ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ನಡೆದ ಕೋಟ್ಯಂತರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಬಿ.ವಿ. ಗೀತಾ ಅವರನ್ನು ಬಂಧಿಸಿದ್ದಾರೆ. ಪ್ರಭಾವಿಗಳು ಹಣ ಪಡೆದು ಅನರ್ಹರಿಗೆ ನೌಕರಿ ಕೊಡಿಸಿದ ಕರಾಳ ಜಾಲ ಬಯಲಾಗಿದೆ. ಇದರಿಂದಾಗಿ ಪ್ರಾಮಾಣಿಕವಾಗಿ ಓದಿದ ಬಡ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿದೆ ಎನ್ನಲಾದ ಬೃಹತ್ ಅಕ್ರಮಗಳ ಸರಣಿ ಈಗ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭ್ರಷ್ಟಾಚಾರದ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ. ಪಶುವೈದ್ಯಕೀಯ ಅಧಿಕಾರಿಗಳು (Veterinary Officers) ಹಾಗೂ KPTCL ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಲಂಚ ಮತ್ತು ಅಂಕಗಳ ಕಳ್ಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಭಾರಿ ಕಾರ್ಯಾಚರಣೆ ನಡೆಸಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ ಬೆನ್ನಲ್ಲೇ, ಪ್ರಕರಣದ ಮತ್ತೊಬ್ಬ ಪ್ರಮುಖ ಕೊಂಡಿ, ಆಯೋಗದ ಉನ್ನತ ಅಧಿಕಾರಿ ಬಿ.ವಿ. ಗೀತಾ ಅವರನ್ನು ಸಹ ಇಡಿ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಇದರಿಂದಾಗಿ ಭ್ರಷ್ಟ ಸಾಮ್ರಾಜ್ಯದ ಹೆಬ್ಬಾಗಿಲು ಒಂದೊಂದಾಗಿ ಧೂಳಿಪಟವಾಗುತ್ತಿದೆ.

80% ಸೀಟುಗಳ ಲೂಟಿ ಮತ್ತು 'ಮಗಳ' ಅಕ್ರಮ ನೌಕರಿ ಡೀಲ್!

ಈ ಹಗರಣದ ಆಳವನ್ನು ಜಾಲಾಡಿದಾಗ ಇಡೀ ವ್ಯವಸ್ಥೆಯ ಭ್ರಷ್ಟತೆಯ ದರ್ಶನವಾಗುತ್ತದೆ. ಅರ್ಹತೆಯ ಆಧಾರದ ಮೇಲೆ ಬರಬೇಕಿದ್ದ ಶೇಕಡಾ ೮೦ ರಷ್ಟು ಹುದ್ದೆಗಳನ್ನು ಲಂಚಕೋರರು, ರಾಜಕೀಯ ಪ್ರಭಾವಿಗಳು ಮತ್ತು ಕಮಿಷನ್ ದಂದೆಕೋರರು ನುಂಗಿ ನೀರು ಕುಡಿದಿದ್ದರು. ಸ್ವತಃ ಆಯೋಗದ ಅಧ್ಯಕ್ಷ ಸ್ಥಾನದಲ್ಲಿದ್ದ ಶಿವಶಂಕರಪ್ಪ ಸಾಹುಕಾರ್, ತಮ್ಮ ಸ್ವಂತ ಮಗಳು ಸುಮಾ ಸಾಹುಕಾರ್‌ಗೆ ಇಂಡಸ್ಟ್ರಿಯಲ್ ಎಕ್ಸ್‌ಟೆನ್ಷನ್ ಆಫೀಸರ್ ಹುದ್ದೆ ಕೊಡಿಸಲು ಅಕ್ರಮ ಎಸಗಿದ್ದರು. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದರೂ, ತಮ್ಮ ಮಗಳಿಗೆ ವರ್ಷಕ್ಕೆ ಕೇವಲ ೪೦ ಸಾವಿರ ರೂಪಾಯಿ ಆದಾಯವಿದೆ ಎಂದು ಸುಳ್ಳು ಪ್ರಮಾಣಪತ್ರ ಸೃಷ್ಟಿಸಿ ನೌಕರಿ ಗಿಟ್ಟಿಸಲಾಗಿತ್ತು. ಇದಲ್ಲದೆ, ಪಶುವೈದ್ಯಕೀಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಮಧ್ಯವರ್ತಿಗಳ ಮೂಲಕ ಕೋಟಿ ಕೋಟಿ ಹಣ ಲೂಟಿ ಹೊಡೆಯಲಾಗಿತ್ತು.

