ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹೊಸ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ಚಾಮರಾಜನಗರದ ಮೂಢನಂಬಿಕೆಗಳನ್ನು ತಳ್ಳಿಹಾಕಿರುವ ಅವರು, ವಾಯವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.
ಬೆಂಗಳೂರು: ಪರಿಶುದ್ಧ ಪರೀಕ್ಷಾ ವ್ಯವಸ್ಥೆ ತರುವ ಮೂಲಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ(ಕೆಪಿಎಸ್ಸಿ) ಹೊಸ ರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿ, ಕೆಪಿಎಸ್ಸಿ ಹಗರಣ ಸಂಬಂಧ ನಮ್ಮ ಪೊಲೀಸ್ ಅಧಿಕಾರಿಗಳು ಮತ್ತು ಇ.ಡಿಯಿಂದ ತನಿಖೆ ನಡೆಯುತ್ತಿದೆ. ಈ ವೇಳೆ ಕೆಲ ವಿಚಾರಗಳು ನನ್ನ ಗಮನಕ್ಕೆ ಬಂದಿದ್ದರಿಂದ ಎಲ್ಲಾ ಸತ್ಯಾಂಶಗಳು ಹೊರ ಬರಬೇಕು ಎನ್ನುವ ಕಾರಣಕ್ಕೆ ಆರೋಪಿ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಅವರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದೇನೆ ಎಂದರು.
ಸರ್ಕಾರಿ ಹುದ್ದೆಗೇರಬೇಕೆಂದು ನಮ್ಮ ಮಕ್ಕಳು ಕಷ್ಟಪಟ್ಟು ಓದಿರುತ್ತಾರೆ, ಆದರೆ, ಪ್ರಭಾವ, ದುಡ್ಡು, ಕಾಸು ವ್ಯವಹಾರಗಳಿಗೆ ಅವಕಾಶ ನೀಡಿದರೆ ಸರಿ ಇರಲ್ಲ. ಈ ಹಿಂದೆಯೂ ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರಿಂದ ಸಾಕಷ್ಟು ಅವಾಂತರಗಳನ್ನು ನೋಡಿದ್ದೇವೆ. ಹಾಗಾಗಿ ಇದೆಲ್ಲವನ್ನೂ ಸರಿಪಡಿಸಬೇಕು, ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿದ್ದೇವೆ ಎಂದರು.
ಸಮಿತಿಗೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ಶಿಫಾರಸು ಸಲ್ಲಿಸಲು ಹೇಳಿದ್ದೇವೆ. ರಾಷ್ಟ್ರಮಟ್ಟದಲ್ಲೂ ಸಾಕಷ್ಟು ಪ್ರಯತ್ನಗಳು ನಡೆದಿವೆ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರೂ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಸಾಕಷ್ಟು ಸಲಹೆ, ಸೂಚನೆ ನೀಡಿದ್ದಾರೆ. ಪರಿಶುದ್ಧ ಪರೀಕ್ಷಾ ವ್ಯವಸ್ಥೆ ಮೂಲಕ ಕೆಪಿಎಸ್ಸಿಗೆ ಹೊಸ ರೂಪ ನೀಡಲು ಆಲೋಚನೆ ನಡೆಸಿದ್ದೇವೆ. ನಾನು ಮತ್ತು ಪ್ರಿಯಾಂಕ್ ಖರ್ಗೆ ಪಾರದರ್ಶಕವಾಗಿ ಹೇಗೆ ಪರೀಕ್ಷೆ ನಡೆಸಬೇಕೆಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದ್ದೇವೆ ಎಂದರು.
ಕಬ್ಬು ಬೆಳೆಗಾರರ ಜತೆ ಇಂದು ಚರ್ಚೆ
ಬೆಳಗಾವಿಯಲ್ಲಿ ಸೋಮವಾರ ಮೊದಲು ರೈತರ ಜೊತೆ ಚರ್ಚೆ ಮಾಡಿ ನಂತರ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡುತ್ತೇನೆ. ಕೇಂದ್ರ ಸಚಿವರು ಕೂಡ ಭಾಗವಹಿಸುವುದಾಗಿ ಹೇಳಿದ್ದರು. ಈಗ ಭಾಗವಹಿಸುವುದಿಲ್ಲ ಎಂದಿದ್ದಾರೆ. ಪಾಪ ಅವರಿಗೆ ಬೇರೆ ಕೆಲಸ ಇರಬಹುದು. ಎಲ್ಲ ರಾಜ್ಯಗಳಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ರೈತರು ಆದಷ್ಟು ಬೇಗ ಕಬ್ಬು ಅರೆಯಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಸಂಸದರು, ಸಚಿವರು ಹಾಗೂ ಶಾಸಕರಿಗೆ ಸಭೆಯಲ್ಲಿ ಭಾಗವಹಿಸಲು ತಿಳಿಸಿದ್ದೇನೆ. ನಾವೆಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುದ್ಧವಾಗಿದ್ದಾಗ ಮೂಢನಂಬಿಕೆ ದೂರ
‘ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಬೇಡ. ನಾವು ಪರಿಶುದ್ಧವಾಗಿ ಪ್ರಾರ್ಥನೆ, ನಂಬಿಕೆಯಿಂದ ನಡೆಯುವುದು ಮುಖ್ಯ. ನಾವು ಯಾವುದೇ ತಪ್ಪು ಮಾಡದೆ ದೇವರ ಬಳಿ ಒಳ್ಳೆಯದನ್ನೇ ಪ್ರಾರ್ಥಿಸಿದರೆ ಒಳ್ಳೆಯದಾಗುತ್ತೆ. ನಾವು ಶುದ್ಧವಾಗಿದ್ದಾಗ ಮೂಢನಂಬಿಕೆ ದೂರವಾಗುತ್ತದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಾಮರಾಜನಗರದಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದರು. ಅವರು ಉತ್ತಮ ಆಡಳಿತವನ್ನೂ ನಡೆಸಿದ್ದಾರೆ. ಹೀಗಿರುವಾಗ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿಗೆ ಅರ್ಥವಿಲ್ಲ ಎಂದು ತಿಳಿಸಿದರು.
