ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ವಿಡಿಯೋದಲ್ಲಿದ್ದ ಮಹಿಳೆ ತನಗೆ ಸಿದ್ದರಾಮಯ್ಯ ಪರಿಚಯವಿಲ್ಲ ಹಾಗೂ ಹೇಳಿಕೊಟ್ಟಂತೆ ಮಾತನಾಡಿದ್ದೆ ಎಂದು ಸಿಸಿಬಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದು, ತನಗೆ ಸ್ಟಿಂಗ್ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ, ಅವರನ್ನು ಭೇಟಿಯೂ ಆಗಿಲ್ಲ. ನನಗೆ ಏನು ಹೇಳಿಕೊಟ್ಟಿದ್ದರೋ ಅದೇ ರೀತಿ ಹೇಳಿಕೆ ನೀಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ವಿರುದ್ಧದ ಸ್ಟಿಂಗ್ ಆಪರೇಷನ್‌ ವಿಡಿಯೋದಲ್ಲಿರುವ ಸಂತ್ರಸ್ತೆ ಎನ್ನಲಾದ ಮಹಿಳೆ ಪೊಲೀಸ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ಸಿಸಿಬಿ ಪೊಲೀಸರಿಂದ ಮಹಿಳೆಯ ವಿಚಾರಣೆ

ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ವಿಡಿಯೋದಲ್ಲಿರುವ ಮಹಿಳೆಯನ್ನು ಪತ್ತೆ ಹಚ್ಚಿರುವ ಸಿಸಿಬಿ ಸೈಬರ್‌ ಕ್ರೈಂ ಪೊಲೀಸರು ನೋಟಿಸ್‌ ನೀಡಿ ಆಕೆಯ ವಿಚಾರಣೆ ನಡೆಸಿ ಹೇಳಿಕೆಯನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಯಾವಾಗ ವಿಡಿಯೋ ರೆಕಾರ್ಡ್‌ ಮಾಡಲಾಗಿತ್ತು? ವಿಡಿಯೋ ಮಾಡಿದಾಗ ನಿಮ್ಮ ಜತೆ ಯಾರ್‍ಯಾರು ಇದ್ದರು, ಏನಾದರೂ ಆಮಿಷ ಒಡ್ಡಲಾಗಿತ್ತೇ? ಯಾವ ಕಾರಣದಿಂದ ಇಂಥ ಮಾತುಗಳನ್ನು ಹೇಳಿದೆ ಎಂಬ ಹಲವು ಪ್ರಶ್ನೆಗಳನ್ನು ಸಂತ್ರಸ್ತೆಗೆ ವಿಚಾರಣೆ ವೇಳೆ ಕೇಳಲಾಗಿದೆ ಎನ್ನಲಾಗಿದೆ.

ಆಗ, ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಎಂಬುದು ನನಗೆ ಗೊತ್ತು. ಆದರೆ, ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ ಎಂದು ಆಕೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

ಕಾಂಗ್ರೆಸ್‌ ನಾಯಕಿ ಕೃಪಾ ಆಳ್ವಾ 2 ತಾಸು ವಿಚಾರಣೆ - ಅದು ಸ್ಟಿಂಗ್‌ ಅಂತ ಗೊತ್ತಿರಲಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ಪ್ರಕರಣ ಸಂಬಂಧ ಮಂಗಳೂರು ಮೂಲದ ಕಾಂಗ್ರೆಸ್ ಮುಖಂಡೆ ಹಾಗೂ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಅವರನ್ನು ಸಿಸಿಬಿಯ ಸೈಬರ್‌ ಕ್ರೈಂ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.

ಪೊಲೀಸರ ನೋಟಿಸ್‌ಗೂ ಮೊದಲೇ ತನಿಖಾಧಿಕಾರಿಗಳ ಮುಂದೆ ಹಾಜರಾದ ಕೃಪಾ ಆಳ್ವ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ.

ಸ್ಟಿಂಗ್ ಆಪರೇಷನ್‌ ಪ್ರಕರಣದಲ್ಲಿ ತಮ್ಮ ಪಾತ್ರವೇನು? ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಲಾಗಿತ್ತು? ಪ್ರಕರಣದಲ್ಲಿ ಬೇರೆಯವರ ಪಾತ್ರವೇನು? ಎಲ್ಲಿ, ಯಾವ ವರ್ಷ ಆ ವಿಡಿಯೋವನ್ನು ಮಾಡಲಾಗಿತ್ತು? ಆ ವಿಡಿಯೋದಲ್ಲಿರುವ ಸಂತ್ರಸ್ತೆ ಯಾರು ಎಂಬಿತ್ಯಾದಿ ಹಲವು ಪ್ರಶ್ನೆಗಳನ್ನು ಕೃಪಾ ಆಳ್ವಾ ಅವರಿಗೆ ತನಿಖಾಧಿಕಾರಿಗಳು ಕೇಳಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಈ ವೇಳೆ ಕೃಪಾ ಆಳ್ವ ಅವರು, ಅದು ಸ್ಟಿಂಗ್ ಆಪರೇಷನ್‌ ಅಂತ ನನಗೆ ಗೊತ್ತಿಲ್ಲ. ಮಂಗಳೂರು ಮೂಲದ ರಾಕೇಶ್ ಶೆಟ್ಟಿ ಕೆಲವರ ರಹಸ್ಯ ಬಯಲು ಮಾಡಬೇಕಿದೆ ಎಂದು ನನ್ನ ಬಳಿ ಚರ್ಚಿಸಿದರು ಅಷ್ಟೇ. ಹಾಗೆಯೇ ಸಂತ್ರಸ್ತೆ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಹೋಟೆಲ್‌ ಸಮೀಪ ರಾಕೇಶ್ ಶೆಟ್ಟಿ ಭೇಟಿಯಾಗಿ ಚರ್ಚಿಸಿದರು. ವಿಡಿಯೋ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಕೃಪಾ ಹೇಳಿಕೆ ನೀಡಿದ್ದಾಗಿ ಮೂಲಗಳು ತಿಳಿಸಿವೆ.

2 ಗಂಟೆ ಕಾಲ ವಿಚಾರಣೆ:

ಸುಮಾರು ಎರಡು ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಮತ್ತೆ ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ, ಕೃಪಾ ಆಳ್ವಾಗೆ ಪೊಲೀಸರು ನೋಟಿಸ್‌ ನೀಡಿ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇನ್ನಿಬ್ಬರ ಶೋಧ:

ಇನ್ನು ಪ್ರಕರಣ ಸಂಬಂಧ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಜೆಡಿಎಸ್ ಸಾಮಾಜಿಕ ಜಾಲತಾಣದ ಮುಖಸ್ಥ ಚಂದನ್ ಹಾಗೂ ಮೋಹನ್‌ಗೌಡ ಶೋಧ ಕಾರ್ಯ ನಡೆಯುತ್ತಿದೆ. ಮೋಹನ್ ಗೌಡ ಅವರ ನಿವಾಸಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಅವರ ಮನೆಯಲ್ಲಿದ್ದ ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಇಬ್ಬರಿಗೂ ತಾವು ಬಳಸುವ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ಸೇರಿ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದೆ. ಅಲ್ಲದೆ, ಪ್ರಕರಣದಲ್ಲಿ ಎಸ್.ಶಿವಸ್ವಾಮಿ ಎಂಬುವರ ಹೆಸರು ಕೇಳಿ ಬಂದಿದ್ದು, ಅವರಿಗಾಗಿಯೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.