ಜ್ಞಾನೇಂದ್ರ ಕುಮಾರ್ ಬಾಯಿಬಿಟ್ಟ ರಹಸ್ಯ; ಇಡಿ ಕಸ್ಟಡಿಗೆ ಬಿ.ವಿ. ಗೀತಾ!

ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ತನಿಖೆಯ ವೇಳೆ ಇಡಿ ಅಧಿಕಾರಿಗಳ ಮುಂದೆ ಸತ್ಯಗಳನ್ನು ಕಾರಿದ್ದಾನೆ. "ನಾನೊಬ್ಬನೇ ಈ ಅಕ್ರಮ ನಡೆಸಿಲ್ಲ, ನನ್ನ ಹಿಂದೆ ಬಿ.ವಿ. ಗೀತಾ, ಶಾಂತಾ ಹೊಸಮನಿ, ಎಲ್.ಪಿ.ಡಿ ಡಿಸೋಜಾ ಅವರಂತಹ ದೊಡ್ಡ ದೊಡ್ಡ ತಲೆಗಳೇ ಇವೆ" ಎಂದು ಬಾಯಿಬಿಟ್ಟಿದ್ದಾನೆ. ಅಭ್ಯರ್ಥಿಗಳ ಅಂಕಗಳನ್ನು ಗೌಪ್ಯವಾಗಿಟ್ಟುಕೊಂಡು, ಕವರ್‌ನಲ್ಲಿ ಲಕ್ಷ ಲಕ್ಷ ಲಂಚ ತಲುಪಿಸಿದವರನ್ನಷ್ಟೇ ಪಾಸ್ ಮಾಡಿಸುವ ಬೃಹತ್ ಜಾಲ ಕೆಪಿಎಸ್‌ಸಿ ಒಳಗಿತ್ತು. ಈ ಸೀಕ್ರೆಟ್ ಬಾಯಿಬೀಳುತ್ತಿದ್ದಂತೆಯೇ, ಅಕ್ಟೋಬರ್ ೬ ರಂದು ಶಿವಶಂಕರಪ್ಪ ನಿವಾಸದ ಜೊತೆಗೆ ಬಿ.ವಿ. ಗೀತಾ ಅವರ ಮನೆ ಮೇಲೆಯೂ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಅಕ್ರಮ ಹಣದ ಹರಿವು ಹಾಗೂ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಂಡು ಗೀತಾ ಅವರನ್ನು ಬಂಧಿಸಿದ್ದಾರೆ.

ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಣೆ ಯಾರು?