ನಾವು ಇಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪ್ರಾರ್ಥಿಸಲು ಬಂದಿದ್ದೇವೆ. ಬುದ್ಧನ ಆಚಾರ-ವಿಚಾರಗಳನ್ನು ಸ್ಮರಿಸಿ, ಅವರ ಸಂದೇಶವನ್ನು ಅರಿತುಕೊಳ್ಳುವುದು ನಮ್ಮ ಉದ್ದೇಶ. ಬುದ್ಧ ಜಗತ್ತಿಗೆ ಮಾನವೀಯತೆ, ತ್ಯಾಗ, ಶಾಂತಿ ಮತ್ತು ಅಭಿವೃದ್ಧಿಯ ಮಹತ್ವದ ಸಂದೇಶ ನೀಡಿದ್ದಾರೆ. ಈ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲವನ್ನೂ ಅನುಮಾನದಿಂದ ನೋಡುವ ಮನೋಭಾವ ಬೇಡ ಎಂದು ಹೇಳಿದರು.
ಮೀಸಲಾತಿ ಎಂದರೆ ಕೇವಲ ಅವಕಾಶವಲ್ಲ. ಅವಕಾಶಗಳಿಂದ ದೂರ ಉಳಿದವರಿಗೆ ಮುಂದೆ ಬರಲು ದಾರಿ ಮಾಡಿಕೊಡುವ ವ್ಯವಸ್ಥೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲಕವೇ ಸಮಾಜದ ಪ್ರಗತಿ ಸಾಧ್ಯ. ಬಡವರು, ಶೋಷಿತರು ಹಾಗೂ ಅವಕಾಶ ವಂಚಿತ ಸಮುದಾಯಗಳ ಬದುಕಿನಲ್ಲಿ ಬದಲಾವಣೆ ತರುವುದೇ ಸರ್ಕಾರದ ಆಶಯ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳ ಆಧಾರದ ಮೇಲೆ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಅನೇಕ ಬಡ ರೈತರು ನೇಗಿಲು ಮತ್ತು ಜಾನುವಾರುಗಳಿಲ್ಲದೆ ಕೃಷಿ ಮಾಡುವುದು ಕಷ್ಟವಾಗಿದೆ. ಅಂತಹ ರೈತರಿಗೆ ನೆರವಾಗಲು ಉಚಿತವಾಗಿ ಭೂಮಿಯನ್ನು ಉಳುಮೆ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ ‘ನೇಗಿಲಯೋಗಿ’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಕಿತ್ತೂರು ಚನ್ನಮ್ಮ ಹೆಸರಿನಲ್ಲಿ ಸಾರಿಗೆ ಸಂಸ್ಥೆ
ಕಿತ್ತೂರು ರಾಣಿ ಚನ್ನಮ್ಮನ ಶೌರ್ಯ, ಸ್ವಾಭಿಮಾನ ಹಾಗೂ ತ್ಯಾಗದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದಲ್ಲಿ ಫ್ರೀಡಂ ಪಾರ್ಕ್ ನಿರ್ಮಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಇದಕ್ಕೆ ಅನುದಾನ ಒದಗಿಸಿ, ತಕ್ಷಣವೇ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು.
ಕೋಟೆಯ ಆವರಣದಲ್ಲಿ ಇತಿಹಾಸವನ್ನು ದೃಶ್ಯಕಾವ್ಯದ ರೂಪದಲ್ಲಿ ಅನಾವರಣಗೊಳಿಸುವ ಫ್ರೀಡಂಪಾರ್ಕ್ ನಿರ್ಮಾಣಕ್ಕೆ ₹40 ಕೋಟಿ ಅಗತ್ಯವಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಿತ್ತೂರು ಕ್ಷೇತ್ರದಲ್ಲಿ ಸುಮಾರು ₹1,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡಿ ಸುಮಾರು ₹300 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು, ನೂರು ಹಾಸಿಗೆಗಳ ಆಸ್ಪತ್ರೆ, ದೇವಸ್ಥಾನಗಳ ಅಭಿವೃದ್ಧಿ ಹಾಗೂ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಕಿತ್ತೂರು ಭಾಗದ ರೈತರ ನೀರಾವರಿ ಸಮಸ್ಯೆಗೆ ಸ್ಪಂದಿಸಲು ₹520 ಕೋಟಿ ವೆಚ್ಚದ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ರಾಣಿ ಚನ್ನಮ್ಮ, ತ್ಯಾಗ, ಹೋರಾಟ ಮತ್ತು ಧೈರ್ಯದ ಪ್ರತೀಕ. ಅವಳ ಬದುಕು ಇಂದಿನ ಮಹಿಳೆಯರಿಗೆ ಮಾದರಿಯಾಗಬೇಕು. ಮಹಿಳೆಯರು ಉದ್ಯಮಿಗಳಾಗಿ, ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂದು ಅವರು ಹೇಳಿದರು.







