಮಾದ ಹುಚ್ಚು ವಿನಿಶ್​ನಲ್ಲೂ ಮೊಳಕೆ ಒಡೆಯೋ ಹಾಗೆ ಮಾಡಿದ್ದಾರೆ.

- ವಿಜಯ್ ಪಟೆದಾರ್​, ಏಷ್ಯಾನೆಟ್​​​​ ಸುವರ್ಣ ನ್ಯೂಸ್