ಇಂದು ಶಿವಶಂಕರಪ್ಪ ಸಾಹುಕಾರ್, ಬಿ.ವಿ. ಗೀತಾ ಜೈಲು ಸೇರಿರಬಹುದು. ಇಡಿ ತನಿಖೆಯಿಂದ ತಲೆಗಳು ಉರುಳುತ್ತಿರಬಹುದು. ಆದರೆ, ಈ ಭ್ರಷ್ಟ ವ್ಯವಸ್ಥೆಯಿಂದಾಗಿ ತಮ್ಮ ಇಡೀ ಜೀವನವನ್ನೇ ಕತ್ತಲಿಗೆ ತಳ್ಳಿಕೊಂಡ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಣೆ ಯಾರು ಎನ್ನುವುದೇ ಇಂದಿನ ಅತಿದೊಡ್ಡ ಮತ್ತು ನೋವಿನ ಪ್ರಶ್ನೆ. ಯಾವುದೇ ಪರೀಕ್ಷೆ ನಡೆದರೂ ಶೇಕಡಾ 20 ರಷ್ಟು ಜಾಗ ಮಾತ್ರ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಸಿಗುತ್ತಿತ್ತು. ಇನ್ನುಳಿದ 80 ಪ್ರತಿಶತ ಅಕ್ರಮದ ಜಾಗದಲ್ಲಿ ಬರಬೇಕಾಗಿದ್ದು ಯಾವನೋ ಕೋಟ್ಯಧಿಪತಿಯ ಮಗನಲ್ಲ! ಹಳ್ಳಿಯ ಸೋರುವ ಮನೆಯಲ್ಲಿ ಕುಳಿತು, ಮಳೆಗಾಲದಲ್ಲೂ ಮೊಬೈಲ್ ಬೆಳಕಿನಲ್ಲಿ ರಾತ್ರಿ ಇಡೀ ನಿದ್ದೆಗೆಟ್ಟು ಓದುತ್ತಿದ್ದ ಬಡವನ ಮಗ ಬರಬೇಕಿತ್ತು. ಹೊಲ ಮಾರಿ, ಬಡ್ಡಿ ಸಾಲ ಮಾಡಿ ಬೆಂಗಳೂರಿಗೆ ಮಗಳನ್ನು ಓದಲು ಕಳುಹಿಸಿದ ಹೆತ್ತ ತಂದೆ-ತಾಯಿಯ ಕನಸು ನನಸಾಗಬೇಕಿತ್ತು. ತಂಗಿಯ ಮದುವೆ ಮಾಡಬೇಕು, ತಂದೆಯ ಸಾಲ ತೀರಿಸಬೇಕು ಎಂದು 25-30 ವರ್ಷ ತಮ್ಮ ಇಡೀ ಯೌವನವನ್ನೇ ಪುಸ್ತಕಗಳಿಗೆ ಮುಡಿಪಾಗಿಟ್ಟ ಯುವಕರ ನೌಕರಿ ಸಿಗಬೇಕಿತ್ತು. ಇವತ್ತು ಆ ಲಕ್ಷಾಂತರ ಯುವಕರ ವಯಸ್ಸು ಮೀರಿ ಹೋಗಿದೆ. ಅವರ ಜೀವನದ ಅಮೂಲ್ಯ ವರ್ಷಗಳನ್ನು ಮರಳಿ ಕೊಡುವವರು ಯಾರು?

ಆಕ್ರೋಶದ ಮುಖಾಮುಖಿ!

ಇಂದು ಸಾರ್ವಜನಿಕ ವಲಯದಲ್ಲಿ 'ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್' ಎಂದರೆ 'ಕರ್ನಾಟಕ ಪೈಸಾ ಸ್ಕ್ಯಾಮ್ ಕಮಿಷನ್' ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಕೆಟ್ಟುಹೋಗಿದೆ. ಇವತ್ತು ಶಿವಶಂಕರಪ್ಪ, ಬಿ.ವಿ. ಗೀತಾ ಸಿಕ್ಕಿಬಿದ್ದರು, ನಾಳೆ ಮತ್ತೊಬ್ಬರು ಅದೇ ಕುರ್ಚಿಯ ಮೇಲೆ ಬಂದು ಕೂರಬಹುದು. ಆದರೆ, ಈ ಭ್ರಷ್ಟ ಜಾಲದ ತೆರೆಯ ಮರೆಯಲ್ಲಿ ನಿಂತು ಕೋಟಿ ಕೋಟಿ ಲೂಟಿ ಹೊಡೆದ ಆ ಪ್ರಭಾವಿ ರಾಜಕಾರಣಿಗಳು ಮತ್ತು ನಾಯಕರ ಮುಖವಾಡ ಕಳಚುವವರೆಗೆ ಈ ಹೋರಾಟ ನಿಲ್ಲಬಾರದು. ಸಂಕಷ್ಟದಲ್ಲಿರುವ ಅಭ್ಯರ್ಥಿಗಳಿಗೆ ಕೇವಲ ಅಧಿಕಾರಿಗಳ ಬಂಧನದಿಂದ ಸಮಾಧಾನ ಸಿಗುವುದಿಲ್ಲ, ಬದಲಾಗಿ ಅಕ್ರಮದಿಂದ ವಂಚಿತರಾದ ಪ್ರತಿಯೊಬ್ಬ ಅರ್ಹ ಆಕಾಂಕ್ಷಿಗೂ ಸೂಕ್ತ ನ್ಯಾಯ ಸಿಗಬೇಕಿದೆ.